ನನ್ನ ಜೀವನವನ್ನು ಚಲನಚಿತ್ರ ಮಾಡುವ ಅಗತ್ಯವಿಲ್ಲ : ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-01

ಕಲಬುರಗಿ, ಜೂ.2- ತಮ್ಮ ಜೀವನ ಆಧಾರಿತ ಕುರಿತ ಚಲನಚಿತ್ರ ನಿರ್ಮಾಣ ಮಾಡಲು ಯಾರೊಬ್ಬರಿಗೂ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಜೀವನ ಆಧಾರಿತ ಕುರಿತು ಚಿತ್ರ ನಿರ್ಮಾಣ ಮಾಡುವ ಅಗತ್ಯವಿಲ್ಲ. ಇದಕ್ಕೆ ನಾನು ಯಾರಿಗೂ ಈವರೆಗೂ ಅವಕಾಶ ನೀಡಿಲ್ಲ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದರು.



ಚಿತ್ರ ನಿರ್ಮಾಣ ಕುರಿತಂತೆ ಈವರೆಗೂ ನನ್ನನ್ನು ಯಾವುದೇ ನಿರ್ದೇಶಕರಾಗಲಿ, ನಿರ್ಮಾಪಕರಾಗಲಿ ಸಂಪರ್ಕ ಮಾಡಿಲ್ಲ. ಆದರೂ ಗೊಂದಲ ಉಂಟಾಗಬಾರದೆಂಬ ಕಾರಣಕ್ಕಾಗಿ ನಾನೇ ಸ್ಪಷ್ಟನೆ ನೀಡಿದ್ದು , ಚಿತ್ರ ನಿರ್ಮಾಣ ಮುಗಿದ ಅಧ್ಯಾಯ ಎಂದು ಪುನರುಚ್ಚಿಸಿದರು.   ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಯಾವುದೇ ವೇಳೆ ಬರಬಹುದು. ಸದ್ಯದ ಪರಿಸ್ಥಿತಿ ಚುನಾವಣೆ ವಾತಾವರಣದಂತಿದೆ. ರಾಜ್ಯಾದ್ಯಂತ ಪ್ರವಾಸ, ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕಾಗಿರುವುದರಿಂದ ನನ್ನ ಗಮನ ಏನಿದ್ದರೂ ಪಕ್ಷವನ್ನು ಅಧಿಕಾರಕ್ಕೆ ತರುವುದೇ ಹೊರತು ಬೇರೆ ಯಾವುದೇ ಚಟುವಟಿಕೆ ಬಗ್ಗೆ ಗಮನಹರಿಸುವುದಿಲ್ಲ ಎಂದು ಹೇಳಿದರು.

ಚಿತ್ರ ನಿರ್ಮಾಪಕರು ರುದ್ರೇಶ್ ಎಂಬುವರು ಯಡಿಯೂರಪ್ಪ ಜೀವನ ಆಧಾರಿತ ಕುರಿತ ನೇಗಿಲಯೋಗಿ ಇಲ್ಲವೇ ಮಣ್ಣಿನ ಮಗ ಚಿತ್ರ ನಿರ್ಮಿಸಲು ಮುಂದಾಗಿದ್ದರು. ಬಿಎಸ್‍ವೈ ಪಾತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಕೇಂದ್ರ ಸಚಿವ ಅನಂತ್‍ಕುಮಾರ್ ಪಾತ್ರದಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ , ಸಂಸದೆ ಶೋಭಾ ಕರಂದ್ಲಾಜೆ ಪಾತ್ರದಲ್ಲಿ ಶೃತಿ, ತಾರಾ ಸೇರಿದಂತೆ ಅನೇಕರು ನಟಿಸಲು ಪರೋಕ್ಷವಾಗಿ ಸಮ್ಮತಿ ನೀಡಿದ್ದರು.   ಆದರೆ ಯಡಿಯೂರಪ್ಪ ಚಿತ್ರ ನಿರ್ಮಾಣಕ್ಕೆ ಎಳ್ಳುನೀರು ಬಿಟ್ಟಿರುವುದರಿಂದ ಅವರ ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದಂತಾಗಿದೆ.



ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 20 ತಿಂಗಳ ಆಡಳಿತಾವಧಿಯನ್ನು ಮೆಲುಕು ಹಾಕುವ ಚಿತ್ರವನ್ನು ನಿರ್ಮಾಪಕ ಎಸ್.ನಾರಾಯಣ್ ನಿರ್ಮಾಣ ಮಾಡಲು ಈಗಾಗಲೇ ಸಿದ್ದತೆ ನಡೆಸಿದ್ದಾರೆ. ಭೂಮಿ ಪುತ್ರ ಎಂಬ ಚಿತ್ರ ನಿರ್ಮಾಣವಾಗುತ್ತಿದ್ದು , ಕುಮಾರಸ್ವಾಮಿ ಪಾತ್ರದಲ್ಲಿ ಖ್ಯಾತ ನಟ ಅರ್ಜುನ್ ಸರ್ಜಾ ನಟಿಸುತ್ತಿದ್ದಾರೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin