ನಂಬಿಸಿ ಗರ್ಭಿಣಿ ಮಾಡಿ ಹೆರಿಗೆ ಬಳಿಕ ವಿವಾಹವಾಗಲು ನಿರಾಕರಿಸಿ ಗ್ರಾ.ಪಂ. ಸದಸ್ಯ ಎಸ್ಕೇಪ್
ಕಾರ್ಕಳ, ಡಿ.8-ವಿವಾಹವಾಗುವುದಾಗಿ ನಂಬಿಸಿ ಪ್ರಿಯತಮೆ ಜೊತೆ ದೈಹಿಕ ಸಂಪರ್ಕ ಬೆಳೆಸಿ ಹೆರಿಗೆಯಾದ ನಂತರ ಮದುವೆಯಾಗುವುದಿಲ್ಲ ಎಂದು ಯುವತಿಗೆ ಕೈಕೊಟ್ಟು ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಪರಾರಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರು ಗ್ರಾಮದಲ್ಲಿ ನಡೆದಿದೆ. ನೀರೆ ಗ್ರಾಮ ಪಂಚಾಯಿತಿ ಸದಸ್ಯ ಶರತ್ ಶೆಟ್ಟಿ (28) ಯುವತಿ ಕೈಗೆ ಮಗು ಕೊಟ್ಟು ಪರಾರಿಯಾಗಿರುವ ವಂಚಕ. ಈತನ ನಂಬಿಕೆ ದ್ರೋಹದಿಂದ ರೋಸಿ ಹೋದ 24 ವರ್ಷದ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಘಟನೆ ವಿವರ :
ಗ್ರಾಮ ಪಂಚಾಯಿತಿ ಸದಸ್ಯನಾಗಿರುವ ಶರತ್ ಯುವತಿಯನ್ನು ಪ್ರೀತಿಸುತ್ತಿದ್ದ. ವೃತ್ತಿಯಲ್ಲಿ ಆಟೋರಿಕ್ಷಾ ಚಾಲಕನಾಗಿದ್ದ ಆತನಿಗೆ ಯುವತಿ ಜೊತೆ ಕಳೆದ ಒಂದೂವರೆ ವರ್ಷದಿಂದ ಪರಿಚಯವಾಗಿ ಬಳಿಕೆ ಪ್ರೇಮಾಂಕುರವಾಗಿತ್ತು. ಈ ಪ್ರೀತಿ ದೈಹಿಕ ಸಂಪರ್ಕಕ್ಕೆ ತಿರುಗಿತ್ತು. ಯುವತಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಳು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಗಲು ವೇಳೆ ಆಕೆಯ ಮನೆಗೆ ತೆರಳುತ್ತಿದ್ದ ಶರತ್ ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಹೊಂದುತ್ತಿದ್ದ ಎನ್ನಲಾಗಿದೆ.
ಯುವತಿ ನ.28ರಂದು ಮಗುವಿಗೆ ಜನ್ಮ ನೀಡಿದಾಗ ಶರತ್ ಆಕೆಯನ್ನು ಮದುವೆಯಾಗಲು ನಿರಾಕರಿಸಿದ. ಅಲ್ಲದೇ ಡಿ.2ರಿಂದ ನಾಪತ್ತೆಯಾಗಿದ್ದಾರೆ. ಯುವತಿ ನೀಡಿರುವ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : Eesanje News 24/7 ನ್ಯೂಸ್ ಆ್ಯಪ್ – Click Here to Download