ನರಭಕ್ಷಕನಿಗೆ 7  ಬಲಿ : ಭೀತಿಯಲ್ಲಿರುವ ಜನರು

ಈ ಸುದ್ದಿಯನ್ನು ಶೇರ್ ಮಾಡಿ

Pilibhit

ಪಿಲಿಭಿಟ್, ಫೆ.19-ಉತ್ತರ ಪ್ರದೇಶ ಪಿಲಿಭಿಟ್ ಹುಲಿ ಅಭಯಾರಣ್ಯ ಪ್ರದೇಶದ ಸುತ್ತಮುತ್ತ ಇರುವ 30 ಗ್ರಾಮಗಳಲ್ಲಿ ನರಭಕ್ಷಕ ವ್ಯಾಘ್ರಗಳ ಭೀತಿಯ ಆತಂಕದ ಕಾರ್ಮೋಡ ಕವಿದಿದೆ. ಮನುಷ್ಯರ ಮಾಂಸದ ರುಚಿ ನೋಡಿರುವ ಎರಡು ಹುಲಿಗಳು ಮೂರು ತಿಂಗಳ ಅವಧಿಯಲ್ಲಿ ಏಳು ಗ್ರಾಮಸ್ಥರನ್ನು ಕೊಂದು ತಿಂದಿವೆ. ನರಘಾತುಕ ವ್ಯಾಘ್ರಗಳ ಹಾವಳಿಯಿಂದಾಗಿ ಈ ಗ್ರಾಮಗಳಲ್ಲಿ ಈಗ ಅಕ್ಷರಶ: ಟೈಗರ್ ಕಫ್ರ್ಯೂ ಸನ್ನಿವೇಶ ಆವರಿಸಿದೆ. ಎರಡು ನರಭಕ್ಷಕ ಹುಲಿಗಳ ಉಪಟಳ ಗ್ರಾಮಸ್ಥರ ಬದುಕನ್ನು ಅತಂತ್ರಗೊಳಿಸಿದೆ. ಹೊಲ-ಗದ್ದೆಗಳಲ್ಲಿ ಕೆಲಸ ಮಾಡಲು ರೈತರು ಹೆದರಿ ಕಂಗಾಲಾಗಿದ್ದಾರೆ. ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಗ್ರಾಮಸ್ಥರು ಹೆದರಿದ್ದಾರೆ. ದನ-ಕರು, ಮೇಕೆ-ಕುರಿ-ಕೋಳಿಗಳಿಗೆ ರಕ್ಷಣೆ ನೀಡುವ ಜೊತೆಗೆ ತಮ್ಮ ಜೀವವನ್ನು ಅಂಗೈನಲ್ಲಿ ಹಿಡಿದುಕೊಂಡು ಕಾಲಕಳೆಯುವಂತಾಗಿದೆ.
ಜೀವನೋಪಾಯಕ್ಕಾಗಿ ಕೃಷಿ ಕಾಯಕ ಮಾಡಬೇಕಾದ ಗ್ರಾಮಸ್ಥರು ಗುಂಪುಗೂಡಿ ತೆರಳುವಂತಾಗಿದೆ. ಹುಲಿಗಳನ್ನು ಬೆದರಿಸಲು ತಮಟೆ-ಡೋಲುಗಳನ್ನು ಬಡಿಯುತ್ತಾ, ಶಸ್ತ್ರಸಜ್ಜಿತರಾದ ಯುವಕರು ಗುಂಪು ಪಾಳಿಯಂತೆ ಗ್ರಾಮದ ರಕ್ಷಣೆಗೆ ನಿಂತಿದ್ದಾರೆ. ಮೈಯಲ್ಲಾ ಕಣ್ಣಾಗಿಸಿಕೊಂಡಿದ್ದೂ ಯಾವುದೇ ಕ್ಷಣದಲ್ಲಿ ವ್ಯಾಘ್ರ ದಾಳಿ ನಡೆಸುವ ಭೀತಿ 30 ಗ್ರಾಮಗಳನ್ನು ಕಾಡುತ್ತಿದೆ.ನರಭಕ್ಷಕಗಳ ಆತಂಕದಿಂದ ಈ ಗ್ರಾಮಗಳ ಮತದಾರರು ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕಲು ನಿರಾಕರಿಸಿದ್ದಾರೆ. ಹುಲಿಯನ್ನು ಕೊಂದ ನಂತರವೇ ನಾವು ನಮ್ಮ ಹಕ್ಕು ಚಲಾಯಿಸುತ್ತೇವೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದರು. ಫೆ.11ರಂದು ಅರಣ್ಯ ಇಲಾಖೆ ಸಿಬ್ಬಂದಿ ಹುಲಿಯೊಂದನ್ನು ಸೆರೆಹಿಡಿದರು. ನ.28ರಿಂದ ಆರು ಜನರನ್ನು ಈ ಹುಲಿ ಕೊಂದಿದೆ ಎಂದು ಅಧಿಕಾರಿಗಳು ಹೇಳಿದ್ದರೂ, ಇದು ನರಭಕ್ಷಕ ವ್ಯಾಘ್ರ ಅಲ್ಲ ಎಂಬುದು ಗ್ರಾಮಸ್ಥರ ವಾದವಾಗಿದೆ. ಫೆ.16ರಂದು ಅರಣ್ಯದ ಅಂಚಿನ ಗ್ರಾಮದಲ್ಲಿ ಮಹಿಳೆಯೊಬ್ಬಳನ್ನು ಹುಲಿ ಕೊಂದು ತಿಂದಿರುವುದು ಇದಕ್ಕೆ ಪುಷ್ಟಿ ನೀಡಿದೆ.ಸೆರೆ ಹಿಡಿಯಲಾದ ಹುಲಿಯನ್ನು ಲಕ್ನೋ ಮೃಗಾಲಯಕ್ಕೆ ಕಳುಹಿಸಲಾಗಿದ್ದು, ನರಭಕ್ಷಕನ ಬೇಟೆ ಕಾರ್ಯಾಚರಣೆ ಮುಂದುವರಿದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin