ನಮಗ ಎಣ್ಣಿ ಕುಡಿಯೊದೊಂದೆ ಬಾಕಿ ಉಳಿದೈತಿ : ರೈತರ ಅಳಲು, ಎಪಿಎಂಸಿ ಅಧ್ಯಕ್ಷರಿಗೆ ಮುತ್ತಿಗೆ

ಈ ಸುದ್ದಿಯನ್ನು ಶೇರ್ ಮಾಡಿ

5
ರೈತರು ತೊಗರಿ ಖರೀದಿ ಕೇಂದ್ರದಲ್ಲಿನ ಅವ್ಯವಸ್ಥೆ ಸರಿಪಡಿಸದೇ ನಿರ್ಲಕ್ಷ್ಯ ವಹಿಸಿರುವ ಶಾಸಕ ಸಿ.ಎಸ್. ನಾಡಗೌಡ, ಎಪಿಎಂಸಿ ಅಧ್ಯಕ್ಷರ ವಿರುದ್ಧವೇ ಧಿಕ್ಕಾರ ಕೂಗಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಎಪಿಎಂಸಿ ಅಧ್ಯಕ್ಷ ಗುರು ತಾರನಾಳ ಅವರಿಗೆ ರೈತರು ಮುತ್ತಿಗೆ ಹಾಕಿ ಮೊದಲು ನೆಪ ಹೇಳದೆ ತೊಗರಿ ಚೀಲಗಳನ್ನು ಪೂರೈಸುವ ವ್ಯವಸ್ಥೆ ಮಾಡಿ ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅವರು ಅದೇ ವ್ಯವಸ್ಥೆಯಲ್ಲಿದ್ದು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಎಲ್ಲೆಲ್ಲಿ ತೊಗರಿ ಚೀಲಗಳ ಲಭ್ಯತೆ ಇದೆಯೋ ಅಲ್ಲಿಂದ ತರಿಸಿಕೊಂಡು ತೊಗರಿ ಖರೀದಿಸಲಾಗುತ್ತದೆ ಎಂದು ಹೇಳಿದರು.

ಮುದ್ದೇಬಿಹಾಳ,ಏ.9- ಪಟ್ಟಣದ ತೊಗರಿ ಖರೀದಿ ಕೇಂದ್ರದಲ್ಲಿ ಚೀಲಗಳು ಖಾಲಿಯಾದ ಹಿನ್ನಲೆಯಲ್ಲಿ ಬಂದ್ ಮಾಡಿದ್ದರಿಂದ ಆಕ್ರೋಶಗೊಂಡಿದ್ದ ರೈತರು ನಿನ್ನೆ ಬೆಳಗ್ಗೆ 11 ಗಂಟೆಯಿಂದ ಪಟ್ಟಣದಿಂದ ತಾಳಿಕೋಟಿಗೆ ತೆರಳುವ ರಸ್ತೆಯನ್ನು ದಿಢೀರ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.ಪಟ್ಟಣದ ಇಲ್ಲೂರ್ ಮಿಲ್‍ನಲ್ಲಿ ತೆರೆದಿರುವ ಖಾಸಗಿ ತಾತ್ಕಾಲಿಕ ಖರೀದಿ ಕೇಂದ್ರದಲ್ಲಿ ಖಾಲಿ ಚೀಲಗಳು ಇಲ್ಲದಿದ್ದರಿಂದ ನಿನ್ನೆಯಿಂದ ಖರೀದಿ ಪ್ರಕ್ರಿಯೆ ನಿಲ್ಲಿಸಲಾಗಿತ್ತು. ಇದರಿಂದ ಆಕ್ರೋಶಗೊಂಡ ರೈತರು ಏಕಾಏಕಿ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನಿಟ್ಟು ಮೊದಲು ಖಾಲಿ ಚೀಲ ಪೂರೈಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಳವಾಟದ ರೈತ ಮುತ್ತು ಕುಂಟೋಜಿ, ಶ್ರೀಶೈಲ ಢವಳಗಿ, ಶಂಕರ ಶಿರೋಳ, ಶಿವು ಪೂಜಾರಿ ಮತ್ತಿತರರು ಮಾತನಾಡಿ, ಈ ಖರೀದಿ ಕೇಂದ್ರದಲ್ಲಿ ಸರಿಯಾಗಿ ಖರೀದಿ ಪ್ರಕ್ರಿಯೆ ನಡೆಯುತ್ತಿಲ್ಲ. ಖಾಲಿ ಚೀಲದ್ದೇ ಸಮಸ್ಯೆ ಹೇಳುತ್ತಿದ್ದಾರೆ. ಬೇರೆ ತಾಲೂಕಿನಲ್ಲಿ ಇಲ್ಲದ ಸಮಸ್ಯೆ ಇಲ್ಲಿನ ತೊಗರಿ ಖರೀದಿ ಕೇಂದ್ರದಲ್ಲಿ ಪದೇ-ಪದೇ ಉದ್ಭವಿಸಲು ಕಾರಣವೇನು ಎಂಬುದಕ್ಕೆ ಯಾರೊಬ್ಬರು ಉತ್ತರ ಕೊಡುತ್ತಿಲ್ಲ ಎಂದು ಹೇಳಿದರು.
ಸರದಿಗೆ ಬಂದು ನಿಂತು 15ದಿನ ಆಗಿದ್ದು ಟ್ರ್ಯಾಕ್ಟರ್‍ಗೆ 15ಸಾವಿರ ರೂ. ಬಾಡಿಗೆ ಕೊಟ್ಟಿದ್ದೇವೆ. ಪೊಲೀಸರು ಬರುತ್ತಾರೆ ಇದೊಂದು ಗಾಡಿ ಹೋಗಲಿ ಎಂದು ಹೇಳಿ ಕಳಿಸುತ್ತಿದ್ದಾರೆ. ನಮಗ ಎಣ್ಣಿ ಕುಡಿದ ಬ್ಯಾರೆ ದಾರೀನ ಇಲ್ಲದಂಗ ಆಗ್ಯದ್ರಿ. ನಮ್ಮ ಎಂಎಲ್‍ಎ ಇದ್ದೂ ಇಲ್ಲದಂತಾಗಿದೆ. ಯಾಕೆ ಇಷ್ಟು ಗಾಡಿಗಳು ನಿಂತಾವ ಅಂತ ನೋಡಾಕು ಬಂದಿಲ್ಲ. ಎಲಕ್ಷನ್ ಬಂದಾಗ ಓಟ ಕೇಳಕಾ ಬರ್ತಾರ ನಾವು ತೊಗರಿಗೆ ಹೊಡಿಯೋ ಎಣ್ಣಿ ಕುಡಿದ ಗತಿ ಇಲ್ಲದಂಗ ಆಗೈದ್ರಿ ಎಂದು ಹೇಳಿದರು.
ಪ್ರತಿಭಟನೆಯ ವಿಷಯ ತಿಳಿದ ತಹಸೀಲ್ದಾರ್ ಎಂ.ಎಸ್. ಬಾಗವಾನ, ಪಿಎಸೈ ಗೋವಿಂದಗೌಡ ಪಾಟೀಲ ಅವರು ಖಾಲಿ ಚೀಲಗಳು ಬರುತ್ತವೆ.

ಈಗ ಲಾರಿ ಮುಷ್ಕರ ಇರುವುದರಿಂದ ಚೀಲಗಳು ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿದ್ದು ತ್ವರಿತವಾಗಿ ಚೀಲಗಳನ್ನು ತರಿಸಿಕೊಂಡು ಎರಡು ದಿನದಲ್ಲಿ ಈ ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದ ಹಿನ್ನಲೆಯಲ್ಲಿ ರೈತರು ಪ್ರತಿಭಟನೆ ಹಿಂದಕ್ಕೆ ಪಡೆದು ಕೊಂಡರು.ಪ್ರತಿಭಟನೆಯಲ್ಲಿ ಸಿದ್ದಣ್ಣ ದೊಡಮನಿ, ಸುರೇಶ ಬಿರಾದಾರ, ಬಸಪ್ಪ ನಂದಿಹಾಳ, ಈರಣ್ಣ ಬಿರಾದಾರ, ಶಾಂತವ್ವ ಸಜ್ಜನ, ಬಾಪುಗೌಡ ಬಿರಾದಾರ, ಬಸನಗೌಡ ದೊಡಮನಿ, ಕರೆಪ್ಪ ಹಿರೇಕುರುಬರ, ಬಸವರಾಜ ಕುಂಟೋಜಿ, ಅಶೋಕ ಸಿಂಧನೂರ, ಅಶೋಕ ನಾಯ್ಕೋಡಿ, ಕಟಗಿ, ಸುರೇಶ ಪೂಜಾರಿ, ಮಡಿಕೇಶ್ವರ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.
ಕೊಡುವ ಊಟಕ್ಕೂ ಅಪಸ್ವರಕ್ಕೆ ರೈತರ ಆಕ್ಷೇಪ:
ದೇವರ ಹಿಪ್ಪರಗಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ಊಟ ಕೊಡುತ್ತಿದ್ದು ಅದನ್ನು ರಾಜಕಾರಣ ಎಂದು ಕರೆದಿರುವ ಎಪಿಎಂಸಿ ಅಧ್ಯಕ್ಷ ಗುರು ತಾರನಾಳರ ವಿರುದ್ಧ ರೈತರು ಹರಿಹಾಯ್ದರು. ತಮಗಂತೂ ಕೊಡುವ ಯೋಗ್ಯತೆ ಇಲ್ಲ. ಎರಡು ಹೊತ್ತು ಊಟ ಕೊಡುವವರಿಗೂ ಒಂದು ಮಾತು ಅನ್ನುತ್ತಿದ್ದಾರೆ. ಇಂತಹವರಿಗೆ ಏನೇನನ್ನಬೇಕೋ ತಿಳಿಯುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
25ಕ್ವಿಂಟಾಲ್ ಮಾತ್ರ ಖರೀದಿ:
ಇನ್ನು ಮುಂದೆ ಪ್ರತಿ ರೈತರಿಂದ 25ಕ್ವಿಂಟಾಲ್ ತೊಗರಿಯನ್ನು ಮಾತ್ರ ಖರೀದಿಸಲಾಗುವುದು ಎಂದು ತಹಸೀಲ್ದಾರ್ ಎಂ.ಎಸ್. ಬಾಗವಾನ ತಿಳಿಸಿದರು. ಸರ್ಕಾರ ಏ. 6ರಂದು ಹೊಸ ಆದೇಶ ಮಾಡಿದ್ದು ಅದರಂತೆ ಪ್ರತಿ ರೈತರಿಂದ 25ಕ್ವಿಂಟಾಲ್ ಖರೀದಿ ಮಾಡಲಾಗುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಪಿಎಸೈ ಗರಂ:
ರೈತರು ಖಾಲಿ ಚೀಲ ಬರುವರೆಗೂ ರಸ್ತೆ ತಡೆ ನಡೆಸುವುದಾಗಿ ಹೇಳಿ ಇನ್ನೇನು ರಸ್ತೆ ತಡೆ ತೆರವುಗೊಳಿಸುವ ವೇಳೆ ರೈತರೊಬ್ಬರು ರಸ್ತಾ ಬಂದ್ ಮಾಡ್ರಿ ಎಂದಿದ್ದಕ್ಕೆ ಗರಂ ಆದ ಪಿಎಸೈ ಗೋವಿಂದಗೌಡ ಪಾಟೀಲ ಅವರು, ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದ ಘಟನೆಯೂ ನಡೆಯಿತು.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin