ನನ್ನ ಸ್ವಾಭಿಮಾನಕ್ಕೆ, ಆತ್ಮಗೌರವಕ್ಕೆ ಧಕ್ಕೆ ಬಂದಿದ್ದರಿದ ಕಾಂಗ್ರೆಸ್ ತೊರೆಯುತ್ತಿದ್ದೇನೆ : ಕೃಷ್ಣ

ಈ ಸುದ್ದಿಯನ್ನು ಶೇರ್ ಮಾಡಿ

Krishna-01

ಬೆಂಗಳೂರು, ಜ.29- ನನ್ನ ಸ್ವಾಭಿಮಾನಕ್ಕೆ, ಆತ್ಮಗೌರವಕ್ಕೆ ಧಕ್ಕೆ ಬಂದಿದೆ. ಹಾಗಾಗಿ ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದ್ದಾರೆ.
ಸದಾಶಿವನಗರದ ತಮ್ಮ ಮನೆಯಲ್ಲಿ ನಡೆದ ಕಿಕ್ಕಿರಿದ ಸುದ್ದಿಗೋಷ್ಠಿಯಲ್ಲಿ ಸರಾಗವಾಗಿ ಮನಬಿಚ್ಚಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಜನನಾಯಕರು ಬೇಕಿಲ್ಲ. ಪಕ್ಷ ನಿರ್ವಹಿಸುವ ಮ್ಯಾನೇಜರ್‍ಗಳಿದ್ದರೆ ಸಾಕು ಎಂಬಂತಾಗಿದೆ. ಇಂದಿನ ರಾಜಕೀಯ ನಿರ್ಧಾರದ ಬಗ್ಗೆ ಈ ತಕ್ಷಣಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಸ್ವಲ್ಪ ದಿನ ಕಾದು ನೋಡುತ್ತೇನೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವೆ ಎಂದರು.

ತುರ್ತು ಪತ್ರಿಕಾಗೋಷ್ಠಿಗೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸುವುದಾಗಿ ಹೇಳಿ ನಿರುಮ್ಮಳವಾಗಿ ಮಾತು ಆರಂಭಿಸಿದ ಅವರು, 50 ವರ್ಷದ ರಾಜಕೀಯ ಜೀವನದಲ್ಲಿ ನಾನು ಬೆಳೆದಿದ್ದೇನೆ, ಬೇರೆಯವರನ್ನೂ ಬೆಳೆಸಿದ್ದೇನೆ. 1962ರಲ್ಲಿ ಅಮೆರಿಕಾದಿಂದ ಹಿಂದಿರುಗಿ ಬಂದೆ. ಇಲ್ಲಿ ಸಾರ್ವತ್ರಿಕ ಚುನಾವಣೆ ಆರಂಭವಾಗಿತ್ತು. ಪ್ರಜಾ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಬೇಕಾಯಿತು.
ನೆಹರೂರವರು ಮದ್ದೂರು ಚುನಾವಣೆ ಪ್ರಚಾರಕ್ಕೆ ಬಂದರು. ಸುಮಾರು 30 ಸಾವಿರ ಮಂದಿ ಕಾಂಗ್ರೆಸ್ ಪಕ್ಷದ ಪರವಾಗಿ ಜನ ಸೇರಿದ್ದರು. ಆದರೆ, ನಾನು ಅಧೀರನಾಗಲಿಲ್ಲ. ಎಲ್ಲವನ್ನೂ ಪ್ರಬಲ ಹೋರಾಟ ಮಾಡಿ ಗೆದ್ದೆ. ನಾನು ಅಲೆಯ ಮೇಲೆ ಬಂದ ರಾಜಕಾರಣಿ ಅಲ್ಲ. ಆಗ ಎಲ್ಲೆಡೆ ಕಾಂಗ್ರೆಸ್ ಅಲೆ ಇತ್ತು. ಅದರ ಪಟ್ಟಾಭಿಷೇಕ ನಡೆದಿತ್ತು. ನಾನು ಅದರ ವಿರುದ್ಧ ಗೆದ್ದೆ ಎಂದರು.
ಇಂದು ನನ್ನ ಬದುಕಿನ ನೋವಿನ ಸಂದರ್ಭ. 46 ವರ್ಷದಿಂದ ನೆಮ್ಮದಿಯಿಂದ ವಾಸವಾಗಿದ್ದ ಸ್ವಂತ ಮನೆ ತೊರೆಯಬೇಕಾಗಿ ಬಂದಿದೆ. 1968ರಲ್ಲಿ ನನ್ನ 31ನೆ ವರ್ಷಕ್ಕೆ ಲೋಕಸಭೆಗೆ ಆಯ್ಕೆಯಾದೆ. ಆಗ ಕಾಂಗ್ರೆಸ್ ಇಬ್ಭಾಗವಾಗಿತ್ತು. ಇಂದಿರಾಗಾಂಧಿಯವರ ಮೈನಾರಿಟಿ ಗೌರ್ನಮೆಂಟ್ ಜತೆ ನಾವೆಲ್ಲ ನಿಂತೆವು. ನಮ್ಮ ಸಹಕಾರ ಇಲ್ಲದೆ ಸರ್ಕಾರ ನಡೆಸುವುದು ಸಾಧ್ಯವಿರಲಿಲ್ಲ.

ನಾನು ಪ್ರಜಾ ಸೋಷಿಯಲ್ ಪಕ್ಷ ಹಾಗೂ ಇಂದಿರಾಗಾಂಧಿ ನಡುವೆ ರಾಯಭಾರ ಮಾಡಿದ್ದೆ. ಆಗ ನನ್ನ ಹಾಗೂ ಇಂದಿರಾಗಾಂಧಿ ನಡುವೆ ಮೈತ್ರಿ ಬೆಳೆದಿತ್ತು. ಬ್ಯಾಂಕ್ ರಾಷ್ಟ್ರೀಕರಣ, ಭೂ ಸುಧಾರಣೆ ಕಾಯ್ದೆಯಂತಹ ಜನಪರ ನಿಲುವುಗಳು ಪ್ರಜಾ ಸೋಷಿಯಲ್ ಪಾರ್ಟಿಯ ಅಜೆಂಡವಾಗಿದ್ದವು. ಅದನ್ನು ಇಂದಿರಾಗಾಂಧಿ ಜಾರಿಗೆ ತರಲು ಮುಂದಾಗಿದ್ದರು. ಹಾಗಾಗಿ ನಮ್ಮ ಪಕ್ಷದ ನಾಯಕರನ್ನು ಇಂದಿರಾಗಾಂಧಿ ಕೈ ಬಲಪಡಿಸುವ ಸಂಬಂಧ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದೆ ಎಂದರು. ಕಾಂಗ್ರೆಸ್ ಜತೆಗಿನ 46 ವರ್ಷದ ಸುದೀರ್ಘ ಸಂದರ್ಭದಲ್ಲಿ ಒಳ್ಳೆಯದನ್ನೂ ನೋಡಿದ್ದೇನೆ, ಕೆಟ್ಟದ್ದನ್ನೂ ಅನುಭವಿಸಿದ್ದೇನೆ. ಸಿಹಿ ಉಂಡಿದ್ದೇನೆ, ಕಹಿಯನ್ನು ಜೀರ್ಣಿಸಿಕೊಂಡಿದ್ದೇನೆ. ಎಷ್ಟೇ ಸವಾಲು ಬಂದರೂ ನನ್ನ ಪಕ್ಷ ನಿಷ್ಠೆ ಬದಲಾಗಿಲ್ಲ. ಆದರೆ, ಇಂದು ದೊಡ್ಡ ಸಮಸ್ಯೆ ಎದುರಾಗಿದೆ. ಕಾಂಗ್ರೆಸ್‍ಗೆ ಜನಸಮುದಾಯದ ನಾಯಕರು ಬೇಕಿಲ್ಲ. ಪಕ್ಷ ನಿರ್ವಹಿಸುವ ಮ್ಯಾನೇಜರ್ ಇದ್ದರೆ ಸಾಕು. ಪಕ್ಷ ಮುನ್ನಡೆಸಬಹುದು ಎಂಬ ತೀರ್ಮಾನಕ್ಕೆ ವರಿಷ್ಠರು ಬಂದಂತಿದೆ.
ಇಂದಿರಾಗಾಂಧಿ ಕಾಲಘಟ್ಟ ಮುಗಿದ ಮೇಲೆ ರಾಜೀವ್‍ಗಾಂಧಿಯವರ ಕಾಲ ಆರಂಭವಾಯಿತು. ಅವರ ಆಲೋಚನೆಗಳಿಗೆ ನಾನು ಹತ್ತಿರವಾಗಿದ್ದರಿಂದ ನನ್ನನ್ನು ಕೇಂದ್ರದ ಮಂತ್ರಿ ಮಾಡಲು ಶಿಫಾರಸು ಮಾಡಿದ್ದರು.

ರಾಜೀವ್‍ಗಾಂಧಿ ಅವರ ಕೊಡುಗೆ ಅಪಾರವಾಗಿತ್ತು. ವಿಧಿ ಲಿಖಿತ ಬೇರೆಯೇ ಆಗಿತ್ತು. ಅವರು ನಮ್ಮನ್ನು ಅಗಲಿದರು. ಸಾರ್ವಜನಿಕ ಜೀವನದಲ್ಲಿರುವವರು ರಾಗ, ದ್ವೇಷ ರಹಿತ ಮನೋಭಾವ ಹೊಂದಿರಬೇಕು. ಅಧಿಕಾರ ಪಡೆದ ಮೇಲೆ ಎಲ್ಲ ಸಮುದಾಯವನ್ನು ಒಂದೇ ದೃಷ್ಟಿಯಿಂದ ನೋಡಬೇಕು ಎಂದರು. ಯಶಸ್ಸಿನ ಕಾರಣಕ್ಕೆ ತಮ್ಮನ್ನು ನಿರ್ಲಕ್ಷಿಸಿದ್ದು, ನಿಷ್ಠಾವಂತ ಕಾರ್ಯಕರ್ತರಾದ ತಮ್ಮನ್ನು ಮೂಲೆಗುಂಪು ಮಾಡಿರುವುದು ನೋವುಂಟಾಗಿದೆ. ಇದು ಎಷ್ಟು ಸರಿ ಎಂಬ ಪ್ರಶ್ನೆ ಕಾಡುತ್ತಿದೆ.  ನಾನು ರಾಜಕೀಯ ನಿವೃತ್ತಿಯಾಗುವುದಿಲ್ಲ ಎಂದು 2012ರಲ್ಲೇ ಹೇಳಿದ್ದೆ. ಕೆಲವರು 46 ವರ್ಷದಲ್ಲೇ ವಯಸ್ಸಾದವರಂತೆ ವರ್ತಿಸುತ್ತಾರೆ, ಮತ್ತೆ ಕೆಲವರು 80 ವರ್ಷದಲ್ಲೂ ಚುರುಕಾಗಿ ಓಡಾಡುತ್ತಾರೆ. ನನ್ನ ಓಡಾಟದಲ್ಲಿ ನಿಧಾನ ಸ್ಥಿತಿ ಬಂದಿದೆ. ಅದು ವಯಸ್ಸಿನ ಪ್ರಾಕೃತಿಕ ಬದಲಾವಣೆ ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಅದರ ಹಿಂದೆ ಆತ್ಮಗೌರವ, ಸ್ವಾಭಿಮಾನ, ಹಿರಿತನ ಎಂಬ ಮೌಲ್ಯಗಳು ಅಮೂಲ್ಯವಾಗಿವೆ. ತಲೆಮಾರುಗಳು ಬದಲಾದರೂ ಮೌಲ್ಯಗಳು ಬದಲಾಗಲ್ಲ ಎಂದರು.

ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಹಲವರು ನನಗೆ ಮನವಿ ಮಾಡಿದ್ದಾರೆ. ದೆಹಲಿಯವರು ನನಗೆ ಫೋನ್ ಮಾಡಿದ್ದರು. ನಾನು ಇದ್ದೇನೆ ಎಂದು ಅವರಿಗೆ ನೆನಪಿಸಬೇಕಾಯಿತು. ನನ್ನ ಮನವೊಲಿಕೆಗೆ ಯತ್ನಿಸಿದ ಎಲ್ಲರಿಗೂ ಧನ್ಯವಾದ. ದೆಹಲಿಗೆ ಕರೆ ಮಾಡಿದವರು ನಿಮ್ಮ ಇರುವಿಕೆ ನಮ್ಮ ಗಮನದಲ್ಲಿದೆ ಎಂದು ಹೇಳಿದ್ದಾರೆ.
ಯಾವ ರಾಜಕೀಯ ಪಕ್ಷದಲ್ಲೂ ಹಿರಿತನಕ್ಕೆ ಬೆಲೆ ಇರುವುದಿಲ್ಲವೋ ಅದಕ್ಕೆ ಭವಿಷ್ಯ ಇರುವುದಿಲ್ಲ. ಎಲ್ಲದಕ್ಕೂ ಹಿರಿಯರನ್ನು ಅನುಸರಿಸಿ ಎಂದು ಹೇಳುವುದಿಲ್ಲ. ಅವರಿಗೆ ಏನನ್ನಾದರೂ ಬೆಲೆ ಕೊಡಬೇಕು. ಕಾಂಗ್ರೆಸ್ ತೊರೆಯುವ ನೋವಿನ ತೀರ್ಮಾನಕ್ಕೆ ಬದ್ಧನಾಗಿದ್ದೇನೆ.

1998ರಲ್ಲಿ ಸೋನಿಯಾಗಾಂಧಿಯವರನ್ನು ಭೇಟಿ ಮಾಡಿ ಸಕ್ರಿಯ ರಾಜಕಾರಣಕ್ಕೆ ಬರುವಂತೆ ಸಲಹೆ ನೀಡಿದ್ದೆ. ಅದನ್ನು ಅವರು ಗೌರವಿಸಿದ್ದರು. ಇಂದಿಗೂ ಅವರೊಂದಿಗೆ ಅಗಾಧ ಗೌರವ-ವಿಶ್ವಾಸ ಮುಂದುವರಿದಿದೆ. ಅವರ ಆರೋಗ್ಯ ಸುಧಾರಿಸಲಿ ಎಂದು ದಿನನಿತ್ಯ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin