ನಂಬಿಕೆಯ ಕನ್ನಡಿಯನ್ನು ಒಡೆಯದಿರಲಿ ನಿಮ್ಮ ಮೊಬೈಲ್

ಈ ಸುದ್ದಿಯನ್ನು ಶೇರ್ ಮಾಡಿ

mobile

ಎಲ್ಲಾ ಸಂಬಂಧಗಳು ನಂಬಿಕೆಯ ಆಧಾರದ ಮೇಲೆ ನಿಂತಿರುತ್ತವೆ. ಆ ನಂಬಿಕೆ ಎಂಬ ತಳಪಾಯದಲ್ಲಿ ಸ್ವಲ್ಪ ಏರುಪೇರಾದರೂ ಸಂಬಂಧಗಳ ಗೋಪುರ ಕುಸಿದು ಬೀಳುವುದು ಸತ್ಯ. ನಿಮ್ಮ ಸಂಗಾತಿ ಬಗ್ಗೆ ನಿಮ್ಮಲ್ಲಿ ಅನುಮಾನವೆಂಬ ವಾಸಿಯಾಗದ ಕಾಯಿಲೆ ಹುಟ್ಟಿಕೊಂಡಿತೆಂದರೆ ಅದನ್ನು ಹೊಡೆದೋಡಿಸುವುದು ಸಾಧ್ಯವಿಲ್ಲ. ಅದು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಗುತ್ತದೆ. ಸಂಬಂಧಗಳಲ್ಲಿ ಅನುಮಾನದ ಕರಿನೆರಳು ಕಂಡ ಕೂಡಲೇ ಅದನ್ನು ಆ ಕ್ಷಣವೇ ಸರಪಡಿಸಿಕೊಳ್ಳಬೇಕು, ಇಲ್ಲದಿದ್ದರೆ ಆ ಸಂಶಯದ ದಾರಿಯಲ್ಲಿ ನಿಮಗೆ ಗೊತ್ತಿಲ್ಲದೇ ನೀವೇ ನಡೆಯಲಾರಂಭಿಸುತ್ತೀರಿ. ಸಂಶಯವೆಂಬುದು ನಿಮ್ಮಿಂದ ಮಾಡಬಾರದ ಕೆಲಸಗಳನ್ನೆಲ್ಲ ಮಾಡಿಸಲಾರಂಭಿಸುತ್ತದೆ.

ಮೊದಮೊದಲು ನಿಮ್ಮ ಸಂಗಾತಿಯ ಮೊಬೈಲ್‍ನ ಇನ್‍ಬಾಕ್ಸ್, ಔಟ್‍ಬಾಕ್ಸ್, ಇನ್‍ಕಮಿಂಗ್ ಕಾಲ್, ಔಟ್‍ಗೋಯಿಂಗ್ ಕಾಲ್ ಮತ್ತು ಫೇಸ್‍ಬುಕ್ ಅಪ್‍ಡೇಟ್‍ಗಳನ್ನು ಕದ್ದು ನೋಡುವುದು. ಅವರು ಎಲ್ಲೇ ಹೋದರೂ ಅವರನ್ನು ಹಿಂಬಾಲಿಸುವುದು. ಅವರ ಪ್ರತಿಯೊಂದು ನಡವಳಿಕೆಯ ಮೇಲೆ ನಿಗಾ ಇಡುವುದು ಹೀಗೆ ಅಮೂಲ್ಯವಾದ ಸಮಯವನ್ನು ಅನುಮಾನಗಳ ಹುಡುಕಾಟದಲ್ಲೇ ಕಳೆದುಬಿಡುತ್ತೀರಿ.   ಇತ್ತೀಚೆಗಂತೂ ಮೊಬೈಲ್ ಸಂಬಂಧಗಳನ್ನು ಕತ್ತರಿಸುವ ಒಂದು ಆಯುಧವಾಗಿ ಮಾರ್ಪಟ್ಟಿದೆ. ಹೆಚ್ಚಿನ ಸಂಬಂಧಗಳು ಮೊಬೈಲ್‍ನಲ್ಲಿಯೇ ಶುರುವಾದರೆ ಅದರೆರಡರಷ್ಟು ಸಂಬಂಧಗಳು ಮೊಬೈಲ್‍ನಿಂದಲೇ ಮುರಿದುಬೀಳುತ್ತಿವೆ. ಮತ್ತೊಬ್ಬರ ಮೊಬೈಲ್‍ನ್ನು ಕದ್ದು ನೋಡುವುದು ಅಪರಾಧ ಎನ್ನಲಾಗುತ್ತದೆ. ಅಷ್ಟೇ ಅಲ್ಲ ಕಾಮನ್‍ಸೆನ್ಸ್ ಇರುವವರ್ಯಾರೂ ಬೇರೋಬ್ಬರ ಮೊಬೈಲ್‍ನ್ನು ಕದ್ದು ನೋಡುವುದಿಲ್ಲ. ಒಂದು ವೇಳೆ ಅನಿವಾರ್ಯವಾಗಿ ನೋಡಲೇಬೇಕಾಗಿ ಬಂದರೆ. ಎಸ್‍ಎಂಎಸ್ ಹಾಗೂ ಕಾಲ್‍ಲಾಗ್ ಗಳ ವಿಷಯಕ್ಕೆ ಕೈ ಹಾಕಬಾರದು. ಅದು ನಿಮಗೆ ಶೋಭೆ ತರುವುದಿಲ್ಲ.

ಕದ್ದು ನೋಡದಿರಿ ನಿಮ್ಮ ಸಂಗಾತಿ ಮೊಬೈಲ್
ಹೌದು ಅನುಮಾನ ಹುಟ್ಟೋದೇ ಸಣ್ಣ ಸಣ್ಣ ವಿಷಯಗಳಿಂದ, ಸಂಗಾತಿ ಮೇಲೆ ನಿಮ್ಮ ಅಧಿಕಾರ ಚಲಾಯಿಸುವ ಮೊದಲ ಹಂತವಾಗಿ ಅವರ ಮೊಬೈಲ್‍ಗೆ ಬಂದಿರುವ ಕರೆಗಳನ್ನು ಪರಿಶೀಲಿಸುವುದು. ಎಸ್‍ಎಂಎಸ್‍ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು. ಇದು ಯಾರ ನಂಬರ್?, ಅವರು ನಿನಗ್ಯಾಕೆ ಮೆಸೇಜ್ ಮಾಡಿದ್ದಾರೆ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ನಿಮ್ಮ ಸಂಗಾತಿಯಲ್ಲಿ ಕೇಳಬೇಕೆನಿಸುತ್ತದೆ. ಹಾಗೆ ಈ ಪ್ರಶ್ನೆಗಳನ್ನು ನೀವು ಕೇಳಿದ್ದೇ ನಿಜವಾದರೆ ನಂಬಿಕೆಯ ಕನ್ನಡಿಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ನಿಮಗೇ ಗೊತ್ತಲ್ಲ ಬಿರುಕು ಬಿಟ್ಟಿರುವ ಕನ್ನಡಿಯಲ್ಲಿ ಕಾಣೋದೆಲ್ಲ ವಿಕಾರವಾಗೇ ಇರುತ್ತೆ. ಇಷ್ಟು ಸಾಕಲ್ಲವೇ ಅನುಮಾನಕ್ಕೆ ಹಾಲೆರೆದು ಬೆಳೆಸಲು.

► Follow us on –  Facebook / Twitter  / Google+

Facebook Comments

Sri Raghav

Admin