ನಾಲೆ ನಿರ್ಮಾಣಕ್ಕೆ ಚಿಂತನೆ : ಟಿ.ಬಿ.ಜಯಚಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

tb--jayachandra

 

ತುಮಕೂರು,ಆ.26-ಹೇಮಾವತಿ ಎಡದಂಡೆ ನಾಲೆಯಿಂದ ಒಂದು ಲಕ್ಷ ಎಕರೆ ಜಮೀನಿಗೆ ನೀರಾವರಿ ಒದಗಿಸುವ ಮತ್ತು ಕೃಷಿಗೆ 1675 ಕ್ಯೂಸೆಕ್ ನೀರು ಹರಿಸುವ ಸಾಮಥ್ರ್ಯದ ನಾಲೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಣ್ಣ ನೀರಾವರಿ ಇಲಾಖೆ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು. ಇಂದು ಗುಬ್ಬಿ ತಾಲ್ಲೂಕಿನ ಚೇಳೂರು, ಹಾಗಲವಾಡಿ ಸೇರಿದಂತೆ ಒಟ್ಟು 7 ಕಾಮಗಾರಿಗಳ ಪರಿಶೀಲನೆ ನಡೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಹಾಸನ ಜಿಲ್ಲೆಯ ಗೊರೂರು ಬಳಿ ಹೇಮಾವತಿ ನದಿಯ 30 ಟಿಎಂಸಿ ನೀರಿನ ಸಾಮಥ್ರ್ಯದ ಹೇಮಾವತಿ ಅಣೆಕಟ್ಟು ಯೋಜನೆಯನ್ನು ಕೈಗೊಳ್ಳಲು ಉದ್ದೇಶಿಸಲಾಗಿತ್ತು.

1973-74ರಲ್ಲಿ ಅಂದಿನ ಕೇಂದ್ರ ಜಲಸಂಪನ್ಮೂಲ ಸಚಿವರಾಗಿದ್ದ ಡಾ.ಕೆ.ಎನ್.ರಾವ್ ಮತ್ತು ಹಲವು ಪರಿಣಿತರ ಅಭಿಪ್ರಾಯದಂತೆ ನದಿಪಾತ್ರದಲ್ಲಿ ಸರಾಸರಿ 80 ಟಿಎಂಸಿ ನೀರಿನ ಲಭ್ಯತೆಯಿದ್ದು, ಈ ಯೋಜನೆಯಿಂದ ಮಂಡ್ಯ ಮತ್ತು ತುಮಕೂರು ಜಿಲ್ಲೆಯ ಭಾಗಕ್ಕೆ ಎಡದಂಡೆ ನಾಲೆ ವಿಸ್ತರಣೆ ಮಾಡಿ ನಿರ್ಮಿಸಲಾಗಿತ್ತು. ಒಟ್ಟಾರೆ 6.55 ಲಕ್ಷ ಎಕರೆ ಜಮೀನಿಗೆ ನೀರಾವರಿ ಹಾಗೂ ಬರಗಾಲ ಪ್ರದೇಶಗಳಾದ ಅರಸೀಕೆರೆ, ಚಿಕ್ಕನಾಯಕನಹಳ್ಳಿ, ತಿಪಟೂರು, ಶಿರಾ, ಮಧುಗಿರಿ, ಗೋಳೂರು ಇತ್ಯಾದಿ ಪ್ರದೇಶಗಳಲ್ಲಿರುವ ಜನರಿಗೆ ಕುಡಿಯುವ ನೀರು ಮತ್ತು ಕೆರೆಗಳಿಗೆ ನೀರು ಹರಿಸುವುದು ಸೇರಿದಂತೆ ಏತನೀರಾವರಿ ಯೋಜನೆಗಳನ್ನು ಪರಿಗಣಿಸಿ ಎಡದಂಡೆ ನಾಲೆಯನ್ನು 4 ಸಾವಿರ ಕ್ಯೂಸೆಕ್ ನೀರು ಹರಿಯುವಂತೆ ವಿನ್ಯಾಸವನ್ನು ಮಾಡಲು ಅಂದು ತೀರ್ಮಾನಿಸಲಾಗಿತ್ತು ಎಂದು ತಿಳಿಸಿದರು.

ಒಟ್ಟು ತುಮಕೂರು ಜಿಲ್ಲೆಗೆ 3.83 ಲಕ್ಷ ಜಮೀನಿಗೆ ನೀರಾವರಿ ಹರಿಸುವ ಮತ್ತು ಜನತೆಗೆ ಕುಡಿಯುವ ನೀರಿನ ಯೋಜನೆಯನ್ನು ಪರಿಗಣಿಸಿ 4 ಸಾವಿರ ಕ್ಯೂಸೆಕ್‍ನಲ್ಲಿ ತುಮಕೂರು ಭಾಗಕ್ಕೆ 2400 ಕ್ಯೂಸೆಕ್ ನೀರು ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ ಎಡದಂಡೆ ನಾಲೆ 72 ಕಿ.ಮೀವರೆಗೆ ಯೋಜನೆಯಂತೆ ವಿನ್ಯಾಸಗೊಳಿಸಲಾಗಿದೆ. ಇಲ್ಲಿಯವರೆಗೂ ತುಮಕೂರು ಭಾಗದಲ್ಲಿ 2400 ಕ್ಯೂಸೆಕ್ ಹರಿಯುವ ಬದಲು 1500 ಕ್ಯೂಸೆಕ್ ನೀರು ಮಾತ್ರ ಹರಿಯುತ್ತಿದ್ದು, ಈ ಕಾರಣದಿಂದಲೇ ಕಳೆದ 25 ವರ್ಷಗಳಿಂದ ತುಮಕೂರು ಭಾಗದ ಹಲವು ಕೆರೆಗಳಿಗೆ ನೀರಿನ ಕೊರತೆ ಉಂಟಾಗಿದೆ ಎಂದ ಅವರು, ಕಳೆದ 20 ವರ್ಷಗಳಿಂದಲೂ ನಮಗೆ ಹರಿಯುವ 2400 ಕ್ಯೂಸೆಕ್ ನೀರು ಬಳಸಲು ಸಾಧ್ಯವಾಗಿಲ್ಲ. ಆದರೆ 20 ವರ್ಷಗಳಿಂದ ಪದೇ ಪದೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಗಮನಕ್ಕೆ ತಂದಿದ್ದೇವೆ.

ಈ ಬಗ್ಗೆ 2014-15ನೇ ಸಾಲಿನಲ್ಲಿ ಸಂಪೂರ್ಣವಾಗಿ ತಾಂತ್ರಿಕ ಮಾಹಿತಿಯನ್ನು ನೀಡಿದ್ದು, ಎಡದಂಡೆ ನಾಲೆಯನ್ನು 72 ಕಿ.ಮೀ ವಿಸ್ತರಣೆ ಮಾಡದೇ ಇದ್ದರೆ ತುಮಕೂರು ಭಾಗಕ್ಕೆ ನೀರು ಬರುವುದಿಲ್ಲ. ಇಲ್ಲಿನ ಜನರ ಮತ್ತು ರೈತರ ವಿರೋಧಕಟ್ಟಿಕೊಳ್ಳಬೇಕಾಗುತ್ತದೆ ಎಂದು ಮುಖ್ಯಮಂತಿಗಳ ಗಮನಕ್ಕೆ ತಂದಿದ್ದೇವೆ ಎಂದರು.  ಈ ಹಿನ್ನೆಲೆಯಲ್ಲಿ ನಾಲೆ ವಿಸ್ತರಣೆಗೆ 652 ಕೋಟಿ ಅಂದಾಜು ವೆಚ್ಚಕ್ಕೆ ಮುಖ್ಯಮಂತ್ರಿಯವರು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ್ದು , ಟೆಂಡರ್ ಕರೆಯಲಾಗಿದೆ. ಇದರಂತೆ ಕಾಮಗಾರಿ ಆರಂಭವಾಗಿ ಇಲ್ಲಿಯ ತನಕ ಶೇ.65ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಸದ್ಯದಲ್ಲೇ ಉಳಿದ ಕಾಮಗಾರಿ ಪೂರ್ಣಗೊಳಿಸಿ ಜಿಲ್ಲೆಯ ಎಲ್ಲ ಕೆರೆಗಳಿಗೆ ಹಾಗೂ ಕುಡಿಯುವ ನೀರು ಒದಗಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಸಿಇಒ ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin