ನಡೆದಾಡುವ ದೇವರಿಗೆ ‘ಭಾರತ ರತ್ನ’ ಗೌರವ ನೀಡಲು ಕೇಂದ್ರ ಸರ್ಕಾರ ತೀರ್ಮಾನ…?

ಈ ಸುದ್ದಿಯನ್ನು ಶೇರ್ ಮಾಡಿ

Siddaganga-Swamiji

ಬೆಂಗಳೂರು,ಡಿ.29-ಕಾಯಕಯೋಗಿ, ತ್ರಿವಿಧ ದಾಸೋಹಿ ಹಾಗೂ ನಡೆದಾಡುವ ದೇವರು ಎಂದೇ ಭಕ್ತರಿಂದ ಕರೆಸಿಕೊಳ್ಳುವ ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರ ಸಮಾಜ ಸೇವೆಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಲಭಿಸುವ ದಿನಗಳು ಹತ್ತಿರವಾಗುತ್ತಿದೆ. ಸಾಹಿತ್ಯ, ಕ್ರೀಡೆ, ಸಮಾಜಸೇವೆ, ಪತ್ರಿಕೋದ್ಯಮ, ವಿಜ್ಞಾನ, ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಪ್ರಮುಖರಿಗೆ ಜನವರಿ 26ರಂದು ಗಣರಾಜ್ಯೋತ್ಸವ ಪ್ರಯುಕ್ತ ಕೇಂದ್ರ ಸರ್ಕಾರ ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಸನ್ಮಾನಿಸುವುದು ಸಂಪ್ರದಾಯವಾಗಿದೆ.

ಈ ಸಂದರ್ಭದಲ್ಲಿ ಸಿದ್ದಗಂಗಾ ಶ್ರೀಗಳಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಎನಿಸಿದ ಭಾರತ ರತ್ನವನ್ನು ಘೋಷಣೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಖ್ಯಾತ ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ, ಪಂಡಿತ್ ಭೀಮಸೇನ್ ಜೋಷಿ, ಬಾಹ್ಯಾಕಾಶ ವಿಜ್ಞಾನಿ ಸಿ.ಎನ್.ಆರ್. ರಾವ್ ಅವರಿಗೆ ಈ ಪ್ರಶಸ್ತಿ ಲಭಿಸಿತ್ತು. ಇದೀಗ ಕಾಯಕಯೋಗಿ ಶ್ರೀಗಳಿಗೆ ಈ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿರುವುದರಿಂದ ಭಕ್ತರ ಬಹುದಿನಗಳ ಬೇಡಿಕೆ ಈಡೇರುವ ದಿನಗಳು ಸಮೀಪಿಸಿವೆ.

ಹಲವು ದಿನಗಳ ಬೇಡಿಕೆ:
ಹಾಗೆ ನೋಡಿದರೆ ಪರಮಪೂಜ್ಯ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಶ್ರೀಗಳು ಶತಮಾನ ಪೂರೈಸಿದ ಸಂದರ್ಭದಲ್ಲೇ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕೆಂದು ಭಕ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು.  ಅದರಲ್ಲೂ ಹಿಂದು ಧರ್ಮದ ಬಗ್ಗೆ ಅಪಾರವಾದ ಅಭಿಮಾನ, ಗೌರವ, ಕಳಕಳಿ ಇಟ್ಟುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಲಿದ್ದಾರೆ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು.   ಆದರೆ ಕಳೆದ ವರ್ಷ ಈ ಪ್ರಶಸ್ತಿಯನ್ನು ಮಾಜಿ ಪ್ರಧಾನಿ ಅಜಾತಶತ್ರು ಎಂದೇ ಕರೆಯುವ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನೀಡಿ ಸನ್ಮಾನಿಸಲಾಗಿತ್ತು. ಕಳೆದ ಹಲವು ದಶಕಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, ದೇಶ ವಿದೇಶಗಳಲ್ಲೂ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಶ್ರೀಗಳಿಗೆ ಈ ಬಾರಿ ಭಾರತರತ್ನ ನೀಡಲು ಕೇಂದ್ರ ಮುಂದಾಗಿದೆ.

ರಾಜಕೀಯ ಲೆಕ್ಕಾಚಾರ:
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಸಿದ್ದಗಂಗಾ ಮಠದ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡುತ್ತಿರುವುದರ ಹಿಂದೆ ನಾನಾ ರಾಜಕೀಯ ಲೆಕ್ಕಾಚಾರಗಳು ಅಡಗಿವೆ.   ಕಾಂಗ್ರೆಸ್‍ನ ಪ್ರತ್ಯೇಕ ಲಿಂಗಾಯಿತ ಧರ್ಮ ಅಸ್ತ್ರಕ್ಕೆ ಬೆದರಿರುವ ಬಿಜೆಪಿ ಸಿದ್ದಗಂಗಾಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಮೂಲಕ ಚದುರಿರುವ ವೀರಶೈವ-ಲಿಂಗಾಯಿತ ಮತಗಳನ್ನು ಕ್ರೋಢೀಕರಿಸುವುದು ಇದರ ಹಿಂದಿನ ಲೆಕ್ಕಾಚಾರವಾಗಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಅತಿಯಾಗಿ ನಂಬಿಕೊಂಡಿದ್ದ ವೀರಶೈವ-ಲಿಂಗಾಯಿತ ಮತಗಳು ಛಿದ್ರವಾಗಿರುವುದು ಗುಟ್ಟಾಗಿ ಉಳಿದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಏಕಮೇವ ಅಧಿಪತ್ಯಕ್ಕೆ ಭಾರೀ ಮರ್ಮಾಘಾತವನ್ನೇ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತ್ಯೇಕ ಧರ್ಮ ರಚನೆಗೆ ಕೈ ಹಾಕುವ ಮೂಲಕ ಬಿಜೆಪಿ ಲೆಕ್ಕಾಚಾರವನ್ನು ಬುಡಮೇಲು ಮಾಡಿದ್ದಾರೆ.

ಲಿಂಗಾಯಿತ ಸಮುದಾಯಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಕುರಿತು ಏಳುಮಂದಿ ತಜ್ಞರ ಸಮಿತಿಯೊಂದನ್ನು ರಚನೆ ಮಾಡಿದ್ದಾರೆ. ಈ ಸಮಿತಿಯು ಒಂದು ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.   ಯಾವಾಗ ಲಿಂಗಾಯಿತ ಮತಗಳು ಪಕ್ಷದಿಂದ ದೂರ ಸರಿಯುತ್ತವೆ ಎಂಬುದು ಬಿಜೆಪಿಗೆ ಮನವರಿಕೆಯಾಯಿತೋ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಮೂಲಕ ರಾಜಕೀಯ ಲಾಭ ಪಡೆಯಲು ಮುಂದಾಗಿದೆ.   ಭಾನುವಾರ ಬೆಂಗಳೂರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬೆಂಗಳೂರಿಗೆ ಆಗಮಿಸಲಿದ್ದು, ಈ ವೇಳೆ ರಾಜ್ಯ ನಾಯಕರು ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವುದರಿಂದ ಆಗುವ ಲಾಭನಷ್ಟದ ಬಗ್ಗೆ ಮನವರಿಕೆ ಮಾಡುವರು . ಈಗಾಗಲೇ ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೈ ಸುಟ್ಟುಕೊಂಡಿರುವ ಬಿಜೆಪಿ ಈ ಮೂಲಕವಾದರೂ ಕಾಂಗ್ರೆಸ್ ಅಸ್ತ್ರಕ್ಕೆ ಪ್ರತ್ಯಾಸ್ತ್ರ ಬಳಸಲು ಮುಂದಾಗಿದೆ.

Facebook Comments

Sri Raghav

Admin