ನರೇಂದ್ರ ಮೋದಿ ಅವರಿಗೆ ಹೆಚ್ಚು ಪ್ರಚಾರ ನೀಡಲಾಗುತ್ತಿದೆ : ಹೆಚ್.ಡಿ. ದೇವೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

HD-Devegowda

ಬೆಂಗಳೂರು,ಮೇ 26-ನಮ್ಮ ದೇಶವನ್ನಾಳಿದ ಎಲ್ಲ ಪ್ರಧಾನಮಂತ್ರಿಗಳು ಚೆನ್ನಾಗಿ ಕೆಲಸ ಮಾಡಿದ್ದಾರೆ. ಆದರೆ ನರೇಂದ್ರ ಮೋದಿ ಅವರಿಗೆ ಮಾತ್ರ ಹೆಚ್ಚು ಪ್ರಚಾರ ಸಿಕ್ಕಿದೆ ಎಂದು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದರು.  ಲಾಲ್‍ಬಾಗ್‍ನ ಡಾ.ಮರಿಗೌಡ ಸ್ಮಾರಕ ಭವನದಲ್ಲಿ ಇಂದಿನಿಂದ ಮೇ 29ರವರೆಗೆ ಗ್ರಾಮೀಣ ಕುಟುಂಬ ಹಮ್ಮಿಕೊಂಡಿರುವ ಆಹಾರದಿಂದ ಆರೋಗ್ಯ, ಸಿರಿಧಾನ್ಯ ಉತ್ಸವದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಎಲ್ಲಾ ಪ್ರಧಾನಿಗಳು ಚೆನ್ನಾಗಿ ಕೆಲಸ ಮಾಡಿದ್ದಾರೆ. ಆದರೆ ಮೋದಿಯವರಿಗೆ ಹೆಚ್ಚು ಪ್ರಚಾರ ನೀಡಲಾಗುತ್ತಿದೆ. ದೇಶದ ಅತಿ ಉದ್ದದ ಸೇತುವೆ ನಾನು ಪ್ರಧಾನಿಯಾಗಿದ್ದಾಗಲೇ ಮಂಜೂರಾಗಿತ್ತು ಎಂದು ತಿಳಿಸಿದರು.ನರೇಂದ್ರ ಮೋದಿ ಸರ್ಕಾರದ ಮೂರು ವರ್ಷಗಳ ಸಂಭ್ರಮದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಹೆಚ್ಚು ಪ್ರತಿಕ್ರಿಯೆ ನೀಡಲು ಗೌಡರು ನಿರಾಕರಿಸಿದರು.
ಕಾರ್ಯಕ್ರಮದ ಪಾಲ್ಗೊಂಡು ಮಾತನಾಡಿದ ದೇವೇಗೌಡರು, ಸಿರಿಧಾನ್ಯಗಳನ್ನು ಹೆಚ್ಚು ಹೆಚ್ಚು ಬೆಳೆಯಲು ಪ್ರೋ ನೀಡಬೇಕು. ರಾಷ್ಟ್ರಮಟ್ಟದಲ್ಲಿ ಇದಕ್ಕೆ ಹೆಚ್ಚು ಪ್ರಚಾರ ಸಿಗಬೇಕು ಎಂದು ಹೇಳಿದರು.   ಆರೋಗ್ಯವಂತರಾಗಿರಲು ಸಿರಿಧಾನ್ಯಗಳನ್ನು ಜನರು ಹೆಚ್ಚು ಬಳಕೆ ಮಾಡಬೇಕು. ರಾಗಿ ಅತ್ಯಂತ ಯೋಗ್ಯ ಆಹಾರ, ನಾನು ಪ್ರಧಾನಿಯಾಗಿದ್ದಾಗ ಕೇದಾರನಾಥ್‍ಗೆ ಹೋಗಿದ್ದೆ. ಅಲ್ಲಿ ರಾಗಿ ಬೆಳೆದದ್ದನ್ನು ಕಂಡು ನನಗೆ ಸಂತೋಷವಾಗಿತ್ತು ಎಂದು ಸ್ಮರಿಸಿದರು.

ದೆಹಲಿಯಲ್ಲಿ ರಾಗಿಮುದ್ದೆ ಹೋಟೆಲ್‍ಗಳು ಜನಪ್ರಿಯವಾಗಿವೆ. ಅಮೆರಿಕಾಗೆ ಹೊಗುವವರು ಕೂಡ ರಾಗಿ ಹಿಟ್ಟು ಕೊಂಡೊಯ್ಯುತ್ತಾರೆ. ನಾನು 42 ವರ್ಷಗಳಿಂದ ಮಾಂಸಾಹಾರ ಬಿಟ್ಟಿದ್ದೇನೆ. ಪ್ರತಿದಿನ ರಾಗಿಮುದ್ದೆ ತಿನ್ನುತ್ತೇನೆ ಎಂದು ತಮ್ಮ ಆರೋಗ್ಯದ ಗುಟ್ಟನ್ನು ಗೌಡರು ಬಿಚ್ಚಿಟ್ಟರು.  ಸಜ್ಜೆ, ನವಣೆ ಮತ್ತಿತರ ಸಿರಿಧಾನ್ಯಗಳನ್ನು ಸಂರಕ್ಷಿಸಿ ಪ್ರಸ್ತುತಪಡಿಸಿರುವುದು ಅತ್ಯಂತ ಒಳ್ಳೆಯ ಕೆಲಸ ಎಂದು ಗ್ರಾಮೀಣ ಕುಟುಂಬದ ಕಾರ್ಯವನ್ನು ಶ್ಲಾಘಿಸಿದರು. ಗ್ರಾಮೀಣ ಕುಟುಂಬದ ಸಂಸ್ಥಾಪಕ ಎಂ. ಎಚ್.ಶ್ರೀಧರ ಮೂರ್ತಿ ಮಾತನಾಡಿ, ಸಿರಿಧಾನ್ಯಗಳಿಗೆ ಒಳ್ಳೆಯ ಬೇಡಿಕೆ ಇದೆ. ಈ ಉತ್ಸವದಲ್ಲಿ 100 ಟನ್ ಮಾರಾಟ ಮಾಡುವ ಗುರಿ ಹೊಂದಿದ್ದೇವೆ. ಉತ್ಸವ ಪ್ರಾರಂಭಕ್ಕೂ ಮೊದಲೇ 10 ಟನ್ ಮಾರಾಟವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಉತ್ತಮ ಗಿರಿಣಿಗಳ ಸೌಲಭ್ಯ ಕೊರತೆಯಿಂದಾಗಿ ನಮ್ಮಲ್ಲಿ ಸಿರಿಧಾನ್ಯಗಳಿಗೆ ಹೆಚ್ಚು ಬೆಲೆ ಇದೆ. ಸರ್ಕಾರ ಒಳ್ಳೆಯ ಗಿರಿಣಿಗಳನ್ನು ಕೊಡಬೇಕೆಂದು ಮನವಿ ಮಾಡಿದರು. ತಮಿಳುನಾಡು , ಮಹಾರಾಷ್ಟ್ರದಲ್ಲಿ ಉತ್ತಮ ಗಿರಣಿಗಳಿವೆ. ಹಾಗಾಗಿ ಅಲ್ಲಿ ಕಡಿಮೆ ಬೆಲೆಗೆ ಸಿರಿಧಾನ್ಯಗಳು ಸಿಗುತ್ತವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಿರಿಧಾನ್ಯ ಬೆಳೆಗಾರರಿಗೆ 2017 ಗ್ರಾಮೀಣ ಕುಟುಂಬ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.  ಕಾರ್ಯಕ್ರಮದಲ್ಲಿ ಪರಿಸರವಾದಿ ಡಾ.ಯಲ್ಲಪ್ಪ ರೆಡ್ಡಿ , ತೋಟಗಾರಿಕೆ ಇಲಾಖೆ ಆಯುಕ್ತ ಪ್ರಭಾಸ್ ಚಂದ್ರ ರೇ, ತೋಟಗಾರಿಕೆ ಇಲಾಖೆ ಜಂಟಿ ಡಾ.ಜಗದೀಶ್, ಐಐಎಂಆರ್ ಹೈದರಾಬಾದ್ ನಿರ್ದೇಶಕ ಡಾ.ವಿಲಾಸ್ ಎ ಥೋಣಪಿ, ಲೇಖಕಿ ಡಾ.ವಸಂಧರಾ ಭೂಪತಿ, ಸುಧಾ ವಾರಪತ್ರಿಕೆ ಸಹಸಂಪಾದಕ ಬಿ.ಎಂ.ಹನೀಫ್,ಮೈಸೂರು ಉದ್ಯಾನ ಕಲಾಸಂಘದ ಗೌರವ ಉಪಾಧ್ಯಕ್ಷ ಶ್ರೀಕಂಠಯ್ಯ, ಖಜಾಂಚಿ ಎಂ.ಕುಪ್ಪುಸ್ವಾಮಿ ನಿರ್ದೇಶಕ ಎಂ.ಎ.ರವಿಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin