ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ : ಡಾ.ಜಿ.ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

G-Paerameshwar

ಬೆಂಗಳೂರು, ಜೂ.4- ಡಿಸೆಂಬರ್‍ನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನಿಗದಿತ ವೇಳೆಗೆ ಚುನಾವಣೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.  ಬೆಂಗಳೂರು ವರದಿಗಾರರ ಕೂಟ ಮತ್ತು ಪ್ರೆಸ್‍ಕ್ಲಬ್ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿತ್ವಕ್ಕೆ ತರಬೇಕು ಎಂಬ ಉದ್ದೇಶದಿಂದ ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ ಅವರು ಮತ್ತೊಂದು ಅವಧಿಗೆ ನನ್ನನ್ನೇ ಅಧ್ಯಕ್ಷರನ್ನಾಗಿ ಮುಂದುವರೆಸಿದ್ದಾರೆ. ಈ ವಿಚಾರದಲ್ಲಿ ಯಾವುದೇ ವಿವಾದವಿಲ್ಲ. ಎಲ್ಲರೂ ಒಂದಾಗಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ. ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದು ದಲಿತರು ಮುಖ್ಯಮಂತ್ರಿ ಆಗಬೇಕು ಎಂಬುದು ನಿರ್ಧಾರವಾದರೆ ಮಲ್ಲಿಕಾರ್ಜುನ ಖರ್ಗೆ ಅವರಂತಹ ಅನೇಕ ಹಿರಿಯ ನಾಯಕರಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವುದಷ್ಟೇ ನಮ್ಮ ಉದ್ದೇಶ ಎಂದು ಹೇಳಿದರು.  2013ರಲ್ಲಿ ನಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಕೊಂಡಿರಲಿಲ್ಲ. ಪಕ್ಷದ ಅಧ್ಯಕ್ಷರಾಗಿದ್ದವರು ಮುಂದಿನ ಸಿಎಂ ಆಗುವ ಸಂಪ್ರದಾಯ ಕಾಂಗ್ರೆಸ್‍ನಲ್ಲಿತ್ತು. ಆದರೆ ಸಂಪ್ರದಾಯದ ಬಗ್ಗೆಯೂ ಯಾರು ನನಗೆ ಹೇಳಿರಲಿಲ್ಲ. ಕೊರಟಗೆರೆ ಜನ ನನ್ನನ್ನು ತಿರಸ್ಕರಿಸಿದ್ದರು.
ನಾನು ಮುಖ್ಯಮಂತ್ರಿ ಆಗುವ ಪ್ರಸ್ತಾವನೆ ಬಿದ್ದು ಹೋಯ್ತು. ಪರಮೇಶ್ವರ್ ಸಿಎಂ ಆಗಬೇಕೆಂಬ ಆಸೆಗೆ ದಲಿತ ಮುಖ್ಯಮಂತ್ರಿ ಎಂಬ ಕಾರ್ಡ್ ಚಲಾವಣೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ದಲಿತನಾಗಿ ಹುಟ್ಟಬೇಕೆಂದು ಅರ್ಜಿ ಹಾಕಿರಲಿಲ್ಲ. ಹುಟ್ಟು ಆಕಸ್ಮಿಕ, ಶೋಷಿತ ಸಮುದಾಯದಲ್ಲಿ ಹುಟ್ಟಿದ್ದೇವೆ. ಆದರೆ ಅದನ್ನೇ ಬಂಡವಾಳ
ಮಾಡಿಕೊಂಡಿಲ್ಲ. ಜಾತ್ಯತೀತೆ ಬಗ್ಗೆ ಮಾತನಾಡುತ್ತೇವೆ. ಆದರೆ ಜಾತಿ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತವೆ.  ದಲಿತರಲ್ಲಿ ನಮ್ಮವರು ಒಮ್ಮೆ ಮುಖ್ಯಮಂತ್ರಿಯಾಗಲಿ ಎಂಬ ಆಕಾಂಕ್ಷೆ ಇರುವುದು ಸಹಜ. ಅದಕ್ಕೆ ನನ್ನನ್ನು ಕಾರಣ ಮಾಡಬೇಡಿ. ದಲಿತರಲ್ಲಿ ಖರ್ಗೆ ಅವರಂತಹ ಅನೇಕ ನಾಯಕರಿದ್ದಾರೆ. ದಲಿತರೇತರರು ಕೂಡ ದಲಿತರಿಗೆ ಒಂದು ಬಾರಿ ಸಿಎಂ ಆಗುವ ಅವಕಾಶ ಕೊಡಬೇಕೆಂಬ ಮಾತನ್ನಾಡಿದ್ದಾರೆ.  ಸದ್ಯಕ್ಕೆ ದಲಿತ ಮುಖ್ಯಮಂತ್ರಿ ಎಂಬುದು ಅಪ್ರಸ್ತುತ. ನಾನು ಮುಖ್ಯಮಂತ್ರಿ ಆಗಬೇಕೆಂಬುದು ವಿಷಯವಲ್ಲ. ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ತರಬೇಕೆಂಬುದು ನಮ್ಮ ಮೂಲ ಉದ್ದೇಶ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು.
ಕಳೆದ ಬಾರಿ 2013ರಲ್ಲಿ ದೆಹಲಿಯಿಂದ ಬಂದಿದ್ದ ವೀಕ್ಷಕರ ಸಮ್ಮುಖದಲ್ಲಿ ಮುಖ್ಯಮಂತ್ರಿ ಯಾರಾಗಬೇಕೆಂಬ ಅಭಿಪ್ರಾಯ ಸಂಗ್ರಹವಾಗಿತ್ತು. ಬಹುತೇಕರು ಸಿದ್ದರಾಮಯ್ಯ ಪರ ಒಲವು ತೋರಿದ್ದರು ಎಂದರು.  ಮುಂದಿನ ಅವಧಿಗೂ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರೆಸುವುದಾಗಿ ಹೈಕಮಾಂಡ್( ಸೋನಿಯಾಗಾಂಧಿ) ನಿರ್ಧರಿಸಿದರೆ ಸ್ವಾಗತಿಸುತ್ತೇವೆ. ನಮ್ಮ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.  ರಾಜಕೀಯದಲ್ಲಿ ಎಲ್ಲರಿಗೂ ಮುಖ್ಯಮಂತ್ರಿ ಆಗುವ ಆಕಾಂಕ್ಷೆ ಇರುತ್ತದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.  ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ಯಾವ ಕ್ಷೇತ್ರ ಎಂಬುದು ಇನ್ನೂ ಅಂತಿಮವಾಗಿಲ್ಲ. ಹೈಕಮಾಂಡ್ ಯಾವ ಕ್ಷೇತ್ರಕ್ಕೆ ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುತ್ತದೋ ಅಲ್ಲಿ ಚುನಾವಣೆ ಎದುರಿಸಲು ಸಿದ್ಧನಿದ್ದೇನೆ.2008ರ ಚುನಾವಣೆಯಲ್ಲಿ 48 ಸಾವಿರ ಮತಗಳನ್ನು ಪಡೆದು ಗೆದ್ದಿದ್ದೆ. 2013ರಲ್ಲಿ 54 ಸಾವಿರ ಮತ ಪಡೆದರೂ ಸೋಲು ಕಂಡಿದ್ದೇನೆ ಎಂದು ಹೇಳಿದರು.
ನಮ್ಮ ಸರ್ಕಾರ 5 ವರ್ಷ ಪೂರ್ಣಗೊಳಿಸಿ ಏಪ್ರಿಲ್ ಅಥವಾ ಮೇ ನಂತರ ಚುನಾವಣೆ ನಡೆಯಲಿದೆ. 2004ರಲ್ಲಿ ಅವಧಿಗೆ ಮುನ್ನ ಚುನಾವಣೆಗೆ ಹೋದಂತೆ ಈ ಬಾರಿ ಹೋಗುವುದಿಲ್ಲ. ಚುನಾವಣೆ ಆಯೋಗ ಅವಧಿಗೆ ಮುನ್ನವೇ ಚುನಾವಣೆ ನಡೆಸುವ ಬಗ್ಗೆ ಯಡಿಯೂರಪ್ಪ ಅವರಿಗೆ ಹೇಳಿದೆಯೋ ಏನೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.  ಮರಳಿ ಅಧಿಕಾರಕ್ಕೆ ಬರಲು 113 ಸ್ಥಾನಗಳು ಬೇಕು. ನಾವು ಅದರತ್ತ ಗಮನಹರಿಸಿದ್ದೇವೆ. ಬಿಜೆಪಿಯವರ ಮಿಷನ್ 150 ಹೇಳುತ್ತಿರುವುದು ಅತಿರೇಕ. ಯಾರು ಎಷ್ಟು ಸ್ಥಾನ್ನಗಳನ್ನಾದರೂ ಬರೆದುಕೊಳ್ಳಬಹುದಾದರೆ ನಾವು ಮನಸ್ಸಿಗೆ ಬಂದಷ್ಟನ್ನು ಹೇಳಿಕೊಳ್ಳಬಹುದು. ಆದರೆ ಅಂತಿಮವಾಗಿ ಜನ ನಿರ್ಧಾರ ಮಾಡಬೇಕು ಎಂದರು.

ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ಬರಲು ಬಹಳಷ್ಟು ಮಂದಿ ತಯಾರಿದ್ದಾರೆ. ಅವರು ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಹಿರಿಯ ನಾಯಕರು ಕಾಂಗ್ರೆಸ್ ಬಿಟ್ಟು ಹೋಗಬಾರದು ಎಂದು ಸಲಹೆ ನೀಡಿದ ಅವರು, ವಿಶ್ವನಾಥ್ ಮತ್ತಿತರ ನಾಯಕರು ಕಾಂಗ್ರೆಸ್ ಬಿಡುವ ನಿರ್ಧಾರವನ್ನು ಮರುಪರಿಶೀಲಿಸಿದ್ದಾರೆ ಎಂದು ಹೇಳಿದರು.   ರೈತರ ಸಾಲ ಮನ್ನಾ ವಿಷಯದಲ್ಲಿ ಸರ್ಕಾರದ ನಿಲುವು ಸ್ಪಷ್ಟವಾಗಿದೆ. ನಾವು ಸಾಲಮನ್ನಾ ಮಾಡಲು ಬದ್ದರಾಗಿದ್ದೇವೆ. ಆದರೆ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾ ಮಾಡಲಿ. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಸಾಧ್ಯವಿಲ್ಲ. ಏಕೆಂದರೆ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಮತ ಹಾಕುವವರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದರು.   ಸಂವಾದದಲ್ಲಿ ಪ್ರೆಸ್‍ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ, ಉಪಾಧ್ಯಕ್ಷ ದೊಡ್ಡ ಬೊಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಕಿರಣ್, ಬೆಂಗಳೂರು ವರದಿಗಾರ ಕೂಟದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಮತ್ತಿತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin