ನಡೆದಾಡುವ ದೇವರ ಬಗ್ಗೆ ಆಪ್ತರ ಅಸಡ್ಡೆ : ಹೊನ್ನಮ್ಮಗವಿ ಮಠದ ಶ್ರೀ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

Siddaganga

ತುಮಕೂರು, ಆ.10- ನಮ್ಮಲ್ಲಿ ಮಠಮಾನ್ಯಗಳಿಗೆ ವಿಶೇಷ ಸ್ಥಾನವಿದೆ. ಬಹುತೇಕ ಮಠಾಧೀಶರು ಸಮಾಜಸೇವೆಯಲ್ಲಿ ತೊಡಗಿದ್ದು, ಅಂಥವರು ಸಮಾಜದಲ್ಲಿ ಪೂಜನೀಯರಾಗಿರುತ್ತಾರೆ.
ಸದ್ಯ ಅಂಥ ಮಠಗಳಲ್ಲಿ ತುಮಕೂರಿನ ಸಿದ್ದಗಂಗಾ ಕ್ಷೇತ್ರವೂ ಒಂದು.ಈ ಮಠದ ಸೂತ್ರಧಾರಿ ಶತಾಯುಷಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳು. ಸಾಮಾನ್ಯವಾಗಿ ಬಹುತೇಕ ಮಠಗಳಲ್ಲಿ ಸ್ವಾಮೀಜಿಗಳಿಗೆ ವಯಸ್ಸು ಮಾಗಿದಂತೆ ಹೊರಗಿನ ಪ್ರಪಂಚ ಅವರನ್ನು ಗುರುಭಾವನೆಯಿಂದ ನೋಡಿದರೂ, ಗೌರವ ನೀಡಿದರೂ, ಮಠದ ಸಿಬ್ಬಂದಿ ಹಾಗೂ ಆಪ್ತರು ಅವರನ್ನು ಕಡೆಗಣಿಸುವುದು ಹೊಸತೇನಲ್ಲ.  ಜಗತ್ತೇ ಗೌರವಿಸುತ್ತಿದ್ದ ಪುಟ್ಟಪರ್ತಿ ಸಾಯಿಬಾಬಾ ಅವರಿಗೆ ಹೀಗಾಗಿದ್ದು ಎಲ್ಲರಿಗೂ ಗೊತ್ತು. ಪ್ರಸ್ತುತ ಸಿದ್ದಗಂಗಾ ಕ್ಷೇತ್ರದ ನಡೆದಾಡುವ ದೇವರು ಶ್ರೀ ಶಿವಕುಮಾರಸ್ವಾಮೀಜಿಗೂ ಇದೇ ಸ್ಥಿತಿ ಬಂದಿದೆ ಎಂಬ ಅತ್ಯಂತ ಗಂಭೀರ ವಿಷಯವೊಂದು ಮತ್ತೊಬ್ಬ ಶ್ರೀಗಳಿಂದಲೇ ಬಹಿರಂಗಗೊಂಡಿದ್ದು, ಇಡೀ ಕರ್ನಾಟಕವೇ ಬೆಚ್ಚಿ ಬೀಳುವಂತೆ ಮಾಡಿದೆ.

