‘ನಮಗೇ ನೀರಿಲ್ಲ ನಿಮಗೆಲ್ಲಿಂದ ತರೋದು”

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha

ಬೆಂಗಳೂರು, ಆ.25- ರಾಜ್ಯದ ಜಲಾಶಯಗಳಲ್ಲಿ ನೀರಿನ ಕೊರತೆ ಇರುವುದರಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮಿಳುನಾಡು ನಿಯೋಗಕ್ಕೆ ಸ್ಪಷ್ಟವಾಗಿ ಮನವರಿಕೆ ಮಾಡಿ ಕೊಟ್ಟಿದ್ದಾರೆ. ತಮಿಳುನಾಡಿನ ಮಾಜಿ ಸಂಸದ ಕೆ.ಪಿ.ರಾಮಲಿಂಗಂ ಹಾಗೂ ನೀರಾವರಿ ರಕ್ಷಣಾ ಸಮಿತಿಯ ಪದಾಧಿಕಾರಿಗಳು ಇಂದು ಬೆಳಗ್ಗೆ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮಿಳುನಾಡಿಗೆ ನೀರು ಬಿಡುವಂತೆ ಮನವಿ ಮಾಡಿದರು.  ಈ ಸಂದರ್ಭದಲ್ಲಿ ರಾಜ್ಯದ ಜಲಾಶಯಗಳ ಪರಿಸ್ಥಿತಿಗಳ ಬಗ್ಗೆ ವಿವರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾವೇರಿ ಜಲಾನಯನ ಭಾಗದಲ್ಲಿ ಮಳೆ ಇಲ್ಲ. ಜಲಾಶಯದಲ್ಲಿ 140ಟಿಎಂಸಿ ನೀರು ಸಂಗ್ರಹ ಇರಬೇಕಿತ್ತು.

ಆದರೆ, ಕೇವಲ 50 ಟಿಎಂಸಿಗಿಂತಲೂ ಕಡಿಮೆ ನೀರಿದೆ. ಹೀಗಾಗಿ ನಮಗೆ ಕುಡಿಯುವ ನೀರು ಸಾಲುತ್ತಿಲ್ಲ. ಸುಮಾರು 40 ಟಿಎಂಸಿಯಷ್ಟು ಕೊರತೆ ಇದೆ ಎಂದು ವಿವರಿಸಿದರು.
ಸಮೃದ್ಧಿಯಾಗಿ ಮಳೆಯಾಗಿ ಜಲಾಶಯ ಭರ್ತಿಯಾಗಿದ್ದರೆ ನೀರು ಬಿಡುಗಡೆ ಮಾಡಲು ಯಾವುದೇ ಸಮಸ್ಯೆ ಇಲ್ಲ. ನೀವು ಕೃಷಿಗಾಗಿ ನೀರು ಕೇಳುತ್ತಿದ್ದೀರಿ, ನಮಗೆ ಕುಡಿಯುವ ಸಲುವಾಗಿಯೇ ನೀರಿಲ್ಲ. ಬೇಕಿದ್ದರೆ ಜಲಾಶಯಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಎಂದು ತಮಿಳುನಾಡು ನಿಯೋಗಕ್ಕೆ ಸಿದ್ದರಾಮಯ್ಯ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಕೂಡ ಹಾಜರಿದ್ದು, ಜಲಾಶಯಗಳ ಪರಿಸ್ಥಿತಿಯ ಬಗ್ಗೆ ತಮಿಳುನಾಡು ನಿಯೋಗಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.

ನಿಯೋಗ ನ್ಯಾಯಾಧಿಕರಣದ ತೀರ್ಪಿನನ್ವಯ ನೀರು ಬಿಡುಗಡೆ ಮಾಡಿ, ಕಾವೇರಿ ಜಲಾನಯನ ಭಾಗಕ್ಕೆ ಸೇರಿದ ತಮಿಳುನಾಡು ಭಾಗದಲ್ಲಿ ಸಾಂಬ ಬೆಳೆ ಒಣಗಿ ಹೋಗುತ್ತಿದೆ. ಇದರಿಂದ ರೈತರಿಗೆ ಬಹಳಷ್ಟು ನಷ್ಟವಾಗುತ್ತಿದೆ ಎಂದು ವಿವರಿಸಿತು.  ತಮಿಳುನಾಡಿನ ರೈತರು 9 ಎಕರೆಯಲ್ಲಿ ಸಾಂಬ ಬೆಳೆ ಬೆಳೆದಿದ್ದಾರೆ. ಈ ಬೆಳೆಗಾದರೂ ನೀರು ಬಿಡಿ ಎಂದು ತಿಳಿಸಿದೆ.  ಪ್ರಕೃತಿಯ ಸವಾಲಿನ ಮುಂದೆ ನಾವು ನಿಸ್ಸಹಾಯಕರು. ನಮ್ಮ ಜಲಾಶಯದ ನೀರು ಖಾಲಿಯಾಗಬಿಟ್ಟರೆ ಕುಡಿಯುವ ನೀರಿಗೆ ನಾವು ಯಾವ ಮೂಲವನ್ನು ಅವಲಂಭಿಸಬೇಕು ಎಂಬುದೇ ಪ್ರಶ್ನೆಯಾಗಿದೆ. ಸದ್ಯದ ಸ್ಥಿತಿಯಲ್ಲಿ ಸಂಕಷ್ಟ ಸೂತ್ರದ ಅನ್ವಯವೂ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದರು. ತಮಿಳು ಕೃಷಿಕರ ಸಂಘದ ಅಧ್ಯಕ್ಷ ಕೆ.ಚೆಲ್ಲಮುತ್ತು, ಕಾರ್ಯದರ್ಶಿ ತಿರುವುನಕ್ಕರಸು ಮತ್ತಿತರರು ಹಾಜರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin