ನಮ್ಮ ಚೆಲುವ ಕನ್ನಡ ನಾಡು, ಪ್ರವಾಸಿಗರ ಸ್ವರ್ಗದ ಭೂರಮೆ

ಈ ಸುದ್ದಿಯನ್ನು ಶೇರ್ ಮಾಡಿ

ಕಲೆ, ಸಂಸ್ಕøತಿ , ಸಾಹಿತ್ಯ, ಇತಿಹಾಸ , ನೈಸರ್ಗಿಕ ಸೌಂದರ್ಯ ತವರೂರಾದ ಕರ್ನಾಟಕ ಪ್ರವಾಸಿಗರ ಸ್ವರ್ಗ.ರಾಜ್ಯದ ಅರಬ್ಬೀ ಸಮುದ್ರದ ಕಡಲ ತೀರದ ಸೊಬಗಿನ ಅಡಿಯಲ್ಲಿ ಮಿಂದೇಳುವ ಸ್ಥಳಗಳೆಲ್ಲಾ ಪ್ರವಾಸಿಗರನ್ನು ಕೈ ಬೀಸಿ ಕರೆಯುವುದು ಒಂದೆಡೆಯಾದರೆ ಕಲೆಯ ಬಲೆಯಲ್ಲಿ ಅರಳಿದ ಬೇಲೂರು , ಹಳೇಬೀಡು, ಐಹೊಳೆ, ಪಟ್ಟದ ಕಲ್ಲು , ಸೋಮನಾಥ ಪುರದಂತಹ ಹಲವಾರು ಶಿಲ್ಪಕಲಾ ವೈಭವದ ಸಂಗಮ ಎಂಥವರನ್ನೂ ಸೆಳೆಯದೆ ಇರದು.

ಕರ್ನಾಟಕ ಹಲವು ವೈಶಿಷ್ಟ್ಯಗಳ ಆಗರ. ಅದರಲ್ಲಿ ಪ್ರವಾಸೋದ್ಯಮ ಒಂದು ವಿಶಿಷ್ಟ ಅನುಭವ ಕಥನವಾಗದೆ ಇರದು. ಇತಿಹಾಸದ ದಿನಗಳಿಂದಲೂ ಕರ್ನಾಟಕದ ಪರಂಪರೆ , ಸಂಪ್ರದಾಯದ ಛಾಪು ಎಲ್ಲೆಡೆ ಪಸರಿಸಿದೆ. ಇಂದು ನೈಸರ್ಗಿಕ, ಐತಿಹಾಸಿಕ, ಧಾರ್ಮಿಕ, ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ ವಿಜ್ಞಾನ, ತಂತ್ರಜ್ಞಾನ , ಮಾಹಿತಿ ತಂತ್ರಜ್ಞಾನದಂತಹ ಆಧುನಿಕ ಜೀವನದ ಒತ್ತಾಸೆಯಲ್ಲೂ ಕನ್ನಡ ಮಣ್ಣಿನ ಕಂಪನ್ನು ಹರಡಿರುವ ರಾಜ್ಯ ಪ್ರವಾಸೋದ್ಯಮ ಕ್ಷೇತ್ರದಲ್ಲೂ ಹೆಗ್ಗುರುತು ಮೂಡಿಸುತ್ತಿದೆ.

ಜನಸಂಖ್ಯೆಯಲ್ಲಿ ಎಂಟನೇ ಅತಿ ದೊಡ್ಡ ರಾಜ್ಯವಾಗಿರುವ ಕರ್ನಾಟಕ 30 ಜಿಲ್ಲೆಗಳನ್ನೊಳಗೊಂಡು ಕನ್ನಡವೇ ಪ್ರಧಾನ ಭಾಷೆಯಾಗಿದ್ದರೂ ಕೊಂಕಣಿ, ಮರಾಠಿ, ತಮಿಳು, ತೆಲುಗು, ಮಲಯಾಳದಂತಹ ಭಾಷೆಗಳ ಜನರ ಒಗ್ಗೂಡಿಸಿಕೊಂಡು ಅವರ ಸಂಸ್ಕøತಿ, ಸೊಗಡನ್ನು ಮೀರಿ ಕರ್ನಾಟಕದ ವೈಶಿಷ್ಟ್ಯವನ್ನು ಬಿಂಬಿಸಿರುವ ಪ್ರದೇಶ. ಪ್ರಕೃತಿಯೇ ವರದಾನವಾಗಿರುವ ನಾಡಿನಲ್ಲಿ ಜೀವನದಿಗಳ ಸಮಾಗಮವೇ ಇದೆ. ಉತ್ತರದಲ್ಲಿ ಕೃಷ್ಣ, ಭೀಮಾ, ಘಟಪ್ರಭಾ, ವೇದಾವತಿ, ಮಲಪ್ರಭಾ, ತುಂಗಭದ್ರಾ, ಶಿವಮೊಗ್ಗದಲ್ಲಿ ಶರಾವತಿ ಆಯಾ ಜನರ ಅವಶ್ಯಕತೆಗಳಿಗೆ ಅನುಗುಣವಾಗಿ ಜೀವಸೆಲೆಯಾಗಿದ್ದರೆ ದಕ್ಷಿಣದಲ್ಲಿ ಕಾವೇರಿ, ಹೇಮಾವತಿ, ಶಿಂಷಾ, ಅರ್ಕಾವತಿ, ಲಕ್ಷ್ಮಣತೀರ್ಥ, ಕಬಿನಿ ಹರಿದು ಹಲವು ಧಾರ್ಮಿಕ ಕ್ಷೇತ್ರಗಳು ಮೈದಳೆದು ನಿಂತಿವೆ.

ಸನಾತನ ಸಂಸ್ಕøತಿಯಿಂದ ಹಿಡಿದು ಇತಿಹಾಸದ ಹಲವು ಸಾಕ್ಷಿಗಳು ಸಿಗುವ ತಾಣಗಳು ಕರ್ನಾಟಕದ ಅವಿಭಾಜ್ಯ ಅಂಗಗಳು. ಕೊಲ್ಲೂರು ಮೂಕಾಂಬಿಕೆ, ಶೃಂಗೇರಿ ಶಾರದಾಂಬಾ, ಧರ್ಮಸ್ಥಳ ಮಂಜುನಾಥ , ಕುಕ್ಕೆ ಸುಬ್ರಹ್ಮಣ್ಯ, ಗೋಕರ್ಣ, ಬೇಲೂರಿನ ಚನ್ನಕೇಶವ, ಮೇಲುಕೋಟೆಯ ಚೆಲುವನಾರಾಯಣ, ಮೈಸೂರಿನ ಚಾಮುಂಡಿ ಬೆಟ್ಟ, ಸಿಗಂದೂರು ಚೌಡೇಶ್ವರಿ, ಹೊರನಾಡು ಅನ್ನಪೂರ್ಣೇಶ್ವರಿ, ಹಾಸನಾಂಬೆ, ಕಳಸ, ಮಹದೇಶ್ವರ ಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ, ನಂಜನಗೂಡಿನ ನಂಜುಂಡೇಶ್ವರ, ಮುರುಡೇಶ್ವರ ಕ್ಷೇತ್ರಗಳು ಪುರಾತನ ಪವಿತ್ರ ಪುಣ್ಯ ಕ್ಷೇತ್ರವನ್ನಾಗಿ ಭಕ್ತರ ಮನೋಭಿಲಾಷೆ ಈಡೇರಿಸುವ ತಾಣಗಳಾಗಿ ಪ್ರಸಿದ್ಧಿ ಪಡೆದಿವೆ. ರಾಜ-ಮಹಾರಾಜರು ಆಳಿ ಹೋದ ಕರ್ನಾಟಕದ ಮೂಲೆ ಮೂಲೆಯಲ್ಲೂ ಗತ ವೈಭವದ ಕುರುಹುಗಳು ಸಾಲು ಸಾಲಾಗಿ ದೊರೆಯುತ್ತವೆ. ಕದಂಬ, ಚಾಲುಕ್ಯ, ಬಾದಾಮಿ, ಬನವಾಸಿ, ಚಾಲುಕ್ಯ, ರಾಷ್ಟ್ರಕೂಟ, ಮಾನ್ಯಕೇಟ, ಹೊಯ್ಸಳ, ಚೋಳ, ಚೇರ, ವಿಜಯನಗರ, ಒಡೆಯರ್ ಸಂಸ್ಥಾನದ ರಾಜರು ಆಯಾ ಕಾಲದಲ್ಲಿ ಕಟ್ಟಿದ ಕೋಟೆ ಕೊತ್ತಲಗಳು, ದೇವಸ್ಥಾನಗಳು, ಬದುಕಿ ಬಾಳಿದ ಅರಮನೆಗಳು ಎಲ್ಲವೂ ಇದ್ದು ಪ್ರಾಚೀನ ಸಂಸ್ಕøತಿಯ ಧ್ಯೋತಕಗಳಾಗಿ ನೆಲೆ ನಿಂತಿವೆ.

ನಮ್ಮ ಇತಿಹಾಸವನ್ನು ಹಾಡಿ ಹೊಗಳಿದ ಕವಿ ಮಹಾಶಯರಾದಿಯಾಗಿ ಹಲವು ವಿದ್ವಾಂಸರ ನೆಲೆ ವೀಡಾದ ಕರ್ನಾಟಕದಲ್ಲಿ ಮೈಸೂರಿಗೆ ಸಾಂಸ್ಕøತಿಕ ನಗರಿಯ ಪಟ್ಟವೇ ಸಿಕ್ಕರೆ ಚಿತ್ರದುರ್ಗ, ಒನಕೆ ಓಬವ್ವನ ತಾಯ್ನಾಡ ಪ್ರೇಮಕ್ಕೆ ಸಾಕ್ಷಿಯಾಗಿ ಅಲ್ಲಿನ ಕೋಟೆಗಳು ಆಕೆಯ ಕಥೆಯನ್ನು ಮಾರ್ಧನಿಸುತ್ತಿವೆ.
ಬಿಜಾಪುರದ ಗೋಲ್ ಗುಂಬಜ್ ವಿಶಿಷ್ಟ ತಂತ್ರ ಜ್ಞಾನದೊಂದಿಗೆ ಅಂದಿನ ದಿನಗಳಲ್ಲೇ ಒಂದು ಬಾರಿ ಹೇಳಿದ ಶಬ್ಧ ಏಳು ಬಾರಿ ಪ್ರತಿಧ್ವನಿಸುವಂತೆ ನಿರ್ಮಿಸಿರುವುದು ಎಂತಹವರನ್ನು ಸೆಳೆಯುತ್ತದೆ.

ಬೇಲೂರು- ಹಳೇಬೀಡು, ಹಂಪೆಯ ಶಿಲ್ಪಕಲೆಗಳು ಕಲೆಯ ಉನ್ನತ ಶಿಖರಗಳಲ್ಲಿ ಕಂಗೊಳಿಸುತ್ತಿವೆ. ಕಲ್ಲಿನಲ್ಲಿ ಅರಳಿದ ಕಲೆಯ ಕೌತುಕಗಳು ಇಲ್ಲಿನ ಅತಿ ವಿಶಿಷ್ಟಗಳಲ್ಲಿ ವಿಶಿಷ್ಟ. ಕಲ್ಲಿನಲ್ಲಿ ನಿರ್ಮಾಣಗೊಂಡ ದೇವಾಲಯಗಳಿಗೆ ಕೆತ್ತನೆಗಳೇ ಭೂಷಣ. ಶಿಲಾ ಬಾಲಿಕೆಯರಿಂದ ಹಿಡಿದು ಸಾಸಿವೆ ಗಣಪತಿ, ಕಲ್ಲಿನ ರಥ, ಸರಪಳಿಯನ್ನು ಕಲ್ಲಿನಲ್ಲೇ ಕಡೆದು ನಿಲ್ಲಿಸಿರುವುದು ಕಲಾಕಾರರ ನೈಪುಣ್ಯತೆಯನ್ನು ಪ್ರತಿಬಿಂಬಿಸಿದೆ.

ನಮ್ಮನ್ನಾಳಿದ ರಾಜ-ಮಹಾರಾಜರು ಸಾಮ್ರಾಜ್ಯ ವಿಸ್ತರಣೆಯ ಜತೆ ಜತೆಗೆ ಕನ್ನಡ ನಾಡಿನ ಕಲಾ ರಸಿಕರಿಗೆ, ಕಲಾವಿದರಿಗೆ, ಕವಿ ಪುಂಗವರಿಗೆ, ವಿದ್ವಾಂಸರಿಗೆ ಹಾಗೂ ವಿದ್ಯಾ ಕ್ಷೇತ್ರಕ್ಕೆ ನೀಡಿದ ಆದ್ಯತೆಯಿಂದಲೇ ಕರ್ನಾಟಕ 2000 ವರ್ಷಗಳ ಹಿಂದೆಯೇ ಕನ್ನಡದ ಲಿಪಿಯನ್ನು ಬಳಸುವಂತಾಗಿತ್ತು.
ಹಲ್ಮಿಡಿ ಶಾಸನ ರಚನೆಗೂ ಬಹಳಷ್ಟು ವರ್ಷಗಳ ಹಿಂದೆಯೇ ಕನ್ನಡ ಭಾಷೆ ಸಾಕಷ್ಟು ಪ್ರಬುದ್ಧವಾಗಿ ಬೆಳೆದಿತ್ತು ಎಂಬುದಕ್ಕೆ ನಿದರ್ಶನವಾಗಿದೆ. ಇದಕ್ಕೆಲ್ಲಾ ಜನಸಾಮಾನ್ಯರ ಆಡು ಭಾಷೆ ಸೇರಿದಂತೆ ಪಂಡಿತರ ಭಾಷೆಯನ್ನೂ ಬೆಳೆಸಿದ ಕೀರ್ತಿ ಸಲ್ಲುತ್ತದೆ. ಇಂದು ಕನ್ನಡ ಭಾಷೆ, ಭಾಷಾ ಹಿರಿಮೆ-ಗರಿಮೆಯಿಂದಲೇ ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕೆ ಪಾತ್ರವಾಗಿರುವುದಲ್ಲದೇ ಸಾಹಿತ್ಯ ಕ್ಷೇತ್ರದಲ್ಲಿ ನೀಡುವ ಉನ್ನತ ಪ್ರಶಸ್ತಿ ಎನಿಸಿದ ಜ್ಞಾನಪೀಠಕ್ಕೆ ಕನ್ನಡದ 8 ಸಾಹಿತಿಗಳು ಭಾಜನರಾಗಿರುವುದು ನಮ್ಮ ಸುದೈವವೇ ಸರಿ.

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಸಮುದ್ರ ಮಟ್ಟದಿಂದ 1929 ಮೀಟರ್ ಎತ್ತರದಲ್ಲಿದ್ದು, ದೇಶದಲ್ಲೇ ಅತಿ ಎತ್ತರದ ಬೆಟ್ಟ ಎಂಬ ಖ್ಯಾತಿಗೂ ಪಾತ್ರವಾಗಿದೆ. ಜೋಗ ಜಲಪಾತ ಭಾರತದ ಅತಿ ಎತ್ತರದ ಜಲಪಾತವೆನಿಸಿದ್ದು, ಗೋಕಾಕ್, ಉಂಚಳ್ಳಿ ಮಾಗೋಡು, ಅಬ್ಬೆ ಹಾಗೂ ಶಿವನಸಮುದ್ರ ಜಲಪಾತಗಳು ರುದ್ರ ರಮಣೀಯತೆಯಿಂದ ಮೇಳೈಸಿರುವ ಜಲಸಿರಿಗಳು.ವಿಶ್ವ ಭೂಪಟದಲ್ಲಿ ಬೇಲೂರು, ಹಳೆಬೀಡು ಹಂಪೆ, ಬಾದಾಮಿಯ ಗುಹಾಂತರ ದೇವಾಲಯ ಪಟ್ಟಣದಲ್ಲಿನ ಮಲ್ಲಿಕಾರ್ಜುನ ಹಾಗೂ ಕಾಶಿ ವಿಶ್ವನಾಥ ದೇಗುಲಗಳನ್ನು ಪಾರಂಪರಿಕ ತಾಣಗಳೆಂದು ಯುನೆಸ್ಕೋ ಘೋಷಿಸಿದೆ.

ರಾಜ್ಯದಲ್ಲಿ 25 ವನ್ಯಜೀವಿ ಅಭಯಾರಣ್ಯಗಳಿದ್ದು, ಐದು ರಾಷ್ಟ್ರೀಯ ಪಾರ್ಕ್‍ಗಳಿದ್ದು, ಅದರಲ್ಲಿ ಬಂಡಿಪುರ, ಬನ್ನೇರುಘಟ್ಟ, ನಾಗರಹೊಳೆಗಳು ಜೀವವೈವಿಧ್ಯ ತಾಣಗಳಾಗಿವೆ.  ಹಸಿರ ಸಿರಿಯಲ್ಲಿ ಮಿಂದೆದ್ದಿರುವ ಮಡಿಕೇರಿ, ಆಗುಂಬೆ, ಕುದುರೆಮುಖ ಪರಿಸರ ಪ್ರವಾಸೋದ್ಯಮಕ್ಕೆ ಇಂಬು ನೀಡುತ್ತಿರುವ ಸ್ಥಳಗಳು. ಅತಿಹೆಚ್ಚು ಮಳೆ ಬೀಳುವ ಆಗುಂಬೆಯಲ್ಲಿನ ವಾತಾವರಣದ ಬಗ್ಗೆ ಬೇರೆ ಹೇಳಬೇಕಿಲ್ಲ.

ಆರೋಗ್ಯ ಪ್ರವಾಸೋದ್ಯಮಕ್ಕೂ ಹೆಸರಾದ ಕರ್ನಾಟಕ ಆಯುರ್ವೇದದ ಅಗಾಧ ಚಿಕಿತ್ಸಾ ಪದ್ಧತಿಗಳನ್ನು ಅಂದಿನಿಂದಲೂ ಬಳಸುತ್ತ ಇಂದಿಗೂ ಉಳಿಸಿ-ಬೆಳೆಸಿಕೊಂಡಿರುವುದಲ್ಲದೆ ಅತ್ಯಾಧುನಿಕ ಹೈಟೆಕ್ ಆಸ್ಪತ್ರೆಗಳಿಂದಲೂ ಪ್ರತಿ ವರ್ಷ 8000 ಮಂದಿ ಹೆಲ್ತ್ ಟೂರಿಸ್ಟ್‍ಗಳಾಗಿ ರಾಜ್ಯಕ್ಕೆ ಆಗಮಿಸಿ ಸೌಲಭ್ಯ ಪಡೆಯುವಷ್ಟು ಮುಂಚೂಣಿ ಸಾಧಿಸಿದೆ.

Facebook Comments