ನರಹಂತಕ ವೀರಪ್ಪನ್’ನನ್ನ ಭೇಟಿಯಾಡಿದ್ದು ಹೇಗೆ ಕುತೂಹಲಕಾರಿ ಸತ್ಯಗಳು ಬಹಿರಂಗ..!

ಈ ಸುದ್ದಿಯನ್ನು ಶೇರ್ ಮಾಡಿ

Vijay-Kumar--01

ಚೆನ್ನೈ, ಫೆ.3- ಕುಖ್ಯಾತ ಕಾಡುಗಳ್ಳ ಮತ್ತು ನರಹಂತಕ ವೀರಪ್ಪನ್ ಬೇಟೆಗೆ ವಿಶೇಷ ಕಾರ್ಯಪಡೆಗೆ (ಎಸ್‍ಟಿಎಫ್) ನೆರವಾಗಿದ್ದು ಯಾರು ? ದಂತಚೋರ ಮತ್ತು ಶ್ರೀಗಂಧಕಳ್ಳನನ್ನು ಹೇಗೆ ಶಿಕಾರಿ ಮಾಡಲಾಯಿತು ? ಈ ಎಲ್ಲ ಕುತೂಹಲಕಾರಿ ಸಂಗತಿಗಳು ಎಸ್‍ಟಿಎಫ್‍ನ ಆಗಿನ ಮುಖ್ಯಸ್ಥ ಕೆ.ವಿಜಯ್‍ಕುಮಾರ್ ಅವರು ಬರೆದಿರುವ ಪುಸ್ತಕದಲ್ಲಿ ಅಡಕವಾಗಿವೆ.  ದ್ವೀಪರಾಷ್ಟ್ರ ಶ್ರೀಲಂಕಾದ ತಮಿಳು ಬಂಡುಕೋರರೊಂದಿಗೆ ರಹಸ್ಯ ಸಂಪರ್ಕ ಹೊಂದಿದ್ದ ಪ್ರಭಾವಿ ಉದ್ಯಮಿಯೊಬ್ಬರು ಎಸ್‍ಟಿಎಫ್‍ಗೆ ನರಘಾತುಕನ ಬಗ್ಗೆ ಮಹತ್ವದ ಸುಳಿವು ನೀಡಿ ಕಳೆದ 12 ವರ್ಷಗಳ ಹಿಂದೆ ಆತನನ್ನು ಹೊಡೆದುರುಳಿಸಲು ನೆರವಾದರು ಎಂಬ ಸಂಗತಿಯನ್ನು ವೀರಪ್ಪನ್ : ಚೇಸಿಂಗ್ ದಿ ಬ್ರೀಗ್ಯಾಂಡ್ ಎಂಬ ಪುಸ್ತಕದಲ್ಲಿ ಕೌತುಕವಾಗಿ ವಿವರಿಸಲಾಗಿದೆ.

ಈ ಉದ್ಯಮಿ ವೀರಪ್ಪನ್‍ಗೆ ಅಗತ್ಯ ಮಾಹಿತಿ ಮತ್ತು ಮುಖ್ಯವಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸಲು ನೆರವಾಗುತ್ತಿದ್ದರು. ಈ ಸಂಪರ್ಕವನ್ನೇ ಬಳಸಿಕೊಂಡು ಎಸ್‍ಟಿಎಫ್ ಅಕ್ಟೋಬರ್ 18, 2004ರಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಅರಣ್ಯ ಮತ್ತು ಪೊಲೀಸ್ ಇಲಾಖೆಗಳಿಗೆ ಕಂಟಕಪ್ರಾಯನಾಗಿದ್ದ ಹಿಂಸಪ್ರಶು ಕಾಡುಗಳ್ಳನನ್ನು ಹೊಸಕಿ ಹಾಕಿತು. ಈ ಉದ್ಯಮಿಯು ತಮಿಳುನಾಡಿನಲ್ಲಿ ಪ್ರಭಾವ ಹೊಂದಿದ್ದು, ಎಲ್‍ಟಿಟಿಇ ಮತ್ತು ವೀರಪ್ಪನ್ ತಂಡಗಳಿಗೂ ಪರಮಾಪ್ತರಾಗಿದ್ದರು. ಮಾಹಿತಿದಾರನೊಬ್ಬನಿಂದ ವೀರಪ್ಪನ್ ಮತ್ತು ಉದ್ಯಮಿ ನಡುವೆ ಇದ್ದ ನಿಕಟ ಸಂಪರ್ಕದ ಸುಳಿವನ್ನು ಎಸ್‍ಟಿಎಫ್ ಮುಖ್ಯಸ್ಥರು ಅರಿತು ಕಾರ್ಯತಂತ್ರವೊಂದನ್ನು ಹೆಣೆದರು. ಉದ್ಯಮಿಯನ್ನು ರಹಸ್ಯವಾಗಿ ಭೇಟಿ ಮಾಡಿ ವೀರಪ್ಪನ್ ಬೇಟೆಗೆ ನೆರವಾದರೆ, ಅವರ ಮೇಲಿರುವ ಅಪಾದನೆಗಳಿಗೆ ಕ್ಷಮಾಧಾನ ನೀಡುವುದಾಗಿ ಹಾಗೂ ಕೆಲವು ಪ್ರಕರಣಗಳಿಂದ ಖುಲಾಸೆಗೊಳಿಸುವುದಾಗಿಯೂ ಭರವಸೆ ನೀಡದರು. ಇದಕ್ಕೆ ಆ ಉದ್ಯಮಿ ಒಪ್ಪಿದರು. ಅದರಂತೆ ವೀರಪ್ಪನ್ ಬೇಟೆಗೆ ವೇದಿಕೆ ಸಜ್ಜುಗೊಂಡಿತು.

ಇದೇ ವೇಳೆ 52 ವರ್ಷದ ವೀರಪ್ಪನ್ ಕಣ್ಣಿನ ಪೊರೆ (ಕ್ಯಾಟರಾಕ್ಟ್) ಸಮಸ್ಯೆಯಿಂದ ಬಳಲುತ್ತಿದ್ದ. ಆತನಿಗೆ ಶಸ್ತ್ರಾಸ್ತ್ರ ನೀಡಿ ಮಾರುವೇಷದಲ್ಲಿ ತಿರುಚಿ ಅಥವಾ ಮದುರೈಗೆ ತೆರಳಿ ನೇತ್ರ ಶಸ್ತ್ರಕ್ರಿಯೆ ನಂತರ ಶ್ರೀಲಂಕಾಗೆ ಪರಾರಿಯಾಗಲು ವಾಹನ ಮತ್ತಿತರ ವ್ಯವಸ್ಥೆಯನ್ನೂ ಈ ಉದ್ಯಮಿ ಮಾಡಿದ್ದರು. ಇನ್ನೊಂದೆಡೆ ಈ ಎಲ್ಲ ಮಾಹಿತಿಗಳನ್ನು ಎಸ್‍ಟಿಎಫ್ ಮುಖ್ಯಸ್ಥರಿಗೆ ಗೋಪ್ಯ ಸಂಕೇತದ ಮೂಲಕ ನೀಡುತ್ತಿದ್ದರು.

ಅದರಂತೆ ವ್ಯವಸ್ಥಿತವಾಗಿ ಯೋಜನೆ ರೂಪಿಸಿ ವಿಜಯ್‍ಕುಮಾರ್ ಮತ್ತು ಸಿಬ್ಬಂದಿ ವೀರಪ್ಪನ್ ಮತ್ತು ಆತನೊಂದಿಗೆ ವಾಹನದಲ್ಲಿದ್ದ ಇನ್ನಿಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಬೇಟೆಯಾಡಿತು.
ಇದರೊಂದಿಗೆ ಮೂರು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕ ಮತ್ತು ತಮಿಳುನಾಡು ಅರಣ್ಯಗಳನ್ನು ಅಕ್ಷರಶ: ಆಳಿ, 250ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡು, ಟನ್ನುಗಟ್ಟಲೆ ಆನೆದಂತ ಮತ್ತು ಶ್ರೀಗಂಧಮರಗಳನ್ನು ಕಳ್ಳಸಾಗಣೆ ಮಾಡಿದ್ದ ವೀರಪ್ಪನ್‍ನ ರಕ್ತಸಿಕ್ತ ಅಧ್ಯಾಯ ಕೊನೆಗೊಂಡಿತು.   ಈ ಹಿಂದೆ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಸಿ.ದಿನಕರ್ `ವೀರಪ್ಪನ್ ಪ್ರೈಜ್ ಕ್ಯಾಚ್-ರಾಜಕುಮಾರ್’ ಎಂಬ ಪುಸ್ತಕ ಬರೆದಿದ್ದರು. ವರನಟ ಡಾ.ರಾಜ್‍ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿ 108 ದಿನಗಳ ಕಾಲ ಒತ್ತೆಯಾಗಿಟ್ಟುಕೊಂಡಿದ್ದ ಈ ಪುಸ್ತಕ ವಿವಾದಕ್ಕೂ ಎಡೆಮಾಡಿಕೊಟ್ಟಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin