‘ನಮ್ಮ ಮೆಟ್ರೋ’ ಗೆ ಫುಲ್ ರೆಸ್ಪಾನ್ಸ್, ಒಂದೇ ದಿನದಲ್ಲಿ ಲಕ್ಷಾಂತರ ಮಂದಿ ಪ್ರಯಾಣ

ಈ ಸುದ್ದಿಯನ್ನು ಶೇರ್ ಮಾಡಿ

Metro--01

ಬೆಂಗಳೂರು, ಜೂ.19- ಉತ್ತರ-ದಕ್ಷಿಣ ಕಾರಿಡಾರ್‍ನ ಸಂಪಿಗೆ ನಿಲ್ದಾಣದಿಂದ ಯಲಚೇನಹಳ್ಳಿ ನಿಲ್ದಾಣದವರೆಗಿನ ಮೆಟ್ರೋ ಪ್ರಯಾಣಕ್ಕೆ ನಿನ್ನೆಯಷ್ಟೇ ಅಲ್ಲ ಇಂದೂ ಕೂಡ ನೂಕು ನುಗ್ಗಲುಂಟಾಗಿತ್ತು. ನಿನ್ನೆ ನಮ್ಮ ಮಾರ್ಗದಲ್ಲಿ ಮೆಟ್ರೋ ಬಂದಿದೆ ಎಂಬ ಕ್ರೇಜ್‍ಗೆ ಇಷ್ಟು ಪ್ರಮಾಣದ ಜನ ಬಂದಿದ್ದರು ಎಂದು ಅಂದಾಜಿಸಲಾಗಿತ್ತು. ಆದರೆ, ಇಂದು ಬೆಳಗ್ಗೆ ಮೆಟ್ರೋಗೆ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಂಡಿತ್ತು. ಬೆಳಗ್ಗೆಯಿಂದ ಮೆಟ್ರೋದಲ್ಲಿ ಪ್ರಯಾಣಿಸುವವರು ತಮ್ಮ ಬೈಕ್, ಕಾರುಗಳಲ್ಲಿ ಆಗಮಿಸಿ ಮೆಟ್ರೋ ಸ್ಟೇಷನ್‍ಗಳಲ್ಲಿ ನಿಲ್ಲಿಸಿ ತೆರಳುತ್ತಿದ್ದದ್ದು ಕಂಡು ಬಂತು.

ಬೆಳಗ್ಗೆ ಲಾಲ್‍ಬಾಗ್‍ಗೆ ವಾಕಿಂಗ್‍ಗೆ ಬರುವವರು ಕೂಡ ಇಂದು ಬಹುತೇಕರು ಮೆಟ್ರೋದಲ್ಲಿ ಬಂದು ವಾಕಿಂಗ್ ಮುಗಿಸಿಕೊಂಡು ಮೆಟ್ರೋದಲ್ಲೇ ತೆರಳಿದರು. ತಮ್ಮ ದ್ವಿಚಕ್ರ ವಾಹನ, ಕಾರುಗಳ ಮೂಲಕ ಪ್ರಯಾಸಪಟ್ಟು ಕಬ್ಬನ್‍ಪಾರ್ಕ್‍ಗೆ ಬಂದು ವಾಕಿಂಗ್ ಮಾಡುತ್ತಿದ್ದವರು ಇಂದು ನಿರಾಯಾಸವಾಗಿ ವಿವಿಧೆಡೆಯಿಂದ ಕಬ್ಬನ್‍ಪಾರ್ಕ್‍ಗೆ ಆಗಮಿಸಿ ವಾಕಿಂಗ್ ಮುಗಿಸಿ ಮತ್ತೆ ಮೆಟ್ರೋದಲ್ಲಿ ತೆರಳಿದ್ದು ವಿಶೇಷವಾಗಿತ್ತು.   ಮೆಜೆಸ್ಟಿಕ್, ಸಂಪಿಗೆ ನಿಲ್ದಾಣ, ಕೆ.ಆರ್.ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಮೆಟ್ರೋ ರೈಲು ಇಂದು ಬೆಳ್ಳಂಬೆಳಗ್ಗೆ ಪ್ರಯಾಣಿಕರಿಂದ ಗಿಜಿಗುಡುತ್ತಿತ್ತು. ಕೆಂಪೇಗೌಡ ನಿಲ್ದಾಣದಲ್ಲಿ ಭಾರೀ ಪ್ರಮಾಣದಲ್ಲಿ ವಾಹನಗಳ ಪಾರ್ಕಿಂಗ್ ಮಾಡಿ ಜನ ಮೆಟ್ರೋಗೆ ಆಗಮಿಸುತ್ತಿದ್ದರು. ಇಂಟರ್‍ಚೇಂಜ್ ನಿಲ್ದಾಣದಲ್ಲಿ ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ಕಾರಿಡಾರ್ ನಡುವೆ ಮಾರ್ಗ ಬದಲಾಯಿಸುವ ಪ್ರಯಾಣಿಕರಿಗೆ ಗೊಂದಲ ಉಂಟಾಗಿತ್ತು. ಮೆಟ್ರೋ ಸಿಬ್ಬಂದಿ ಗೊಂದಲ ನಿವಾರಿಸುವ ಪ್ರಯತ್ನ ಮಾಡುತ್ತಿದ್ದರು.

Metro--02

ಕೆಲವರಿಗಂತೂ ಮೆಟ್ರೋ ಪ್ರಯಾಣ ತೀವ್ರ ಪುಳಕ ಉಂಟು ಮಾಡಿತ್ತು. ನಾವು ಎಲ್ಲಿ ಹತ್ತಿದ್ದೇವೆ. ಎಲ್ಲಿ ಇಳಿಯುತ್ತಿದ್ದೇವೆ ಎಂಬುದೇ ತಿಳಿಯುತ್ತಿರಲಿಲ್ಲ. ನಿಲ್ದಾಣದಿಂದ ಹೊರ ಬಂದರಷ್ಟೇ ಹೋ… ಅಬ್ಬಾ… ನಾವಿಲ್ಲಿದ್ದೇವೆ ಎಂದು ನಿಟ್ಟುಸಿರುಬಿಡುತ್ತಿದ್ದದ್ದು ಕಂಡು ಬಂತು.  ಬಹುರಾಷ್ಟ್ರೀಯ ಕಂಪೆನಿಗಳಿಗೆ , ರವಿಶಂಕರ್‍ಗುರೂಜಿ ಆಶ್ರಮಕ್ಕೆ, ಜಯನಗರ, ಜೆ.ಪಿ.ನಗರ ಮುಂತಾದ ಕಡೆ ತೆರಳಲು ಸಾಕಷ್ಟು ಜನ ಇಂದು ಮೆಟ್ರೋ ಬಳಸಿದರು. ಇದರಿಂದ ಈ ಭಾಗದ ಸಂಚಾರ ದಟ್ಟಣೆ ಕೊಂಚ ಕಡಿಮೆಯಾದಂತೆ ಎನಿಸಿತು.

ಆರೋಗ್ಯ, ಇಂಧನ, ಸಮಯ ಉಳಿತಾಯ, ಪರಿಸರ ಮಾಲಿನ್ಯ ನಿಯಂತ್ರಣ ಎಲ್ಲವೂ ಈ ಮೆಟ್ರೋದಿಂದ ಆಗುತ್ತಿದೆ ಎಂದು ಮೆಟ್ರೋ ಪ್ರಯಾಣಿಕರು ಮಾತನಾಡಿಕೊಳ್ಳುತ್ತಾ ಪ್ರಯಾಣಿಸುತ್ತಿದ್ದದ್ದು ಕೇಳಿ ಬಂತು.   ನಿನ್ನೆಯಷ್ಟೇ ವಾಣಿಜ್ಯ ಪ್ರಯಾಣ ಆರಂಭಿಸಿದ ನಮ್ಮ ಮೆಟ್ರೋಗೆ ಸಂಜೆ 4 ಗಂಟೆಯಿಂದ ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಿದ ಸಂದರ್ಭದಲ್ಲಿ ನಾಗಸಂದ್ರ ಮತ್ತು ಯಲಚೇನಹಳ್ಳಿ ಮಾರ್ಗದಲ್ಲಿ 60ಸಾವಿರಕ್ಕೂ ಹೆಚ್ಚು ಜನ ಪ್ರಯಾಣಿಸಿದರೆ, ಪೂರ್ವ-ಪಶ್ಚಿಮ ಹಾಗೂ ಉತ್ತರ-ದಕ್ಷಿಣ ಎರಡೂ ಕಾರಿಡಾರ್ ಮಾರ್ಗದಲ್ಲಿ ಬರೊಬ್ಬರಿ 1.17 ಲಕ್ಷ ಜನ ಪ್ರಯಾಣಿಸಿದರು.

Metro--03

ಇಂದು ಅದಕ್ಕಿಂತ ಹೆಚ್ಚು ಮಂದಿ ಮೆಟ್ರೋದಲ್ಲಿ ಪ್ರಯಾಣಿಸಿದರು. ಕೆಲವರು ಮೆಟ್ರೋ ಪ್ರಯಾಣದ ಮೋಜು ಅನುಭವಿಸಿದರೆ ಮತ್ತೆ ಕೆಲವರು ಮೆಟ್ರೋ ಪ್ರಯಾಣದಿಂದ ಆಗುವ ಲಾಭ, ನಷ್ಟಗಳ ಲೆಕ್ಕಾಚಾರ ಹಾಕಿ ಪ್ರಯಾಣಿಸುತ್ತಿದ್ದದ್ದು ಗೋಚರಿಸಿತು.  ಬೆಂಗಳೂರು ಮಹಾನಗರಕ್ಕೆ ಸಂಚಾರ ದಟ್ಟಣೆ ಸಾರ್ವತ್ರಿಕ ಸಮಸ್ಯೆಯಾಗಿದೆ. ಇದು ನಿವಾರಣೆಯಾದರೆ ಸಾರ್ವಜನಿಕರು ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂಬುದಕ್ಕೆ ಇಂದಿನ ಮೆಟ್ರೋ ಪ್ರಯಾಣವೇ ಉದಾಹರಣೆ.

Metro--04

ಟ್ರಾಫಿಕ್‍ಜಾಮ್‍ನಿಂದ ಜನ ಅಷ್ಟು ಬೇಸತ್ತಿದ್ದಾರೆ. ಟ್ರಾಫಿಕ್ ಕಿರಿಕಿರಿ, ವಾಯುಮಾಲಿನ್ಯ, ಸಮಯದ ಅಭಾವ ಈ ಎಲ್ಲದರಿಂದ ಮೆಟ್ರೋ ಪ್ರಯಾಣ ಮುಕ್ತಿ ದೊರೆಕಿಸುತ್ತದೆ. ಹಾಗಾಗಿ ಸ್ವಲ್ಪ ಕಷ್ಟವಾದರೂ ಸರಿ ಮೆಟ್ರೋದಲ್ಲಿ ಪ್ರಯಾಣಿಸುತ್ತೇವೆ ಎಂದು ಬಹುತೇಕ ಜನ ಮಾತನಾಡಿಕೊಳ್ಳುತ್ತಿದ್ದದ್ದು ಕಂಡು ಬಂತು.
ಇಂದು ವಿಧಾನಸೌಧ, ಬಹುಮಹಡಿ ಕಟ್ಟಡ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳಿಗೆ ನಗರದ ವಿವಿಧೆಡೆಗಳಿಂದ ಆಗಮಿಸುವ ಬಹುತೇಕರು ಮೆಟ್ರೋದಲ್ಲೇ ಬಂದಿಳಿದರು.

ಮೊದಲ ಹಂತ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರತೀ ದಿನ 5ಲಕ್ಷ ಪ್ರಯಾಣಿಕರಿಗೆ ಮೆಟ್ರೋ ಸೌಲಭ್ಯಸಿಗಲಿದೆ. ಆದರೆ, ನಿಲ್ದಾಣಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲು ಇನ್ನೂ ಹೆಚ್ಚಿನ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿ ಮೆಟ್ರೋ ಎಲ್ಲಾ ಹಂತಗಳೂ ಪೂರ್ಣಗೊಂಡರೆ ಬೆಂಗಳೂರು ಸ್ವರ್ಗದಂತೆ ಭಾಸವಾಗುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin