ನನ್ನ ತಂದೆ ಮಹಾನ್ ವ್ಯಕ್ತಿ, ಅವರು ಯಾವುದೇ ತಪ್ಪು ಮಾಡಿಲ್ಲ : ಭಾವನಾ

ಈ ಸುದ್ದಿಯನ್ನು ಶೇರ್ ಮಾಡಿ

Bhavana--01

ಧಾರವಾಡ,ಡಿ.9-ನನ್ನ ತಂದೆ ಮಹಾನ್ ವ್ಯಕ್ತಿ. ಅವರು ಯಾವುದೇ ತಪ್ಪು ಮಾಡಿಲ್ಲ. ಹೋರಾಟದ ಮೂಲಕವೇ ಬೆಳೆದು ಬಂದವರು. ಹೋರಾಟದ ಮೂಲಕವೇ ಪ್ರಕರಣದಲ್ಲೂ ನಿರ್ದೋಷಿಯಾಗಿ ಹೊರಬರುತ್ತಾರೆ ಎಂದು ರವಿ ಬೆಳಗೆರೆ ಅವರ ಪುತ್ರಿ ಭಾವನ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರವಿ ಬೆಳಗೆರೆ ವಿರುದ್ಧ ಯಾರೂ ದೂರು ನೀಡಿಲ್ಲ. ಶಶಿಧರ್ ಮುಂಡೇವಾಡಗಿ ಎಂಬ ವ್ಯಕ್ತಿಯ ಹೇಳಿಕೆ ಆಧರಿಸಿ ನಮ್ಮ ತಂದೆಯನ್ನು ಬಂಧಿಸಿದ್ದಾರೆ. ನನ್ನ ತಂದೆಯ ವಿರುದ್ಧ ಸುನಿಲ್ ಹೆಗ್ಗರವಳ್ಳಿ ಕೂಡ ದೂರು ನೀಡಿಲ್ಲ. ಕೇವಲ ಆರೋಪಗಳನ್ನು ಮಾಡುತ್ತಿದ್ದಾರೆ. ಯಾವುದೇ ದೂರಿಲ್ಲದೆ ಸ್ವಯಂಪ್ರೇರಿತವಾಗಿ ಎಫ್‍ಐಆರ್ ದಾಖಲಿಸಲಾಗಿದೆ. ಇದು ನ್ಯಾಯಾಲಯದಲ್ಲಿ ಸಾಬೀತಾಗುವುದಿಲ್ಲ ಎಂದು ಹೇಳಿದ್ದಾರೆ.

ಪ್ರಕರಣದಲ್ಲಿ ಸರಿಯಾದ ಸಾಕ್ಷಿಗಳಿಲ್ಲ ಎಂಬುದು ನಮ್ಮ ವಾದ. ಕೇವಲ ಹೇಳಿಕೆ ಆಧರಿಸಿ ಬಂಧಿಸಿರುವುದು ಸರಿಯಲ್ಲ. ನಮ್ಮ ತಂದೆ ಅತಿದೊಡ್ಡ ವ್ಯಕ್ತಿಯಾಗಿದ್ದು , ಇಷ್ಟೆಲ್ಲ ಸಾಧನೆ ಮಾಡಿದ ಮೇಲೆ ಸುಪಾರಿ ಕೊಟ್ಟು ಕೊಲೆ ಮಾಡಿಸುವ ಮಟ್ಟಕ್ಕೆ ಇಳಿಯುವವರಲ್ಲ. ಜೊತೆಗೆ ಕೊಲೆ ಮಾಡಿಸುವ ಅಗತ್ಯವೂ ಅವರಿಗೆ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಪ್ರಸ್ತಾಪಿಸಲು ಹೋಗುವುದಿಲ್ಲ. ಎರಡನೇ ಸಂಬಂಧ ಇರಬಹುದು, ಇಲ್ಲದೇ ಇರಬಹುದು, ಅದಕ್ಕೂ ಸುನಿಲ್ ಹೆಗ್ಗರವಳ್ಳಿಗೂ ತಳಕು ಹಾಕಿಕೊಂಡಿರಬಹುದು. ಇದ್ಯಾವುದು ನಮಗೆ ಮುಖ್ಯ ಅಲ್ಲ. ನಮ್ಮ ತಂದೆ ಪ್ರಾಮಾಣಿಕವಾಗಿ ಪ್ರೀತಿ ಕೊಟ್ಟಿದ್ದಾರೆ. ನಮ್ಮ ಮೂರು ಜನ ಮಕ್ಕಳಿಗೂ ಅವರು ಒಳ್ಳೆಯ ತಂದೆ. ಅವರ ಬೆಂಬಲಕ್ಕೆ ನಾವಿದ್ದೇವೆ. ನಮ್ಮ ತಂದೆಯ ಪತ್ರಿಕೋದ್ಯಮದಲ್ಲಿ ಕೆಲವರಿಗೆ ತೊಂದರೆಯಾಗಿದ್ದರೂ ಬಹಳಷ್ಟು ಮಂದಿಗೆ ಒಳ್ಳೆಯದಾಗಿದೆ.

ಅನಾರೋಗ್ಯದಿಂದ ಬಳಲುತ್ತಿರುವ ಅವರ ದೈಹಿಕವಾಗಿ ಕುಗ್ಗಿದ್ದು , ಬರವಣಿಗೆ ಅವರ ಕೆಚ್ಚು ಕಡಿಮೆಯಾಗಿಲ್ಲ. ಈಗಲೂ ಅವರು ದಾಂಡೇಲಿ ಮನೆಯಲ್ಲಿ ಕುಳಿತು ಬರೆಯುತ್ತಲೇ ಇರುತ್ತಾರೆ. ಅಂತಹ ಮಹಾನ್ ವ್ಯಕ್ತಿಯ ಬಗ್ಗೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ. ನಾನು ತನಿಖಾ ಅಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ನೀಡುವ ಅಗತ್ಯವಿಲ್ಲ. ನಿಷ್ಪಕ್ಷಪಾತ ತನಿಖೆ ನಡೆಯಲಿ. ಸತ್ಯ ತಾನಾಗಿಯೇ ಹೊರಬರಲಿದೆ. ನಿನ್ನೆ ಸಿಸಿಬಿ ಪೊಲೀಸರು ನಮ್ಮ ತಂದೆಯನ್ನು ಬಂಧಿಸಲು ಬಂದಾಗ ಅವರ ಆರೋಗ್ಯ ಸರಿಯಿರಲಿಲ್ಲ. ಮೊದಲು ಚಿಕಿತ್ಸೆ ಪಡೆಯಿರಿ ನಂತರ ವಿಚಾರಣೆಗೆ ಹಾಜರಾಗಿ ಎಂದು ನಾನು ಸಲಹೆ ಮಾಡಿದ್ದೆ. ಆದರೆ ಅವರು ನಾನು ಯಾವುದೇ ತಪ್ಪು ಮಾಡಿಲ್ಲ. ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುತ್ತೇನೆ. ಚಿಕಿತ್ಸೆಗೂ ಮುನ್ನ ವಿಚಾರಣೆ ಮುಖ್ಯ. ಪೊಲೀಸರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ನನಗೆ ಹೇಳಿದರು. ಪೊಲೀಸರು ನಮ್ಮ ತಂದೆಯನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಅವರ ದೇಹದಲ್ಲಿ ಯಾವುದೆ ಆಲ್ಕೋಹಾಲ್ ಅಂಶಗಳಿಲ್ಲ. ಎಲ್ಲವೂ ಸಮಸ್ಥಿತಿಯಲ್ಲಿದೆ. ಅವರಿಗೆ ದಿನನಿತ್ಯ ಕಾಡುವಂತೆ ಮಧುಮೇಹ ಮತ್ತು ಥೈರಾಡ್ ಸಮಸ್ಯೆಗಳಿವೆ. ಆರೋಗ್ಯ ಸರಿಯಿಲ್ಲ ಎಂದು ಭಾವನ ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin