ನಾಳೆಯಿಂದ ಪ್ರೇಕ್ಷಕರೆದುರು ‘ಚಮಕ್’ ಚಮತ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

cha-1

ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷೆಯ ಚಿತ್ರವಾದ ಚಮಕ್ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಳ್ಳುತ್ತಿದ್ದು, ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರ ಹೊಸ ವರ್ಷಕ್ಕೆ ಹೊಸ ಹುರುಪು ನೀಡಲಿದೆ ಎಂಬ ನಂಬಿಕೆ ಚಿತ್ರತಂಡಕ್ಕಿದೆ. ಈಗಾಗಲೇ ಈ ಚಿತ್ರದ ಹಾಡು ಹಾಗೂ ಟ್ರೇಲರ್‍ಗಳು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಆ ನಿಟ್ಟಿನಲ್ಲಿ ಚಮಕ್ ಪರಿಪರಿಯಾಗಿ ಪ್ರೇಕ್ಷಕರನ್ನು ಸೆಳೆಯಲು ತುದಿಗಾಲಲ್ಲಿ ನಿಂತಿದೆ.  ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿಂಪಲ್ ಸುನಿ ನಿರ್ದೇಶನದ ಚಮಕ್ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಮೊನ್ನೆ ನಡೆದ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿತು.

ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂದು ಪ್ರೇಕ್ಷಕರು ಕೂಡ ಎದುರು ನೋಡುತ್ತಿದ್ದಾರೆ, ಇವೆಲ್ಲದರ ನಡುವೆ ಚಿತ್ರದ ವಿತರಣೆಯ
ಹಕ್ಕುಗಳಿಗೂ ಹೆಚ್ಚಿನ ಡಿಮ್ಯಾಂಡ್ ಇರುವುದರಿಂದ, ಚಿತ್ರವನ್ನು ಕರ್ನಾಟಕ ಮಾತ್ರವಲ್ಲದೆ ಹೈದರಾಬಾದ್, ಚೆನ್ನೈ, ಮುಂಬೈ ಮತ್ತು ಭಾರತದ ಇತರ ಮಹಾನಗರಗಳಲ್ಲೂ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ಇದರೊಂದಿಗೆ ಚಿತ್ರವನ್ನು ವಿದೇಶಗಳಲ್ಲೂ ಜನವರಿ 6 ರಿಂದ ರಿಲೀಸ್ ಮಾಡಲು ನಿರ್ಧರಿಸಿದ್ದಾರಂತೆ. ಹೊಟೇಲ್ ಉದ್ಯಮಿಯಾದ ಮೈಸೂರು ಮೂಲದ ಟಿ.ಆರ್.ಚಂದ್ರಶೇಖರ್ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಚಮಕ್ ಚಿತ್ರವನ್ನು ನಿರ್ಮಿಸಿದ್ದು, ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.  ಬಹಳ ಸರಳ ಹಾಗೂ ಸ್ನೇಹಜೀವಿಯಾಗಿರುವ ಇವರು ಸಮಾಜ ಸೇವೆ ಮಾಡುವ ಆಸೆ ಹೊತ್ತುಕೊಂಡಿದ್ದಾರೆ. ಅದರಂತೆ ಚಂದನವನದಲ್ಲಿ ಸದಭಿರುಚಿಯ ಮನರಂಜನಾತ್ಮಕ ಚಿತ್ರ ನೀಡುವ ತವಕ ಹೊಂದಿದ್ದು, ಒಂದರ ಹಿಂದೆ ಒಂದರಂತೆ ಸುಮಾರು 4 ಚಿತ್ರಗಳನ್ನು ನಿರ್ಮಿಸಲು ಮುಂದಾಗಿದ್ದಾರೆ.

ಇವರ ಪ್ರಕಾರ, ಡಿಸೆಂಬರ್ ತಿಂಗಳು ಬಹಳ ಅದೃಷ್ಟದ ತಿಂಗಳು ಎನ್ನುತ್ತ ಗಣೇಶ್‍ರವರ ಮುಂಗಾರು ಮಳೆ ಬಿಡುಗಡೆಯಾಗಿದ್ದು ಡಿಸೆಂಬರ್ 29ರಂದೇ. ಅದೇ ರೀತಿ ಕಿರಿಕ್ ಪಾರ್ಟಿಯ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರವೂ ಕಳೆದ ವರ್ಷ ಡಿಸೆಂಬರ್ 29ರಂದೇ ಬಿಡುಗಡೆಯಾಗಿತ್ತು. ಹಾಗೆ ಇದೇ 29ರಂದು ವೈಕುಂಠ ಏಕಾದಶಿ ಆಗಿರುವುದರಿಂದ ಬಹಳ ವಿಶೇಷವಾದ ದಿನ. ಹಾಗಾಗಿ ನಮ್ಮ ಚಿತ್ರವು ಯಶಸ್ಸಿನ ಉತ್ತುಂಗಕ್ಕೆ ಹೋಗಲಿದೆ ಎಂಬ ಭರವಸೆ ನಮಗಿದೆ. ನಿಮ್ಮೆಲ್ಲರ ಸಹಕಾರ ನಮಗೆ ಅತ್ಯಗತ್ಯ ಎಂದರು.
ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಖ್ಯಾತಿಯ ಸಿಂಪಲ್ ಸುನಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ನಿರ್ದೇಶಕ ಸುನಿ ಹೇಳುವ ಹಾಗೆ ಈ ಚಿತ್ರ ಬಹಳ ವಿಭಿನ್ನವಾಗಿದ್ದು, ನೀರಿನಲ್ಲಿ ಓಡ್ಕ ಸೇರಿದರೆ ಹೇಗೋ ಹಾಗೆ ಗಣೇಶ್‍ರ ಪಾತ್ರ ಬಂದರೆ ನೀರಿನಲ್ಲಿ ತೀರ್ಥವಿದ್ದಂತೆ ರಶ್ಮಿಕಾರ ಪಾತ್ರ ಎಂದು ಹೇಳುವ ಮೂಲಕ ಬಹಳಷ್ಟು ಹಾಸ್ಯಮಿಶ್ರಿತದೊಂದಿಗೆ ಮನಮಿಡಿಯುವ ದೃಶ್ಯಗಳು ಕೂಡ ಪ್ರೇಕ್ಷಕರನ್ನು ಸೆಳೆಯಲಿದೆ ಎಂದು ಮಾರ್ಮಿಕವಾಗಿ ಚಿತ್ರದ ಸಣ್ಣ ಎಳೆಯನ್ನು ತೆರೆದಿಟ್ಟರು.
ಅದರಂತೆ ಇದೇ ಮೊದಲ ಬಾರಿಗೆ ಗೋಲ್ಡನ್‍ಸ್ಟಾರ್ ಗಣೇಶ್ ಈ ಚಿತ್ರದಲ್ಲಿ ಒಬ್ಬ ಪ್ರಸೂತಿ ತಜ್ಞನಾಗಿ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಗೆಳೆಯರೊಂದಿಗೆ ಮೋಜು ಮಾಡುತ್ತ, ಪಾರ್ಟಿ, ಪಬ್ ವಿಹರಿಸುವುದು ಈತನ ದೈನಂದಿನ ಬದುಕಾಗಿರುತ್ತದೆ. ಮನೆಯವರೆಲ್ಲ ಸೇರಿ ಡಾ.ಖುಷ್‍ಗೆ ಮದುವೆ ನಿಶ್ಚಯ ಮಾಡುತ್ತಾರೆ. ಸಂಪ್ರದಾಯಸ್ಥ ಮನೆತನದ ಹುಡುಗಿ ಸಿಕ್ಕರೆ ಮಾತ್ರ ಮದುವೆ ಎಂದು ಒಪ್ಪಿಕೊಳ್ಳುವ ಖುಷ್, ನಾಯಕಿ ಮನೆಗೆ ಹೆಣ್ಣು ನೋಡಲು ಹೋಗುತ್ತಾನೆ. ಆಕೆಯ ಮುಗ್ದತೆಗೆ ಮಾರುಹೋದ ಖುಷ್ ಆಕೆಯನ್ನು ಮದುವೆಯಾಗಲು ಒಪ್ಪಿಕೊಳ್ಳುತ್ತಾನೆ. ಮುಂದೆ ಮದುವೆಯಾದ ನಂತರದ ದಾಂಪತ್ಯ ಜೀವನದಲ್ಲಿ ನಡೆಯುವ ಘಟನೆಗಳು, ಎರಡು ಕುಟುಂಬಗಳ ಬಾಂಧವ್ಯದ ಕಥೆಯೇ ಚಮಕ್ ಚಿತ್ರದ ಕಥಾಹಂದರ. ಇದೇ ಮೊದಲ ಬಾರಿಗೆ ಗೋಲ್ಡನ್‍ಸ್ಟಾರ್ ಗಣೇಶ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯಾಗಿ ಅಭಿನಯಿಸಿರುವ ಚಿತ್ರ ಇದಾಗಿದೆ.ಒಟ್ಟಿನಲ್ಲಿ ಇವರಿಬ್ಬರ ಜೋಡಿ ತೆರೆ ಮೇಲೆ ಒಂದು ರೀತಿ ಮೋಡಿ ಮಾಡಲಿದೆ ಎಂಬ ಮಾತು ಕೇಳಿಬರುತ್ತಿದ್ದು, ಈ ವಿಚಾರವಾಗಿ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಚಿತ್ರದ ಒಂದಷ್ಟು ಮಜಲುಗಳನ್ನು ಮಾಧ್ಯಮದವರ ಮುಂದೆ ತೆರೆದಿಟ್ಟರು. ಹಾಗೆಯೇ ರಶ್ಮಿಕಾ ಕೂಡ ಮಾತನಾಡುತ್ತ, ಚಿತ್ರತಂಡದೊಂದಿಗೆ ಹಾಗೂ ತನ್ನ ಪಾತ್ರದ ಮುಗ್ದತೆ ಬಗ್ಗೆಯೂ ಕೂಡ ನಿರರ್ಗಳವಾಗಿ ಮಾತನಾಡಿದರು.

ಉಳಿದಂತೆ ಸಾಧು ಕೋಕಿಲ, ಹನುಮಂತೆ ಗೌಡ್ರು, ವಿಜಯಲಕ್ಷ್ಮಿ ಉಪಾಧ್ಯ, ಸುಮಿತ್ರಮ್ಮ, ರಘುರಾಮ್, ಹಂಸ, ಗಿರೀಷ್ ವಿಜೇತ್ ಗೌಡ, ರಘು, ರಾಮನಕೊಪ್ಪ, ಕೆಂಪೇಗೌಡ, ಸುಧಾಕರ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ. ನವರಸ ನಾಯಕ ಜಗ್ಗೇಶ್ ಈ ಚಿತ್ರದಲ್ಲಿ ಕಂಠದಾನ ಮಾಡಿದ್ದಾರೆ. ಜೂಡಾ ಸ್ಯಾಂಡಿ ಅವರ ಸುಮಧುರವಾದ ಗೀತೆಗಳು, ಸಂತೋಷ್ ರೈ ಪಾತಾಜೆ ಅವರ ಮುದ್ದಾದ ಛಾಯಾಗ್ರಹಣ ಚಮಕ್ ಚಿತ್ರದ ಹೆಗ್ಗಳಿಕೆಗಳಲ್ಲಿ ಒಂದಾಗಿದ್ದು, ಇದೇ ಮೊದಲ ಬಾರಿಗೆ ವಿಶೇಷವಾದ ಕ್ಯಾಮೆರಾವೊಂದನ್ನು ಬಳಸಿದ್ದಾರಂತೆ. ಬಹಳಷ್ಟು ಪೂರ್ವ ತಯಾರಿಯೊಂದಿಗೆ ಸಿದ್ಧವಾಗಿರುವ ಈ ಚಿತ್ರ ಬೆಳ್ಳಿ ಪರದೆ ಮೇಲೆ ಯಾವ ರೀತಿ ಪ್ರೇಕ್ಷಕರಿಗೆ ಚಮಕ್ ನೀಡುತ್ತದೆ ಎಂಬುದನ್ನು ನೋಡ ಬೇಕಿದೆ.

Facebook Comments

Sri Raghav

Admin