ನಾನು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂಬುದು ಹೈಕಮಾಂಡ್ ಗೆ ಬಿಟ್ಟಿದ್ದು : ಎಚ್.ಸಿ.ಮಹದೇವಪ್ಪ
ಮೈಸೂರು, ಜ.6-ಸದ್ಯಕ್ಕೆ ನಾನು ಟಿ.ನರಸೀಪುರ ಶಾಸಕ. ನನ್ನ ಅವಧಿ ಮೇ ತಿಂಗಳವರೆಗೆ ಇದೆ. ನನ್ನ ಮುಂದಿನ ಸ್ಪರ್ಧೆ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಸಚಿವ ಎಚ್.ಸಿ.ಮಹದೇವಪ್ಪ ಕ್ಷೇತ್ರ ಬದಲಾವಣೆ ಸಂಬಂಧ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕ್ಷೇತ್ರ ಬದಲಾವಣೆ ಮಾಡುವ ಬಗ್ಗೆ ಯೋಚನೆ ಮಾಡಿಲ್ಲ. ಯಾವುದೇ ಕ್ಷೇತ್ರವನ್ನು ಹುಡುಕಲು ಶುರು ಮಾಡಿಯೂ ಇಲ್ಲ ಎಂದು ಹೇಳಿದರು.
ಬೆಂಗಳೂರಿನ ಸಿ.ವಿ.ರಾಮನ್ನಗರ, ನೆಲಮಂಗಲ ಮುಂತಾದ ಕಡೆ ಸ್ಪರ್ಧಿಸುವಂತೆ ಆಹ್ವಾನಿಸುತ್ತಿದ್ದಾರೆ. ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ. ನನ್ನ ಪಕ್ಷದ ನಾಯಕರು ಬೆಂಗಳೂರಿಗೆ ಕರೆಯುತ್ತಿದ್ದಾರೆ. ನಂಜನಗೂಡಿನಲ್ಲಿ ಜನ ನೀವೇ ಚುನಾವಣೆಗೆ ಸ್ಪರ್ಧಿಸಿ ಎನ್ನುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಇದರ ಬಗ್ಗೆ ನಿರ್ಧಾರ ಮಾಡುತ್ತೇನೆ. ನನ್ನ ಮಗ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಜನರ ಒತ್ತಾಯ ಬಂದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಾನೆ. ಜನರಿಗೆ ಒಳ್ಳೆಯದು ಮಾಡುವ ಉದ್ದೇಶವಿದ್ದರೆ ಯಾರೇ ಆದರೂ ರಾಜಕೀಯಕ್ಕೆ ಬರಲಿ ಎಂದು ಹೇಳಿದರು.
ಮಹಾರಾಷ್ಟ್ರ ಕೋರೆಗಾಂವ್ನ ಹಿಂಸಾಚಾರ ಖಂಡಿಸಿದ ಮಹದೇವಪ್ಪ ಅವರು, ಅಲ್ಲಿನ ಬಿಜೆಪಿ ಸರ್ಕಾರ ವಿಜಯೋತ್ಸವ ಹತ್ತಿಕ್ಕಿ ಭಯದ ವಾತಾವರಣ ನಿರ್ಮಾಣ ಮಾಡಿದೆ. ಇದು ದೇಶದ ಬಹುತ್ವಕ್ಕೆ ಧಕ್ಕೆ ಉಂಟು ಮಾಡಿದೆ. ಸಂವಿಧಾನದ ಬದಲಾವಣೆ ಕುರಿತು ಬಿಜೆಪಿ ನಾಯಕರ ಹೇಳಿಕೆಗಳು ಅವರ ದಿಕ್ಸೂಚಿಯನ್ನು ತೋರಿಸುತ್ತದೆ ಎಂದು ಹೇಳಿದರು.