‘ನಮ್ಮ ರಾಜ್ಯಕ್ಕೆ ಕನ್ನಡಿಗರನ್ನು ರಾಜ್ಯಪಾಲರನ್ನಾಗಿ ನೇಮಿಸಬೇಡಿ’ : ಜಯಾ ಹೊಸ ಖ್ಯಾತೆ

ಈ ಸುದ್ದಿಯನ್ನು ಶೇರ್ ಮಾಡಿ

Jayalalitha

ಬೆಂಗಳೂರು, ಆ.16- ನಾಡು-ನುಡಿ, ಜಲದ ವಿಷಯದಲ್ಲಿ ಪದೇ ಪದೇ ಕ್ಯಾತೆ ತೆಗೆಯುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಇದೀಗ ರಾಜ್ಯಪಾಲರ ವಿಷಯದಲ್ಲೂ ತಮ್ಮ ವರಸೆ ತೋರಿಸಿ ಕನ್ನಡಿಗರೊಬ್ಬರನ್ನು ತಮ್ಮ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ನೇಮಕ ಮಾಡುವುದು ಬೇಡ ಎಂದಿದ್ದಾರೆ.   ಎಲ್ಲವೂ ನಿರೀಕ್ಷೆಯಂತೆ ನಡೆದರೆ ಹಾಲಿ ವಿಧಾನ ಪರಿಷತ್ ಸಭಾಪತಿಯಾಗಿರುವ ಡಿ.ಎಚ್.ಶಂಕರಮೂರ್ತಿ ಅವರು ಈ ತಿಂಗಳ ಅಂತ್ಯಕ್ಕೆ ತಮಿಳುನಾಡಿನ ರಾಜ್ಯಪಾಲರಾಗಿ ನೇಮಕವಾಗುವುದು ಬಹುತೇಕ ಖಚಿತವಾಗಿದೆ.   ಈಗಾಗಲೇ ಬಿಜೆಪಿ ಕೇಂದ್ರ ವರಿಷ್ಠರು ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಶಂಕರಮೂರ್ತಿ ನೇಮಕಕ್ಕೆ ರಾಷ್ಟ್ರಪತಿಯವರೊಂದಿಗೆ ಚರ್ಚಿಸಿದ್ದಾರೆ. ಈ ತಿಂಗಳ 31ಕ್ಕೆ ತಮಿಳು ನಾಡು ರಾಜ್ಯಪಾಲರಾಗಿರುವ ಡಿ.ರೋಸಯ್ಯ ನಿವೃತ್ತರಾಗಲಿದ್ದಾರೆ.  ತೆರವಾಗಲಿರುವ ಈ ಸ್ಥಾನಕ್ಕೆ ಶಂಕರಮೂರ್ತಿಯವರನ್ನು ನೇಮಕ ಮಾಡಲು ಈಗಾಗಲೇ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ.

 ಕ್ಯಾತೆ ತೆಗೆದ ಜಯಲಲಿತಾ:

ಕಾವೇರಿ ನದಿಯ ಕುಡಿಯುವ ನೀರು, ನೆಲ-ಜಲ ಭಾಷೆ ವಿಷಯದಲ್ಲಿ ಯಾವಾಗಲೂ ಪದೇ ಪದೇ ವಿವಾದ ಸೃಷ್ಟಿಸುವ ಜಯಲಲಿತಾ ರಾಜ್ಯಪಾಲರ ವಿಷಯದಲ್ಲೂ ತಮ್ಮ ಹಳೆ ಬುದ್ಧಿಯನ್ನೇ ತೋರಿಸಿದ್ದಾರೆ.   ಗೃಹಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿರುವ ಅವರು, ಯಾವುದೇ ಕಾರಣಕ್ಕೂ ಕನ್ನಡಿಗರೊಬ್ಬರನ್ನು ತಮಿಳುನಾಡಿಗೆ ರಾಜ್ಯಪಾಲರನ್ನಾಗಿ ನೇಮಕ ಮಾಡುವುದು ಸೂಕ್ತವಲ್ಲ ಎಂದು ತಗಾದೆ ಮಾಡಿದ್ದಾರೆ.  ತಮ್ಮ ರಾಜ್ಯಕ್ಕೆ ರಾಜ್ಯಪಾಲರನ್ನು ನೇಮಕ ಮಾಡುವುದಾದರೆ ಇತ್ತೀಚೆಗಷ್ಟೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಗುಜರಾತ್‍ನ ಆನಂದಿ ಬೆನ್ ಪಟೇಲ್ ಅವರನ್ನು ನೇಮಿಸುವಂತೆ ಕೋರಿದ್ದಾರೆ.

ಯಾವುದೇ ಒಂದು ರಾಜ್ಯಕ್ಕೆ ರಾಜ್ಯಪಾಲರನ್ನು ನೇಮಕ ಮಾಡುವುದು ಕೇಂದ್ರ ಸರ್ಕಾರದ ವಿವೇಚನೆಗೆ ಬಿಟ್ಟಿದ್ದು. ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ರಾಜ್ಯಕ್ಕೆ ಇಂಥವರನ್ನು ನೇಮಕ ಮಾಡುವುದು ಬೇಡ ಎಂದು ಹೇಳುವ ಪರಮಾಧಿಕಾರ ಯಾರಿಗೂ ಇಲ್ಲ.   ಆದರೆ, ಕರ್ನಾಟಕ ಮತ್ತು ಕನ್ನಡಿಗರ ವಿರುದ್ಧ ಸದಾ ಕತ್ತಿ ಮಸೆಯುವ ತಮಿಳುನಾಡು ಮುಖ್ಯಮಂತ್ರಿ, ರಾಜ್ಯಪಾಲರ ನೇಮಕದಲ್ಲೂ ಈ ರೀತಿ ಅಸೂಯೆ ಸಾಧಿಸುವುದು ಮುಖ್ಯಮಂತ್ರಿ ಸ್ಥಾನದಲ್ಲಿರುವರ ಜಯಲಲಿತಾ ಅವರಿಗೆ ಶೋಭೆ ತರುವುದಿಲ್ಲ.

ಈ ಹಿಂದೆ ತಮಿಳುನಾಡು ಮೂಲದ ಬಾಲಕೃಷ್ಣನ್ ಅವರು ಕರ್ನಾಟಕ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ವೇಳೆ ಕರ್ನಾಟಕ ಸರ್ಕಾರ ಅವರನ್ನು ನೇಮಕ ಮಾಡಬಾರದೆಂದು ಹೇಳಿದ್ದರೆ ಪರಿಸ್ಥಿತಿ ಹೇಗಾಗಬಾರದಿತ್ತು. ಮೂರು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕಾವೇರಿ ಕೊಳ್ಳದ ಜಲಾಶಯಗಳ ಸ್ಥಿತಿಗತಿ ಕುರಿತು ಸಭೆ ನಡೆದಿತ್ತು.
ಕರ್ನಾಟಕದಲ್ಲಿ ಈ ಭಾರೀ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಸಂಕಷ್ಟ ಸೂತ್ರದ ಪ್ರಕಾರ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂಬ ತೀರ್ಮಾನ ಕೈಗೊಳ್ಳಲಾಗಿತ್ತು. ಕಾಕತಾಳೀಯ ಎಂಬಂತೆ ಸಭೆ ನಡೆದ ಮೂರು ದಿನಗಳಲ್ಲೇ ಜಯಲಲಿತ ವಕ್ರದೃಷ್ಟಿ ಶಂಕರಮೂರ್ತಿಯವರ ಮೇಲೆ ಬಿದ್ದಿದೆ.

► Follow us on –  Facebook / Twitter  / Google+

Facebook Comments

Sri Raghav

Admin