ನಲಪಾಡ್ ಅಂಡ್ ಗ್ಯಾಂಗ್’ಗೆ ಜೈಲೇ ಗತಿ, ಜಾಮೀನು ಅರ್ಜಿ ವಜಾ

ಈ ಸುದ್ದಿಯನ್ನು ಶೇರ್ ಮಾಡಿ

Nalapad-Jail-Nalpad--01

ಬೆಂಗಳೂರು, ಮಾ.2-ಉದ್ಯಮಿ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರೀಸ್ ಪುತ್ರ ಮಹಮ್ಮದ್ ನಲಪಾಡ್ ಹ್ಯಾರೀಸ್ ಸೇರಿದಂತೆ ಆರು ಮಂದಿ ಆರೋಪಿಗಳಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ.  ಜಾಮೀನು ಕೋರಿ ನಲಪಾಡ್ ಹಾಗೂ ಆರು ಮಂದಿ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರು 63ನೆ ಹೆಚ್ಚುವರಿ ಸೆಷನ್ ನ್ಯಾಯಾಲಯ, ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಫೆ.17ರಂದು ನಗರದ ಯುಬಿಸಿಟಿಯ ಕಟ್ಟಡದ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಗಂಭೀರ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರೀಸ್ ಪುತ್ರ ಮಹಮ್ಮದ್ ನಲಪಾಡ್ ಸೇರಿ ಏಳು ಮಂದಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಈ ಪ್ರಕರಣ ರಾಜಕೀಯವಾಗಿಯೂ ಸಾಕಷ್ಟು ತಿರುವು ಪಡೆದುಕೊಂಡಿತ್ತು. ವಿದ್ವತ್ ಮೇಲೆ ನಡೆದ ಗಂಭೀರ ಹಲ್ಲೆ ಖಂಡಿಸಿ ಭಾರೀ ಪ್ರತಿಭಟನೆಗಳು ನಡೆದಿದ್ದವು.  ಫರ್ಜಿ ಕೆಫೆಯಲ್ಲಿ ಹಲ್ಲೆ ನಡೆಸಿದ್ದಲ್ಲದೆ, ಆರೋಪಿಗಳು ಮಲ್ಯ ಆಸ್ಪತ್ರೆಯಲ್ಲಿ ವಿದ್ವತ್ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆ ವರೆಗೂ ಹಿಂಬಾಲಿಸಿ ಆತನಿಗೆ ಧಮ್ಕಿ ಹಾಕಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ ಆತನಿಗೆ ಜಾಮೀನು ನೀಡಲು ನಿರಾಕರಿಸಿದೆ.

ಆರೋಪಿ ಪ್ರಭಾವಿಯಾಗಿದ್ದು, ಜಾಮೀನು ನೀಡಿದರೆ ತನಿಖೆಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂಬ ಸರ್ಕಾರದ ಪರ ವಾದ ಮಂಡಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ಯಾಮ್‍ಸುಂದರ್ ಅವರ ವಾದ ಆಲಿಸಿದ ನ್ಯಾಯಾಧೀಶರಾದ ಪರಮೇಶ್ವರ್ ಪ್ರಸನ್ನ ಅವರ ಪೀಠ ಜಾಮೀನು ನಿರಾಕರಿಸಿ ಈ ಆದೇಶ ನೀಡಿದ್ದಾರೆ. ಇದರಿಂದ ಕಳೆದ 11 ದಿನಗಳಿಂದ ಜಾಮೀನಿಗಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದ ನಲಪಾಡ್‍ಗೆ ತೀವ್ರ ನಿರಾಸೆಯಾಗಿದೆ.

Facebook Comments

Sri Raghav

Admin