ನಾಲಿಗೆ ಜಾರಿದರೆ ಕುತ್ತು, ಮಾತು ತರುತ್ತೆ ಆಪತ್ತು…!

ಈ ಸುದ್ದಿಯನ್ನು ಶೇರ್ ಮಾಡಿ

Manishanakar--01

– ಕೆ. ಎಸ್. ಜನಾರ್ಧನ್  

ಬೆಂಗಳೂರು, ನ.6- ಮಾತು ಆಡಿದರೆ ಹೋಯ್ತು… ಮುತ್ತು ಒಡೆದರೆ ಹೋಯ್ತು… ಒಂದೊಂದು ಮಾತುಗಳೂ ಒಂದೊಂದು ಕ್ಷೇತ್ರದ ಚುನಾವಣಾ ಪರಿಸ್ಥಿತಿಯನ್ನೇ ಬುಡಮೇಲು ಮಾಡುತ್ತವೆ. ಒಂದು ರಾಜ್ಯದ, ರಾಷ್ಟ್ರದ ಚುನಾವಣಾ ಫಲಿತಾಂಶವನ್ನೇ ಬದಲು ಮಾಡುತ್ತವೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ.  ಪ್ರಸ್ತುತ ನಡೆದ ಉಪಚುನಾವಣೆಯಲ್ಲಿ ಜನಾರ್ದನರೆಡ್ಡಿ ಅವರು ಸಿದ್ದರಾಮಯ್ಯನವರ ಮಗನ ಸಾವಿನ ಬಗ್ಗೆ ನೀಡಿದ ಶಾಪದ ಹೇಳಿಕೆ ಬಳ್ಳಾರಿ ಚುನಾವಣಾ ಚಿತ್ರಣವನ್ನು ಬದಲಿಸಿತು ಎಂದು ವ್ಯಾಖ್ಯಾನಿಸಲಾಗಿದೆ.

ಸಿದ್ದರಾಮಯ್ಯನವರು ಮಾಡಿದ ಪಾಪದಿಂದ ಅವರ ಮಗನ ಸಾವಿನ ಶಾಪ ತಟ್ಟಿದೆ ಎಂದು ಪುರಾಣದ ಉಪಕಥೆ ಹೇಳುವ ಮೂಲಕ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಜನಾರ್ದನರೆಡ್ಡಿ ಆಡಿದ ಮಾತು ಚುನಾವಣೆಯಲ್ಲಿ ಭಾರೀ ಸದ್ದು ಮಾಡಿತ್ತು. ಪರ-ವಿರೋಧದ ಚರ್ಚೆಗಳು ನಡೆದಿದ್ದವು. ಸ್ವತಃ ಬಿಜೆಪಿ ಪಕ್ಷದವರೇ ಈ ಹೇಳಿಕೆಯನ್ನು ವಿರೋಧಿಸಿದ್ದರು. ಇದಕ್ಕೆ ಸಿದ್ದರಾಮಯ್ಯನವರು ನೀವು ಮಾಡಿದ ಪಾಪ ನಿಮ್ಮ ಮಕ್ಕಳಿಗೆ ತಟ್ಟದಿರಲಿ ಎಂದು ಪ್ರತಿಹೇಳಿಕೆ ನೀಡಿ ತಮ್ಮ ದೊಡ್ಡತನ ಮೆರೆದಿದ್ದರು.

ಖುದ್ದು ಯಡಿಯೂರಪ್ಪ , ಶ್ರೀರಾಮುಲು ಮುಂತಾದವರು ಕ್ಷಮೆ ಯಾಚಿಸಿದ್ದರು. ಆದರೂ ಈ ಮಾತಿನಿಂದ ಆ ಕ್ಷೇತ್ರದ ಮತದಾರರು ಅಕ್ಷರಶಃ ಅಸಮಾಧಾನಗೊಂಡಿದ್ದರು. ವೈಯಕ್ತಿಕ ನಿಂದನೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಬಹುಶಃ ಇದು ಚುನಾವಣೆ ಮೇಲೆ ಪರಿಣಾಮ ಬೀರಿರುವ ಸಾಧ್ಯತೆ ಇರಬಹುದು. ಶಿವಮೊಗ್ಗ ಹೇಳಿ ಕೇಳಿ ಬಿಜೆಪಿಯ ಭದ್ರಕೋಟೆ. ಯಡಿಯೂರಪ್ಪ ಪ್ರಶ್ನಾತೀತ ನಾಯಕ. ಕಳೆದ ಬಾರಿ 3.60 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಈ ಬಾರಿ ಕುಮಾರ್ ಬಂಗಾರಪ್ಪ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ವೈಯಕ್ತಿಕವಾಗಿ ನೀಡಿದ ಹೇಳಿಕೆ ಯಡಿಯೂರಪ್ಪನವರ ಮಗ ಬಿ.ವೈ.ರಾಘವೇಂದ್ರ ಅವರ ಗೆಲುವಿನ ಅಂತರವನ್ನು ಬರೋಬ್ಬರಿ 50 ಸಾವಿರಕ್ಕೆ ಇಳಿಸಿತು ಎಂದೇ ಹೇಳಲಾಗಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ಒಟ್ಟಾಗಿ ಇಲ್ಲಿ ಕೆಲಸ ಮಾಡಿದ್ದರೂ ಆಡಿದ ಮಾತು ಜನರ ಮನಸ್ಸಿನ ಮೇಲೆ ನಾಟುತ್ತದೆ. ಅನಗತ್ಯ ವೈಯಕ್ತಿಕ ನಿಂದನೆಗಳು ಕೆಲವೊಮ್ಮೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಹೆಚ್ಚು ಕಡಿಮೆಯಾಗಿದ್ದರೆ ಈ ಕ್ಷೇತ್ರವನ್ನು ಬಿಜೆಪಿ ಕಳೆದುಕೊಳ್ಳಬೇಕಾಗಿತ್ತು. ಇದೇ ರೀತಿ ಗುಜರಾತ್ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವರಾಗಿದ್ದ ಮಣಿಶಂಕರ್ ಅಯ್ಯರ್ ಅವರು ನೀಡಿದ್ದ ನೀಚ ಎಂಬ ಪದ ಗೆಲುವಿನ ಹೊಸ್ತಿಲಿನಲ್ಲಿದ್ದ ಕಾಂಗ್ರೆಸ್‍ನ ಹಾದಿಯನ್ನೇ ಬದಲಿಸಿತು.

ಈ ಹೇಳಿಕೆ ನೀಡಿದ್ದಕ್ಕಾಗಿ ಅವರು ಭಾರೀ ಬೆಲೆ ತೆರಬೇಕಾಯಿತು. ಮಣಿಶಂಕರ್ ಅಯ್ಯರ್ ಅವರನ್ನು ಕಾಂಗ್ರೆಸ್ ಪಕ್ಷದಿಂದಲೇ ತೆಗೆದುಹಾಕಲಾಯಿತು. ಅವರು ನೀಡಿದ್ದ ಈ ಹೇಳಿಕೆಯನ್ನು ಬಿಜೆಪಿ ಅದರಲ್ಲೂ ಮೋದಿ ಅವರು ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಂಡರು. ಗುಜರಾತ್‍ನಲ್ಲಿದ್ದ ವಿರೋಧಿ ಅಲೆಯಿಂದ ಗೆಲ್ಲಬಹುದಾಗಿದ್ದ ಕಾಂಗ್ರೆಸ್ ಈ ಹೇಳಿಕೆಯಿಂದ ಸೋಲಬೇಕಾಯಿತು. ಅದೇ ರೀತಿ ಗುಜರಾತ್‍ನಲ್ಲಿ ಈ ಹಿಂದೆಯೂ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮೋದಿ ಕುರಿತು ಸೋನಿಯಾಗಾಂಧಿ ಅವರು ನೀಡಿದ ಹೇಳಿಕೆಯೂ ಕೂಡ ಬಿಜೆಪಿಗೆ ವರದಾನವಾಗಿ ಪರಿಣಮಿಸಿತ್ತು.

ಬಿ.ಕೆ.ಹರಿಪ್ರಸಾದ್ ಅವರು ಗುಜರಾತ್ ಉಸ್ತುವಾರಿಯಾಗಿದ್ದರು. ಈ ಸಂದರ್ಭದಲ್ಲಿ ಪ್ರಚಾರ ಭಾಷಣಕ್ಕೆ ಬಂದ ಎಐಸಿಸಿ ಅಧ್ಯಕ್ಷರಾಗಿದ್ದ ಸೋನಿಯಾಗಾಂಧಿ ಅವರು ಮುಖ್ಯಮಂತ್ರಿಯಾಗಿದ್ದ ಮೋದಿ ಅವರನ್ನು ಮೌತ್ ಕಾ ಸೌಧ ಘರ್ (ಸಾವಿನ ವ್ಯಾಪಾರಿ) ಎಂದು ಹೇಳಿಕೆ ನೀಡಿದ್ದರು. ಇದೇ ಹೇಳಿಕೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಬಿಜೆಪಿ ಭಾರೀ ಜಯಗಳಿಸಲು ಕಾರಣವಾಗಿತ್ತು. 2008ರ ಸಂದರ್ಭದಲ್ಲಿ ವಿಧಾನಸಭಾ ಅಧಿವೇಶನ ನಡೆಯುವಾಗ ಸಚಿವರಾಗಿದ್ದ ಜನಾರ್ದನರೆಡ್ಡಿ, ಶಾಸಕ ನಾಗೇಂದ್ರ, ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ನಡುವೆ ವಾಕ್ಸಮರ ನಡೆಯಿತು.

ಆ ಸಂದರ್ಭದಲ್ಲಿ ಬಳ್ಳಾರಿಗೆ ಬನ್ನಿ, ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂದು ಗಣಿಧಣಿಗಳು ಹೇಳಿದಾಗ ಸಿದ್ದರಾಮಯ್ಯ ತೋಳು ತಟ್ಟಿ ಬರುತ್ತೇನೆ. ಅದೇನು ಮಾಡುತ್ತೀರ ನೋಡಿಯೇ ಬಿಡೋಣ ಎಂದು ಸವಾಲು ಹಾಕಿದರು. ಅಲ್ಲದೆ, ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಕೈಗೊಂಡರು. ಬಿಜೆಪಿ ಸರ್ಕಾರವನ್ನು ಧೂಳಿಪಟ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದರು. ಈ ರೀತಿ ಒಂದೊಂದು ಹೇಳಿಕೆಗಳು ಒಂದೊಂದು ಮಹತ್ವ ಪಡೆದುಕೊಳ್ಳುತ್ತವೆ. ತಾವಾಡುವ ಒಂದೊಂದು ಮಾತುಗಳ ಮೇಲೆ ಹಿಡಿತವಿರಬೇಕು. ಹಿಡಿತ ಕಳೆದುಕೊಂಡರೆ ಈ ರೀತಿ ವ್ಯತಿರಿಕ್ತ ಪರಿಣಾಮ ಬೀರುವುದು ಗ್ಯಾರಂಟಿ.

ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷ ನೂರು ಸ್ಥಾನಗಳನ್ನು ಪಡೆದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ನಾಲ್ವರು ಪಕ್ಷೇತರರ ಬೆಂಬಲ ಪಡೆದಿದ್ದರೆ ಬಿಬಿಎಂಪಿ ಅಧಿಕಾರದ ಗದ್ದುಗೆ ಹಿಡಿಯಬಹುದಿತ್ತು. ಏಳು ಜನ ಪಕ್ಷೇತರರು ಗೆಲುವು ಸಾಧಿಸಿದ್ದರು. ಅದರಲ್ಲಿ ನಾಲ್ವರು ಬಿಜೆಪಿ ಬಂಡಾಯ ಅಭ್ಯರ್ಥಿಗಳೇ ಇದ್ದರು. ಗೆದ್ದ ನಂತರ ಉಸ್ತುವಾರಿ ಹೊಣೆ ಹೊತ್ತಿದ್ದ ಅಶೋಕ್ ಅವರ ಮನೆ ಬಾಗಿಲಿಗೆ ಬಿಜೆಪಿ ಬಂಡಾಯ ಅಭ್ಯರ್ಥಿಗಳು ಹೋಗಿ ಬಿಜೆಪಿ ಸೇರುತ್ತೇವೆ ಎಂದು ಹೇಳಿದರೂ ಅವರು ಒಪ್ಪಲಿಲ್ಲ. ನಿಮ್ಮ ಸಹವಾಸ ಸಾಕು ಎಂದು ಹೇಳಿದರು. ಅಶೋಕ್ ಅವರು ವ್ಯವಧಾನ ವಹಿಸಲಿಲ್ಲ.

ಇತ್ತ ಕಾಂಗ್ರೆಸ್-ಜೆಡಿಎಸ್ ಪಕ್ಷೇತರರೊಂದಿಗೆ ಮೈತ್ರಿ ಸಾಧಿಸಿ ಬಿಬಿಎಂಪಿ ಅಧಿಕಾರದ ಗದ್ದುಗೆ ಹಿಡಿಯಿತು. ಅಂದು ತಮ್ಮ ಪಕ್ಷದ ಬಂಡಾಯ ಅಭ್ಯರ್ಥಿಗಳೊಂದಿಗೆ ಸಮಾಧಾನಚಿತ್ತವಾಗಿ ಮಾತನಾಡಿದ್ದರೆ ಬಿಬಿಎಂಪಿ ಗದ್ದುಗೆ ಹಿಡಿಯಬಹುದಿತ್ತು. ಮಾತಿನಿಂದಲೇ ಎಲ್ಲವನ್ನೂ ಕಳೆದುಕೊಳ್ಳಬೇಕಾಯಿತು. ಈ ರೀತಿಯ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣಮುಂದೆ ಇವೆ.

Facebook Comments