ನಾಗರಹಾವಿನ ಮೃತ್ಯಚುಂಬನಕ್ಕೆ ಬಲಿಯಾದ ಸ್ನೇಕ್ ನಾಗರಾಜ್

ಈ ಸುದ್ದಿಯನ್ನು ಶೇರ್ ಮಾಡಿ

Snake-Nagaraj--01

ಬೆಂಗಳೂರು, ಮೇ 1- ವಿಷಸರ್ಪಗಳನ್ನು ಹಿಡಿದು ಆಪತ್ಬಾಂಧವನೆಂದೇ ಹೆಸರಾಗಿದ್ದ ಸ್ನೇಕ್ ನಾಗರಾಜ್ ಅವರನ್ನು ನಾಗಹಾವೊಂದು ಬಲಿ ತೆಗೆದುಕೊಂಡಿದೆ. ಬೆಂಗಳೂರಿನ ಪೂರ್ವಭಾಗದಲ್ಲಿರುವ ಜಿಗಣಿಯಲ್ಲಿ ಹಾವು ಕಚ್ಚಿ ಅವರು ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.   ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಲು ಶನಿವಾರ ಸಂಜೆ ನಾಗರಾಜ್ ತೆರಳುತ್ತಿದ್ದ ವೇಳೆ ಗ್ರಾಮಸ್ಥರೊಬ್ಬರು ಕುಂಡಾರೆಡ್ಡಿಯಲ್ಲಿರುವ ತಮ್ಮ ಮನೆಯೊಳಗೆ ಹಾವು ನುಗ್ಗಿದೆ. ಅದನ್ನು ಹಿಡಿಯುವಂತೆ ಮನವಿ ಮಾಡಿದರು. ತಕ್ಷಣ ಕಾರ್ಯಪ್ರವೃತ್ತರಾದ ನಾಗರಾಜ್ ಅವರ ಮನೆಗೆ ತೆರಳಿದ್ದರು. ಅಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿದ್ದ ಕಾರಣ ಕಗ್ಗತ್ತಲು ಆವರಿಸಿತ್ತು.ಮನೆಯೊಳಗೆ ಪ್ರವೇಶಿಸಿದ ಅವರು ಸುಮಾರು ನಾಲ್ಕು ಅಡಿ ಉದ್ದದ ನಾಗರಹಾವನ್ನು ಹಿಡಿಯಲು ಸಫಲರಾದರು. ಅದರೆ, ಅದು ಅವರ ಕೈಯನ್ನು ಕಚ್ಚಿತು. ನಂತರ ಮನೆಯಿಂದ ಹೊರಗೆ ಬಂದ ಅವರು ಸರ್ಪವನ್ನು ಕೊಂದರು. ವಿಷ ದೇಹವೆಲ್ಲ ವ್ಯಾಪಿಸುವುದನ್ನು ತಡೆಯಲು ಹಾವು ಕಚ್ಚಿದ ಜಾಗವನ್ನು ಸ್ವಲ್ಪ ಕತ್ತರಿಸಿ ಬಾಯಿಯಿಂದ ನಂಜನ್ನು ಹೀರಲು ಯತ್ನಿಸಿದರು. ಹಳೆ ಬಿಯರ್ ಬಾಟಲ್ ಒಡೆದು ಗಾಜಿನಿಂದ ಕತ್ತರಿಸಲು ಪ್ರಯತ್ನಿಸಿದರು. ಆದರೆ ಶಿಷೆಯ ತುದಿ ಹರಿತವಾಗಿಲ್ಲದ ಕಾರಣ ಅದು ಸಾಧ್ಯವಾಗಲಿಲ್ಲ. ಅಷ್ಟೊತ್ತಿಗಾಗಲೇ ವಿಷ ವ್ಯಾಪಿಸಿತು ಎಂದು ಬಿಬಿಎಂಪಿ ಅರಣ್ಯ ವಿಭಾಗದ ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜೈರಾಜ್ ಹೇಳಿದ್ದಾರೆ.  ತಕ್ಷಣ ಅವರನ್ನು ಅಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಮಾರ್ಗ ಮಧ್ಯೆ ನಾಗರಾಜ್ ಅಸುನೀಗಿದರು.

ನನ್ನ ತಂದೆ ಮದುವೆ ಸಮಾರಂಭಕ್ಕೆ ಹೋಗಿದ್ದಾರೆ ಎಂದು ನಾವು ತಿಳಿದಿದ್ದೆವು. ಹಾವು ಹಿಡಿಯಲು ಹೋಗಿ ಪ್ರಾಣ ಕಳೆದುಕೊಂಡ ವಿಷಯ ನಮಗೆ ತಿಳಿದಿರಲಿಲ್ಲ. ನನ್ನ ಸ್ನೇಹಿತರ ಮೂಲಕ ಈ ವಿಷಯ ಗೊತ್ತಾಯಿತು ಎಂದು ಅವರ ಪುತ್ರ ನವೀನ್ ಕುಮಾರ್ ದುಃಖದಿಂದ ನುಡಿದಿದ್ದಾರೆ.   ಕಳೆದ 15 ವರ್ಷಗಳಿಂದ ಹಾವು ಹಿಡಿಯುವುದರಲ್ಲಿ ಪಳಗಿದ್ದ ಸ್ನೇಕ್ ನಾಗರಾಜ್ ಈವರೆಗೆ ನೂರಾರು ಉರಗಗಳನ್ನು ಹಿಡಿದಿದ್ದಾರೆ. ಆನೇಕಲ್, ಜಿಗಣಿ ಸೇರಿದಂತೆ ಸುತ್ತಮತ್ತಲ ಗ್ರಾಮಗಳಲ್ಲಿ ಹಾವುಗಳನ್ನು ಹಿಡಿದು ಜನರ ಪ್ರಾಣಗಳನ್ನು ರಕ್ಷಿಸುತ್ತಿದ್ದ ಅವರು ಸರ್ಪ ಹಿಡಿಯುವಾಗಲೇ ಸಾವಿಗೀಡಾಗಿದ್ದು ದುರಂತ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin