ನಾಮನಿರ್ದೇಶಿತ ಸದಸ್ಯನಿಂದ 30 ಕೋಟಿ ಬಿಬಿಎಂಪಿ ಆಸ್ತಿಗೆ ನಾಮ : ಎಸಿಬಿಗೆ ಎನ್.ಆರ್.ರಮೇಶ್ ದೂರು

ಈ ಸುದ್ದಿಯನ್ನು ಶೇರ್ ಮಾಡಿ

NR-Ramesh-01

ಬೆಂಗಳೂರು, ಡಿ.22- ಇವರು ಯಾರೋ ಸಂನ್ಯಾಸಿ ಅಥವಾ ಮಠಾಧೀಶರೋ ಇರಬೇಕು ಎಂದುಕೊಂಡರೆ ತಪ್ಪು ತಿಳುವಳಿಕೆ. ಇವರು ಚಿಕ್ಕಪೇಟೆ ಕ್ಷೇತ್ರದ ಶಾಸಕ ಆರ್.ವಿ.ದೇವರಾಜ್ ಅವರ ಬಲಗೈ ಭಂಟ. ಸುಮಾರು 30 ಕೋಟಿ ರೂ. ಬೆಲೆಯ ಪಾಲಿಕೆ ಸ್ವತ್ತುಗಳನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದಾರೆ. ಇಂತಹವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್ ಅವರು ಬಿಬಿಎಂಪಿಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿದ್ದಾರೆ. ಇವರ ವಿರುದ್ಧ ಎಸಿಬಿ ಮತ್ತು ಬಿಎಂಟಿಎಫ್‍ಗೆ ದೂರು ದಾಖಲಿಸಲಾಗಿದೆ. ಹೀಗೆಂದು ಹೇಳಿದವರು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷರೂ ಆಗಿರುವ ಆರ್.ವಿ.ದೇವರಾಜ್ ಅವರ ಬೆಂಬಲಿಗರಾದ ಕೃಷ್ಣಮೂರ್ತಿಯವರು ಬಿಬಿಎಂಪಿ ವ್ಯಾಪ್ತಿ ವಾರ್ಡ್ ಸಂಖ್ಯೆ 143ರಲ್ಲಿ ಪಾಲಿಕೆಗೆ ಸೇರಿದ ಸ್ವತ್ತುಗಳ ಸಂಖ್ಯೆ 11, 12, 14, 9044 ಚದರ ಅಡಿ ವಿಸ್ತೀರ್ಣದ ಕನಿಷ್ಟ 30 ಕೋಟಿ ಮೌಲ್ಯದ ಆಸ್ತಿಯನ್ನು ನಕಲಿ ದಾಖಲೆಗಳ ಮೂಲಕ ಪಡೆದು ವರ್ಷಕ್ಕೆ ಸುಮಾರು 36 ಲಕ್ಷ ರೂ.ಗಳಿಗಿಂತಲೂ ಹೆಚ್ಚು ಹಣ ಬಾಡಿಗೆ ರೂಪದಲ್ಲಿ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.  ಪಾಲಿಕೆಯ ಕಂದಾಯ ಇಲಾಖೆ ಮತ್ತು ಕಾಮಗಾರಿ ಇಲಾಖೆಗಳಲ್ಲಿ ಇದ್ದಂತಹ ಭ್ರಷ್ಟ ಅಧಿಕಾರಿಗಳ ನೆರವಿನಿಂದ ಈ ಅತ್ಯಮೂಲ್ಯ ಸ್ವತ್ತುಗಳನ್ನು ಕೃಷ್ಣಮೂರ್ತಿಯವರು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿಲ್ಪಶ್ರೀ ಸರ್ವೀಸ್ ಸ್ಟೇಷನ್, ರಾಜಗೋಪಾಲ್ ಗುಪ್ತ ಎಂಬ ಹೆಸರಿನ ಹಣಕಾಸಿನ ಲೇವಾದೇವಿ ಸಂಸ್ಥೆಗಳು ಇರುವಂತಹ ಮೂರು ಅಂತಸ್ತುಗಳ ವಾಣಿಜ್ಯ ಕಟ್ಟಡ, ಜಿನಿಸಿಸ್ ಏಜೆನ್ಸಿ, ಶೈನ್ ಆಟೋ ಮೊಬೈಲ್ಸ್, ಅಮ್ರಾನ್ ಬ್ಯಾಟರಿ ಸೆಂಟರ್, ಅಕ್ರಮ್ ಮೋಟಾರ್ ವಕ್ರ್ಸ್, ಅಯ್ಯನ್ಸ್ ಮೋಟೋ ಎಂಬ ಸಂಸ್ಥೆಗಳು ಇರುವಂತಹ ಮಧು ಕಾಂಪ್ಲೆಕ್ಸ್, ಮೂರು ಅಂತಸ್ತುಗಳ ವಾಣಿಜ್ಯ ಕಟ್ಟಡ ಹಾಗೂ ಎರಡು ಅಂತಸ್ತುಗಳ ವಸತಿ ಕಟ್ಟಡ ಸೇರಿದಂತೆ ಮೂರು ಬೃಹತ್ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಇದರಿಂದ ಪ್ರತಿ ತಿಂಗಳು 3 ಲಕ್ಷ ಸೇರಿದಂತೆ ವರ್ಷವೊಂದಕ್ಕೆ 36 ಲಕ್ಷ ರೂ.ಗಳ ಬಾಡಿಗೆ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ನಗರ ಭೂ ಮಾಪನ ತಂಡದ ಅಧಿಕಾರಿಗಳು ಕೂಡ ಈ ಆರೋಪದಲ್ಲಿ ಶಾಮೀಲಾಗಿದ್ದಾರೆ. ಈ ಆಸ್ತಿಗಳನ್ನು ಪಾಲಿಕೆ ತನ್ನ ವಶಕ್ಕೆ ತೆಗೆದುಕೊಳ್ಳಲು ಮುಂದಾದಾಗ ನ್ಯಾಯಾಲಯದಲ್ಲಿ ಕೃಷ್ಣಮೂರ್ತಿ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ವಾದ-ವಿವಾದಗಳನ್ನು ಆಲಿಸಿ ಈ ದಾಖಲೆ ನಕಲಿ ಎಂದು ಹೇಳಿತ್ತಲ್ಲದೆ ಪಾಲಿಕೆಯ ಸ್ವತ್ತುಗಳನ್ನು ಕಬಳಿಸಿದ್ದಾರೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿತ್ತು. ನಂತರ ಹೈಕೋರ್ಟ್‍ನಲ್ಲಿ ಇದನ್ನು ಕೃಷ್ಣಮೂರ್ತಿಯವರು ಪ್ರಶ್ನಿಸಿದಾಗ ಇನ್ನೂ ತಡೆಯಾಜ್ಞೆ ಸಿಕ್ಕಿಲ್ಲ. ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದರೂ ಮಧು ಕಾಂಪ್ಲೆಕ್ಸ್‍ನಲ್ಲಿ ಮತ್ತೊಂದು ವಿಸ್ತರಣಾ ಕಟ್ಟಡವನ್ನು ನಿರ್ಮಿಸಿದ್ದಾರೆ.

ಕಾನೂನು ಬಾಹಿರ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದರೂ ಬಿಬಿಎಂಪಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಶಾಸಕರು ಇವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದರು. ಇಷ್ಟೆಲ್ಲ ಆರೋಪ ಇರುವವರನ್ನು ಬಿಬಿಎಂಪಿಗೆ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಿಸಿರುವ ನೈತಿಕತೆಯನ್ನು ಪ್ರಶ್ನಿಸಿರುವ ರಮೇಶ್ ಅವರು ಕೂಡಲೇ ನೇಮಕಾತಿಯನ್ನು ವಾಪಸ್ ಪಡೆಯಬೇಕು. ಪಾಲಿಕೆ ಕಟ್ಟಡಗಳಿಂದ ಪಡೆದಿರುವ ಹಣವನ್ನು ಬಡ್ಡಿ ಸಮೇತ ವಸೂಲು ಮಾಡಬೇಕು. ಕೃಷ್ಣಮೂರ್ತಿ ಹಾಗೂ ಇವರ ಜತೆ ಶಾಮೀಲಾಗಿರುವ ಎಲ್ಲ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಸಿಬಿ ಹಾಗೂ ಬಿಎಂಟಿಎಫ್‍ನಲ್ಲಿ ದೂರು ದಾಖಲಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin