ನಾಲೆಗಳಲ್ಲಿ ನೀರು ಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ, ನೂರಾರು ರೈತರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Former--01

ನಂಜನಗೂಡು, ಆ.3- ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಹುಲ್ಲಹಳ್ಳಿ ಅಣೆಕಟ್ಟೆಗೆ ಮುತ್ತಿಗೆ ಹಾಕಿ ನೀರು ಹರಿಸಿಕೊಳ್ಳಲು ಮುಂದಾದ ನೂರಕ್ಕೂ ಹೆಚ್ಚು ಸಂಖ್ಯೆಯ ರೈತರನ್ನು ವಶಕ್ಕೆ ಪಡೆದು ಬಂಧಿಸುವ ಮೂಲಕ ಪೊಲಿಸರು ರೈತರ ಕ್ರಮವನ್ನು ವಿಫಲಗೊಳಿಸಿದ್ದಾರೆ.ಕಬಿನಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ  ನೀರು ಹರಿಸುವಂತೆ ಒತ್ತಾಯಿಸಿ ಕಳೆದ ಒಂದು ವಾರದಿಂದ ನಿರಂತರವಾಗಿ ಹೋರಾಟ ನಡೆಸುತ್ತಿರುವ ರೈತರು ತಾಲೂಕಿನ ಹುಲ್ಲಹಳ್ಳಿಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮುಂಭಾಗ ಕೆಲ ಸಮಯ ಧರಣಿ ನಡೆಸಿ ನಂತರ ಹುಲ್ಲಹಳ್ಳಿಯ ಹೊರವಲಯದಲ್ಲಿರುವ ಅಣೆಕಟ್ಟೆಗೆ ತೆರಳಿ ತಮ್ಮ ನಾಲೆಗಳಿಗೆ ತಾವೇ ನೀರು ಹರಿಸಿಕೊಳ್ಳುವುದಾಗಿ ಹೇಳಿ ಪಾದಯಾತ್ರೆ ಮೂಲಕ ಹೊರಟರು. ಈ ಸಂದರ್ಭ ಮಲ್ಲೇಶ್ವರ ಸ್ವಾಮಿ ದೇವಾಲಯದ ಬಳಿ ರೈತರನ್ನು ತಡೆಗಟ್ಟಿದ ಪೊಲಿಸರು ರೈತರ ಪ್ರಯತ್ನವನ್ನು ವಿಫಲಗೊಳಿಸಿದರು.

ಇದಕ್ಕೂ ಮೊದಲು ರೈತರನ್ನುದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ತಾಲೂಕು ಅಧ್ಯಕ್ಷ ವಿಧ್ಯಾಸಾಗರ್ ಕಳೆದ ಒಂದು ತಿಂಗಳಿನಿಂದ ಕಬಿನಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.

ಅಣೆಕಟ್ಟೆಗೆ ನುಗ್ಗುವ ಪ್ರಯತ್ನ:

ಸಂಗಂ ರಸ್ತೆ ಮೂಲಕ ಕಬಿನಿ ಅಣೆಕಟ್ಟೆಗೆ ತೆರಳುವ ಪ್ರಯತ್ನಹ ನಡೆಸಿದ ರೈತರನ್ನು ರಸ್ತೆಯಲ್ಲೇ ತಡೆಗಟ್ಟಿದ ಪೊಲಿಸರು ಅಣೆಕಟ್ಟೆ ಸಮೀಪ ಪ್ರವೇಶ ನೀಡಲು ನಿರಾಕರಿಸಿದರು ಈ ವೇಳೆ ರೈತರು ಮತ್ತು ಪೊಲಿಸರಿಗೆ ಕೆಲ ಸಮಯ ವಾಗ್ವಾದ ಜರುಗಿತು.  ಸ್ಥಳದಲ್ಲಿ ಹಾಜರಿದ್ದ ತಹಶೀಲ್ದಾರ್ ದಯಾನಂದ್ ಉದ್ರಿಕ್ತ ರೈತರನ್ನು ಸಂತೈಸುವ ಪ್ರಯತ್ನ ನಡೆಸಿದರಾದರೂ ಸಫಲವಾಗಲಿಲ್ಲ. ಈ ಸಂದರ್ಭದಲ್ಲಿ ಕಬಿನಿ ನಾಲೆಗಳ ಉಪವಿಭಾಗದ ಎಇಇ ಶ್ರೀನಿವಾಸ್ ನೀರಾವರಿ ಇಲಾಖೆ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ನೀರು ಬಿಡುಗಡೆ ಕುರಿತು ಮಾತುಕತೆ ನಡೆಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.

ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಅಶ್ವಥ್‍ರಾಜೇ ಅರಸ್, ಹಸಿರು ಸೇನೆ ಜಿಲ್ಲಾಧ್ಯಕ್ಷ ಎಚ್.ಆರ್.ಬಂಗಾರಸ್ವಾಮಿ, ಶಿರಮಳ್ಳಿ ಸಿದ್ಧಪ್ಪ, ಬೊಕ್ಕಹಳ್ಳಿ ನಂಜುಂಡಸ್ವಾಮಿ, ಬಿಳಿಗೆರೆ ಗುರುಲಿಂಗೇಗೌಡ, ಹೆಜ್ಜಿಗೆ ಪ್ರಕಾಶ್,ಸತೀಶ್‍ರಾವ್, ಮರಳೂರು ಮಹದೇವ್,ಶಿರಮಳ್ಳಿ ಪುಟ್ಟಬಸಪ್ಪ ಮುಂತಾದವರು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin