‘ನಂಬರ್ ಗೇಮ್’ ಗೆಲ್ಲಲು ತೀವ್ರಗೊಂಡ ರಾಜಕೀಯ ಚಟುವಟಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Vidhanasoudha--01

ಬೆಂಗಳೂರು, ಮೇ 18- ನಾಳೆಯೇ ವಿಶ್ವಾಸಮತ ಸಾಬೀತಿಗೆ ಸುಪ್ರೀಂಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಅಧಿವೇಶನ ಕರೆಯಲು ಸೂಚನೆ ರವಾನೆಯಾಗಿದೆ. ಹಂಗಾಮಿ ಸ್ಪೀಕರ್ ನೇಮಕವನ್ನು ರಾಜ್ಯಪಾಲರು ತತ್‍ಕ್ಷಣ ಮಾಡಬೇಕಿದೆ. ಹಂಗಾಮಿ ಸ್ಪೀಕರ್ ನೇತೃತ್ವದಲ್ಲಿ ಬಹುಮತ ಸಾಬೀತು ಪ್ರಕ್ರಿಯೆ ನಡೆಯಲಿದೆ. ಈ ಎಲ್ಲ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಹಾಗೂ ವಿಧಾನಸೌಧದಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿವೆ.

ಆಪರೇಷನ್ ಕಮಲ ಭೀತಿಯಲ್ಲಿ ಹೈದರಾಬಾದ್‍ಗೆ ತೆರಳಿದ್ದ ಕಾಂಗ್ರೆಸ್-ಜೆಡಿಎಸ್ ಶಾಸಕರು ಬೆಂಗಳೂರಿಗೆ ಇಂದೇ ಹಿಂದಿರುಗಲಿದ್ದಾರೆ. ಬಿಜೆಪಿಯಲ್ಲೂ ಕೂಡ ಬಿರುಸಿನ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. 104 ಸದಸ್ಯ ಬಲ ಹೊಂದಿರುವ ಬಿಜೆಪಿ, ಬಹುಮತ ಸಾಬೀತಿಗೆ ಯಾವ ಕಸರತ್ತು ನಡೆಸಲಿದೆ ಎಂಬುದರ ಬಗ್ಗೆ ತೀವ್ರ ಕುತೂಹಲ ಮನೆ ಮಾಡಿದೆ. ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಹಕ್ಕನ್ನು ಪ್ರತಿಪಾದಿಸಲಿದೆ. ಹೇಗಾದರೂ ಮಾಡಿ ಬಹುಮತ ಸಾಬೀತು ಮಾಡಬೇಕೆಂದು ಬಿಜೆಪಿ ಪ್ರಯತ್ನ ಮುಂದುವರಿಸಿದೆ.

ತಮ್ಮ ಶಾಸಕರನ್ನು ಆಪರೇಷನ್ ಕಮಲ ಭೀತಿಗೆ ಒಳಗಾಗದಂತೆ ಕಾಂಗ್ರೆಸ್-ಜೆಡಿಎಸ್ ಮುಖಂಡರು ಕಾಯ್ದುಕೊಂಡಿದ್ದಾರೆ. ನಾಳೆ ಸಂಜೆ 4 ಗಂಟೆಗೆ ಅಧಿವೇಶನ ನಡೆಯಲಿದ್ದು, ಅಲ್ಲಿಯವರೆಗೆ ನಿರಂತರ ರಾಜಕೀಯ ಚಟುವಟಿಕೆಗಳು ಮುಂದುವರಿಯಲಿವೆ. ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಆಪ್ತರೊಂದಿಗೆ ರಾತ್ರಿಯಿಡೀ ಸಮಾಲೋಚನೆ ನಡೆಸಿ ಇಂದು ಬೆಳಗ್ಗೆ ತಮ್ಮ ಪುತ್ರನ ನಿವಾಸಕ್ಕೆ ತೆರಳಿ ಅಲ್ಲಿ ವಿಶ್ರಾಂತಿ ಪಡೆದು ತಮ್ಮ ನಿವಾಸಕ್ಕೆ ಆಗಮಿಸಿದರು.

ಈಗಷ್ಟೆ ಸುಪ್ರೀಂಕೋರ್ಟ್ ಆದೇಶ ಹೊರಬಿದ್ದಿದ್ದು, ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ತುರ್ತು ಸಭೆ ನಡೆಸಿದ್ದಾರೆ. ಪಕ್ಷದ ವರಿಷ್ಠರು, ಆಪ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಇತ್ತ ಬಹುಮತ ಸಾಬೀತಾಗದಂತೆ ನೋಡಿಕೊಳ್ಳಬೇಕೆಂದು ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಕೂಡ ಎಚ್ಚರಿಕೆಯ ಹೆಜ್ಜೆ ಇಡುತ್ತಿವೆ. ಇಂದು ಕಾಂಗ್ರೆಸ್ ಪಕ್ಷದವರು ರಾಜ್ಯಪಾಲರ ಕ್ರಮ ಖಂಡಿಸಿ ರಾಜಭವನದೆದುರು ಪ್ರತಿಭಟನೆ ನಡೆಸಿದರು.

Facebook Comments

Sri Raghav

Admin