ನಡೆದಾಡುವ ದೇವರ ಆರೋಗ್ಯದಲ್ಲಿ ಕೊಂಚ ಏರುಪೇರು

ಈ ಸುದ್ದಿಯನ್ನು ಶೇರ್ ಮಾಡಿ

Siddaganga-Shree--01

ತುಮಕೂರು, ಜ.26- ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದು, ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ರಾತ್ರಿ ಶ್ರೀಗಳ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡಿದ್ದು, ಕೂಡಲೇ ನಗರದ ಸಿದ್ಧಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಪರಮೇಶ್ವರ್ ಅವರ ಗಮನಕ್ಕೆ ತರಲಾಗಿತ್ತು. ವೈದ್ಯರಾದ ಡಾ.ಶಾಲಿನಿ, ಸುರೇಶ್‍ಬಾಬು ಇವರ ತಂಡ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ಪರೀಕ್ಷಿಸಿದರು.

ಕಳೆದ ಬಾರಿ ಶ್ರೀಗಳಿಗೆ ನಡೆಸಿದ ಶಸ್ತ್ರ ಚಿಕಿತ್ಸೆಯಲ್ಲಿ ರಕ್ತನಾಳಗಳು ಬಂದ್ ಆಗಿರಬಹುದೆಂದು ಇಂದು ಬೆಳಗ್ಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಶ್ರೀಗಳನ್ನು ಕರೆದೊಯ್ಯಲಾಯಿತು. ಶ್ರೀಗಳ ಆರೋಗ್ಯ ಪರೀಕ್ಷಿಸಿದ ಡಾ.ರವೀಂದ್ರ ಅವರು ಈಗಾಗಲೇ ಶ್ರೀಗಳ ರಕ್ತ ಪರೀಕ್ಷೆ, ಎಕ್ಸ್-ರೇ ಮಾಡಲಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು. ಶ್ರೀಗಳ ಆರೋಗ್ಯದ ವಿಚಾರ ಕಾಡ್ಗಿಚ್ಚಿನಂತೆ ನಗರ ಹಾಗೂ ಜಿಲ್ಲೆಯಾದ್ಯಂತ ಹಬ್ಬುತ್ತಿದ್ದಂತೆ ತಂಡೋಪತಂಡವಾಗಿ ಸಾಗರದಂತೆ ಮಠಕ್ಕೆ ಭಕ್ತಾದಿಗಳ ದಂಡೇ ಹರಿದುಬಂದಿತು.

ಇನ್ನೂ ಕೆಲವರು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ತೆರಳಿದರು. ಜನರನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಯಾವುದೇ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸಕಲ ಸಿದ್ಧತೆ ಕೈಗೊಂಡಿದ್ದರು. ಕೆಲವರು ಗಾಳಿ ಸುದ್ದಿ ಹಬ್ಬಿಸಿದ್ದರಿಂದ ನಗರದಲ್ಲಿ ಮತ್ತಷ್ಟು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಶ್ರೀಗಳು ಶೀಘ್ರ ಗುಣಮುಖರಾಗಿ ಮತ್ತೆ ಮಠಕ್ಕೆ ಆಗಮಿಸಲಿ ಎಂದು ಭಕ್ತಾದಿಗಳು ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

Facebook Comments

Sri Raghav

Admin