ನಮ್ಮ ಸರ್ಕಾರ ಒಬ್ಬ ದಕ್ಷ ಮಂತ್ರಿಯನ್ನು ಕಳೆದುಕೊಂಡಿದೆ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

cm

ಬೆಂಗಳೂರು, ಜ.3- ನನ್ನ ಅತ್ಯಂತ ಆಪ್ತರಲ್ಲಿ ಒಬ್ಬರಾಗಿದ್ದ ಮಹದೇವಪ್ರಸಾದ್ ಅವರ ನಿಧನದಿಂದ ನನಗೆ ತುಂಬಾ ನೋವಾಗಿದೆ. ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಶೋಕ ವ್ಯಕ್ತಪಡಿಸಿದರು. ಎಚ್.ಎಸ್.ಮಹದೇವಪ್ರಸಾದ್ ಅವರು ಒಂದು ದಿನವೂ ಯಾರನ್ನೂ ಬೈಯ್ದಿದ್ದನ್ನು ನಾನು ನೋಡಿರಲಿಲ್ಲ. ಅತ್ಯಂತ ಮಿತಭಾಷಿ, ಅಜಾತಶತ್ರು, ರಾಜಕೀಯ ಜೀವನದಲ್ಲಿ ಒಂದೂ ಕಪ್ಪು ಚುಕ್ಕಿ ಇರಲಿಲ್ಲ. ಅಂತಹ ಉತ್ತಮ ಸ್ನೇಹಿತನನ್ನು ಕಳೆದುಕೊಂಡಿರುವುದು ನನಗೆ ತುಂಬಲಾರದ ದುಃಖ, ನಷ್ಟವಾಗಿದೆ ಎಂದು ಹೇಳಿದರು. ಚಾಮರಾಜನಗರದಲ್ಲಿ ಕಾಂಗ್ರೆಸ್ ಗೆಲುವಿಗೆ ಅವರೇ ಕಾರಣ. ತುಂಬಾ ಸಜ್ಜನ ಹಾಗೂ ಸುಸಂಸ್ಕøತ ರಾಜಕಾರಣಿ. ನಮ್ಮ ಸರ್ಕಾರ ಒಬ್ಬ ದಕ್ಷ ಮಂತ್ರಿಯನ್ನು ಕಳೆದುಕೊಂಡಿದೆ ಎಂದರು.

ಐದು ಬಾರಿ ಸತತವಾಗಿ ಗೆದ್ದಿದ್ದರು. ಇನ್ನೂ ಎಷ್ಟು ಬಾರೀ ಸ್ರ್ಪಸಿದ್ದರೂ ಅವರು ಗೆಲ್ಲುತ್ತಿದ್ದರು. ಅಂತಹ ಮೇರು ವ್ಯಕ್ತಿತ್ವ ಮಹದೇವಪ್ರಸಾದ್ ಅವರದು ಎಂದು ಸಿದ್ದರಾಮಯ್ಯ ಗದ್ಗದಿತರಾದರು.   ಜನತಾದಳದಲ್ಲಿದ್ದ ಮಹದೇವಪ್ರಸಾದ್ ನಂತರ ಕಾಂಗ್ರೆಸ್‍ಗೆ ಬಂದಿದ್ದರು. ಇವರು ಯಾವುದೇ ಪಕ್ಷದಲ್ಲಿದ್ದರೂ 100ಕ್ಕೆ ನೂರಷ್ಟು ಪಕ್ಷ ನಿಷ್ಠೆಯಿಂದ ಇರುತ್ತಿದ್ದರು. ಅವರಿಗೆ ಇನ್ನೂ 58 ವರ್ಷ ವಯಸ್ಸಾಗಿತ್ತು. ಬಹಳಷ್ಟು ದಿನಗಳು ಬದುಕು ಬಾಳಬೇಕಾಗಿತ್ತು. ಸಾವು ಎಷ್ಟು ಅನಿಶ್ಚಿತ ಎಂಬುದಕ್ಕೆ ಇದು ಉದಾಹರಣೆ ಎಂದು ಭಾವುಕರಾದರು.  ಅವರ ಪತ್ನಿ ಕೂಡ ಪಿಎಚ್‍ಡಿ ಪಡೆದವರಾಗಿದ್ದು, ಆಂಗ್ಲ ಭಾಷೆಯಲ್ಲಿ ಸಾಹಿತ್ಯ ಬರೆಯುತ್ತಿದ್ದಾರೆ. ಒಬ್ಬ ಮಗನಿದ್ದು, ಇತ್ತೀಚೆಗಷ್ಟೆ ಮೊಮ್ಮಗ ಜನಿಸಿದ್ದನು.  ಸಚಿವ ಸ್ಥಾನ, ಪಕ್ಷದ ಹುದ್ದೆ ಸೇರಿದಂತೆ ಯಾವುದೇ ಜವಾಬ್ದಾರಿ ಕೊಟ್ಟರೂ ಅಚ್ಚುಕಟ್ಟಾಗಿ ನೆರವೇರಿಸುತ್ತಿದ್ದರು ಎಂದರು. ಅವರ ಕುಟುಂಬದವರೊಂದಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin