ನಾನು ಸುಳ್ಳು ಹೇಳಿದರೆ ನನ್ನ ಕುಟುಂಬವೇ ಸರ್ವನಾಶವಾಗಲಿ..! : ಎಂ.ಬಿ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

MB-Patil--01

ವಿಜಯಪುರ, ಸೆ.12- ಪ್ರತ್ಯೇಕ ಲಿಂಗಾಯತ ಧರ್ಮ ಆಗಬೇಕೆಂದು ತುಮಕೂರು ಸಿದ್ದಗಂಗಾ ಶ್ರೀಗಳು ಸ್ಪಷ್ಟವಾಗಿ ಹೇಳಿದ್ದಾರೆ. ಈ ಸತ್ಯವನ್ನು ತಿರುಚುವ ಪ್ರಯತ್ನಗಳು ನಡೆದಿವೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ಸ್ಪಷ್ಟಪಡಿಸಿದರು. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿದ್ಧಗಂಗಾ ಮಠದ ಕಾರ್ಯಕ್ರಮಕ್ಕೆ ಹೋಗಿದ್ದ ಸಮಯದಲ್ಲಿ ಶ್ರೀಗಳು ಸ್ಪಷ್ಟವಾಗಿ ಪ್ರತ್ಯೇಕ ಧರ್ಮದ ಬಗ್ಗೆ ಮಾತನಾಡಿದ್ದಾರೆ. ಆದರೆ ಕೆಲವರಿಗೆ ಇದು ನುಂಗಲಾರದ ಬಿಸಿ ತುಪ್ಪವಾಗಿದೆ. ಅದರಲ್ಲೂ ವಿಶೇಷವಾಗಿ ವಿ.ಸೋಮಣ್ಣ, ಬಿ.ಎಸ್.ಯಡಿಯೂರಪ್ಪ. ಜಿ.ಎಸ್.ಬಸವರಾಜ್ ಅವರಿಗೆ ಆಘಾತವಾಗಿದೆ. ಹೇಗಾದರೂ ಮಾಡಿ ಇದನ್ನು ಮರೆಮಾಚುವ ಹುನ್ನಾರ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ವೀರಶೈವ ಲಿಂಗಾಯತ ಹೋರಾಟಗಳು ನಡೆದಿವೆ ಎಂದು ನಾನು ಅವರ ಗಮನಕ್ಕೆ ತಂದೆ. ಆಗ ಶ್ರೀಗಳು ಲಿಂಗಾಯತ ಸ್ವತಂತ್ರ ಧರ್ಮವಾಗಬೇಕು ಎಂದು ಹೇಳಿದರು. ಅಷ್ಟರಲ್ಲಿ ಆರಾಧ್ಯ ಎಂಬ ಸೇವಕ ಅಡ್ಡಬಾಯಿ ಹಾಕಿ ಸ್ವಾಮೀಜಿ… ಪಾಟೀಲರು ವೀರಶೈವ-ಲಿಂಗಾಯತರು ಬೇರೆ ಬೇರೆ ಎಂದು ಹೇಳುತ್ತಿದ್ದಾರೆ ಎಂದ ಆಗ ಶ್ರೀಗಳು ಲಿಂಗಾಯತ ಸ್ವತಂತ್ರ ಧರ್ಮ. ವೀರಶೈವ ಇತ್ತೀಚಿನದು ಎಂದು ಹೇಳಿದರು. ಈ ವಿಷಯದಲ್ಲಿ ಶ್ರೀಗಳು-ನಾನು ಸ್ಪಷ್ಟವಾಗಿದ್ದೇವೆ. ಇದರಲ್ಲಿ ತಪ್ಪು ಅರ್ಥೈಸಿಕೊಳ್ಳುವ ಸಂದರ್ಭವೂ ಇಲ್ಲ, ಮಾತನ್ನು ತಿರುಚುವ ಅಗತ್ಯವೂ ಇಲ್ಲ. ಕೆಲವರು ಸತ್ಯವನ್ನು ತಿರುಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ನಾನು ಹೇಳಿದ್ದು ಸುಳ್ಳಾಗಿದ್ದರೆ ಆ ಪಾಪ ನನ್ನ ಕುಟುಂಬಕ್ಕೆ ತಟ್ಟಲಿ. ನನ್ನ ಕುಟುಂಬ ಸರ್ವನಾಶವಾಗಲಿ ಎಂದು ಹೇಳಿದರು. ಇದು ಹೀಗೇ ಮುಂದುವರೆದರೆ ನಾನು ನನ್ನ ಕುಟುಂಬ ಸಮೇತ ಸಿದ್ಧಗಂಗಾ ಮಠಕ್ಕೆ ಹೋಗಿ ಅದೇ ಕ್ಷೇತ್ರದಲ್ಲಿ ನಿಂತು ಪ್ರಮಾಣ ಮಾಡುತ್ತೇನೆ. ನಾನು ಬಸವ ನಾಡಿನಿಂದ ಬಂದವನು. ಸುಳ್ಳು ಹೇಳುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಎಂಟು ಭಾಷೆಯಲ್ಲಿ ಬಸವಣ್ಣನವರ ಕುರಿತು ಮಾಹಿತಿ ಕೊಡುವ ಕೆಲಸ ನಡೆಯುತ್ತಿದೆ. ಬಸವಣ್ಣನವರ ಇತಿಹಾಸ ಸೃಷ್ಟಿಯಾಗಬೇಕಿದೆ. ಮುಂದಿನ ಪೀಳಿಗೆಗೆ ಬಸವಣ್ಣನವರು ಪ್ರೇರಣೆಯಾಗಬೇಕಿದೆ ಎಂದರು.

ನನಗೆ ಯಾವುದೇ ಬೆದರಿಕೆ ಕರೆ ಬಂದಿಲ್ಲ. ಬಂದರೂ ಹೆದರುವುದಿಲ್ಲ. ಸರ್ಕಾರದಿಂದ ನನಗೆ ಭದ್ರತೆ ಬೇಕಿಲ್ಲ. ಕೆಲ ಸ್ವಾಮೀಜಿಗಳು, ಮುಖಂಡರು ಹೊರಟ್ಟಿ ಹಾಗೂ ಎಂ.ಬಿ.ಪಾಟೀಲರನ್ನು ಸರ್ವನಾಶ ಮಾಡುತ್ತೇವೆ ಎಂದು ಹೇಳಿದ್ದಾರೆ. ಅದರ ವಿಡಿಯೋ ನನ್ನ ಬಳಿ ಇದೆ. ಆದರೆ ನಾನು ಅದನ್ನು ದೊಡ್ಡದು ಮಾಡುವುದಿಲ್ಲ. ಅದು ಬಿಡುಗಡೆಯಾದರೆ ಕೆಲವರು ಅರೆಸ್ಟ್ ಆಗಬೇಕಾಗುತ್ತದೆ. ಈ ಅಪವಾದ ನನಗೆ ಬೇಡ ಎಂದು ಹೇಳಿದರು.

Facebook Comments

Sri Raghav

Admin