ಈ ಕುರಿತಂತೆ ಹೊನ್ನಮ್ಮ ಗವಿಮಠದ  ಶ್ರೀ ರುದ್ರಮುನಿಶಿವಾಚಾರ್ಯ ಸ್ವಾಮಿಗಳು, ಬಾಯಲ್ಲಿ ಹೇಳಲಾಗದ್ದನ್ನು ಪತ್ರ ಮುಖೇನ ಹಿರಿಯ ಶ್ರೀಗಳಲ್ಲಿ ಅರಿಕೆ ಮಾಡಿದ್ದು ಆ ಪತ್ರದ ಯಥಾವತ್ ವರದಿ ಇಲ್ಲಿದೆ. ಪರಮ ಪೂಜ್ಯರ ಪಾದಗಳಿಗೆ ಭಕ್ತಿಪೂರ್ವಕ ಪ್ರಣಾಮಗಳು.   ಈ ಪತ್ರವನ್ನು ತುಂಬಾ ನೋವಿನಿಂದ, ಬೇಸರದಿಂದ ಹತಾಶ ಭಾವನೆಯಿಂದ ದುಃಖದಿಂದ ಬರೆಯುತ್ತಿದ್ದೇನೆ. ಪತ್ರ ಬರೆಯದೆ ಬೇರೆ ಮಾರ್ಗಗಳು ನನಗೆ ಕಾಣಲಿಲ್ಲ. ಎರಡು-ಮೂರು ಬಾರಿ ತಮ್ಮ ಮಠಕ್ಕೆ ಬಂದಾಗಲೂ ತಮ್ಮ ಹತ್ತಿರ ಮಾತನಾಡಬೇಕು ಎಂದು ಬಂದಿದ್ದೆ. ಆದರೆ ಅದು ತಮ್ಮನ್ನು ನೋಡಿದ ಕೂಡಲೇ ತಮಗೆ ನೋವು ಕೊಡಬಾರದು. ಬೇಸರ ಮಾಡಬಾರದೆಂದು ಏನನ್ನೂ ಹೇಳದೆ ಹಾಗೇ ಬಂದು ಬಿಟ್ಟೆ. ಆದರೆ ನನ್ನ ಮನಸ್ಸು ಹೇಳಿಕೊಳ್ಳದಿದ್ದರೆ ಸಮಾಧಾನವಾಗುವುದಿಲ್ಲ ಎಂದು ಈ ಪತ್ರವನ್ನು ಬರೆಯುತ್ತಿದ್ದೇನೆ.

ಬುದ್ಧಿ, ತಾವು ಸಿದ್ದಗಂಗಾ ಮಠವನ್ನು ರಾಷ್ಟ್ರವ್ಯಾಪಿಯಾಗಿ ಹೆಸರು ಮಾಡಲು ಕಾರಣರಾಗಿದ್ದೀರಿ. ತಮ್ಮ ಸಾಧನೆಯಿಂದ ತಮಗೆ ಎಲ್ಲರೂ ಭಕ್ತಿ ಗೌರವಗಳನ್ನೂ ಕೊಡುತ್ತಿರುವುದನ್ನು ನೋಡಿ ನಮಗೆಲ್ಲಾ ಅತೀವ ಸಂತೋಷ ಮತ್ತು ನಮ್ಮ ಹೃದಯಗಳಲ್ಲಿ ತಾವು ದೈವ ಸ್ವರೂಪರಾಗಿದ್ದಿರಿ.  ಸಿದ್ದಗಂಗಾ ಮಠವೆಂದರೆ ಅದೊಂದು ಭೂಕೈಲಾಸ ಎನ್ನುವ ಭಾವನೆ ಜನ ಸಾಮಾನ್ಯರಲ್ಲಿ ಮೂಡಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಿದ್ದಗಂಗಾ ಮಠದ ಆಡಳಿತ ವ್ಯವಸ್ಥೆ, ಅಲ್ಲಿ ಬದಲಾಗುತ್ತಿರುವ ತಮ್ಮ ಸಿಬ್ಬಂದಿಗಳ ಮನೋಭಾವ ಕಂಡು ಬಹಳಷ್ಟು ಜನ ಮನಸ್ಸಿನಲ್ಲಿ ತುಂಬಾ ನೋವು ಪಡುತ್ತಿದ್ದಾರೆ, ತಮ್ಮ ಮೇಲೆ ಇಟ್ಟಿರುವ ಅಪಾರವಾದ ಭಕ್ತಿ ಭಾವನೆಗಳಿಂದ ಯಾರು ತಮ್ಮ ಹತ್ತಿರ ಹೇಳಿಕೊಳ್ಳುವುದಿಲ್ಲ.

ಬುದ್ಧಿ ನಾನು ತುಂಬಾ ಚಿಕ್ಕವನು. ಅನುಭವದಲ್ಲಿ, ಜ್ಞಾನದಲ್ಲಿ,ಆಡಳಿತ ಅನುಭವದಲ್ಲಿ. ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ತಾವು ಈಗಲಾದರೂ ಸರಿಯಾದ ತೀರ್ಮಾನಗಳನ್ನು, ಕ್ರಮಗಳನ್ನೂ ತೆಗೆದುಕೊಳ್ಳದಿದ್ದರೆ ಮುಂದಿನ ದಿವಸಗಳಲ್ಲಿ ಮಠಕ್ಕೆ ತುಂಬಾ ಕಷ್ಟದ ದಿನಗಳೆಂದು ಭಾವಿಸಿದ್ದೇನೆ. ನಿನ್ನೆ ನಾನು ಮಠಕ್ಕೆ ಬಂದಾಗ ತಾವು ಎರಡು ಮೂರು ಬಾರಿ ಉಳಿತಿರಾ, ಉಳಿತಿರಾ ಎಂದು ಕೇಳಿದಿರಿ. ನಾನು ಇಲ್ಲ ಬುದ್ಧಿ ಮಠಕ್ಕೆ ಹೋಗುತ್ತೇನೆಂದು ಹೇಳಿದೆ. ಒಂದು ಗಂಟೆ ಇದ್ದು ಹೋಗುತ್ತೇನೆಂದು ಹೇಳಿದೆ. ತಾವು ಹಳೇಮಠಕ್ಕೆ ದಯಮಾಡಿಸಿದಿರಿ. ಭಕ್ತರು ಬಂದು ನಮಸ್ಕಾರ ಮಾಡಿ ದರ್ಶನ ಮಾಡಿ ಹೋಗುತ್ತಿದ್ದರು. ತಮ್ಮ ಆಪ್ತ ಸೇವಕರು ತಮ್ಮನ್ನು ಮಾತನಾಡಿಸುತ್ತಿದ್ದುದನ್ನು ನೋಡಿ ಮನಸ್ಸಿಗೆ ತುಂಬಾ ಬೇಸರವಾಯಿತು. ತಮ್ಮ ಜೊತೆ ಹೇಗೆ ಮಾತನಾಡಬೇಕೆಂಬ ಸೌಜನ್ಯವೂ ಸಹ ಇಲ್ಲ. ಮಾತನಾಡುವ ರೀತಿಗಳು, ಅವರ ವರ್ತನೆ ಮತ್ತು ತಮ್ಮ ಜೊತೆ ಮಾತನಾಡುವ ಸಂದರ್ಭದಲ್ಲಿ ಅವರು ನಿಮಗೆ ಹೇಳುವ ಮಾತುಗಳು ತುಂಬಾ ಕರ್ಕಶವಾಗಿದ್ದವು. ನಮ್ಮಂತಹವರಿಗೆ ತುಂಬಾ ಬೇಸರ ಮತ್ತು ನೋವನ್ನು ತಂದಿತು. ಎಂಥೆಂಥವರು ತಮಗೆ ತುಂಬಾ ಗೌರವವನ್ನು ಕೊಡುತ್ತಾರೆ. ಆದರೆ ತಮ್ಮ ಹಳೇ ಮಠದಲ್ಲಿ ಇರುವ ಆಪ್ತರು ತಮ್ಮನ್ನು ನೋಡಿಕೊಳ್ಳುವ ರೀತಿ ತುಂಬಾ ಬೇಸರವಾಗಿದೆ. ತಪ್ಪಿದ್ದರೆ ಕ್ಷಮಿಸಿ.
ತಮ್ಮ ಪತ್ರವನ್ನು ನಿರೀಕ್ಷಿಸುತ್ತೇನೆ.
ಶ್ರೀ ರುದ್ರಮುನಿಶಿವಾಚಾರ್ಯ ಸ್ವಾಮಿಗಳು
ಹೊನ್ನಮ್ಮ ಗವಿ ಮಠ.

Facebook Comments

Sri Raghav

Admin