ನಾಳೆಯಿಂದ ಬಾರ್ಡರ್- ಗವಾಸ್ಕರ್ ಸರಣಿಯ ಅಂತಿಮ ಪಂದ್ಯ : ಗೆಲುವಿಗಾಗಿ ಕೊಹ್ಲಿ-ಸ್ಮಿತ್ ಪಡೆ ಜಂಗೀಕುಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Kohli-Smith

ಧರ್ಮಶಾಲಾ, ಮಾ. 24- ಪ್ರತಿಷ್ಠೆ ಪಂದ್ಯವೆನಿಸಿಕೊಂಡಿರುವ ಧರ್ಮಶಾಲಾ ಪಂದ್ಯದಲ್ಲಿ ಗೆದ್ದು ಬೀಗುವ ಹುಮ್ಮಸ್ಸಿನಲ್ಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ 4ನೆ ಪಂದ್ಯದಲ್ಲಿ ಹಲವು ಪ್ರಶ್ನೆಗಳು ಉದ್ಭವಿಸಿವೆ.  ರಾಂಚಿಯಲ್ಲಿ ನಡೆದ ಪಂದ್ಯದ ವೇಳೆ ಗಾಯಗೊಂಡಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ನಾಳಿನ ಪಂದ್ಯದಲ್ಲಿ ಇಳಿಯುತ್ತಾರೆಯೇ? ವೇಗಿಗಳಿಗೆ ನೆರವಾಗಲಿರುವ ಪಿಚ್‍ನಲ್ಲಿ ಮೂವರು ವೇಗದ ಬೌಲರ್‍ಗಳನ್ನು ಕಣಕ್ಕಿಳಿಸುತ್ತಾರೆಯೇ? ಅಂತಿಮ ಪಂದ್ಯದಲ್ಲಿ ಆಡಲೇಬೇಕೆಂಬ ಬಯಕೆಯಿಂದಿರುವ ವೇಗಿ ಮೊಹಮ್ಮದ್ ಶಮಿಗೆ 11ರ ತಂಡದಲ್ಲಿ ಸ್ಥಾನ ಸಿಗುವುದಿಲ್ಲ ಎಂದು ತಿಳಿದಿದ್ದರೂ ಅಂತಿಮ ಕ್ಷಣದಲ್ಲಿ ಸ್ಥಾನ ದೊರೆಯಬಹುದೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

4ನೆ ಸರಣಿ ಗೆಲುವಿನತ್ತ ಕೊಹ್ಲಿ ಕಣ್ಣು:

ಕ್ಯೂಲಿಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯಿಂದ ನಾಯಕತ್ವ ವಹಿಸಿಕೊಂಡ ನಂತರ ಜಯದ ಯಾತ್ರೆ ಆರಂಭಿಸಿರುವ ಕೊಹ್ಲಿಗೆ ನಾಳೆಯ ಪಂದ್ಯ ಗೆಲ್ಲುವ ಮೂಲಕ 2-1ರ ಅಂತರದಿಂದ ಗೆಲುವು ಸಾಧಿಸಿ 4ನೆ ಸರಣಿಯನ್ನು ಗೆದ್ದುಕೊಳ್ಳುವ ಹುಮ್ಮಸ್ಸಿನಲ್ಲಿದ್ದಾರೆ.

ಲಯಕ್ಕೆ ಮರಳುವೇ ಕೊಹ್ಲಿ:

ಆಸ್ಟ್ರೇಲಿಯಾ ವಿರುದ್ಧದ ಸರಣಿಯುದ್ದಕ್ಕೂ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ ನಾಳೆ ಪಂದ್ಯದಲ್ಲಾದರೂ ಆಕ್ರಮಣಕಾರಿ ಆಟ ಆಡುವ ಮೂಲಕ ಲಯಕ್ಕೆ ಮರಳುವರೇ ಎಂದು ಕೊಹ್ಲಿ ಅಭಿಮಾನಿಗಳು ಕಾತರದಿಂದಿದ್ದಾರೆ.

ಐವರು ಬೌಲರ್‍ಗಳು ಕಣಕ್ಕೆ:

ಬ್ಯಾಟಿಂಗ್‍ಗಿಂತ ಬೌಲಿಂಗ್‍ಗೆ ಹೇಳಿ ಮಾಡಿಸಿದಂತೆ ರೂಪುಗೊಂಡಿರುವ ಧರ್ಮಶಾಲಾ ಪಿಚ್‍ನಲ್ಲಿ ಐವರು ಬೌಲರ್‍ಗಳನ್ನು ಕಣಕ್ಕಿಳಿಸಲು ಕೊಹ್ಲಿ ನಿರ್ಧರಿಸಿದ್ದಾರೆ. ಈಗಾಗಲೇ ಟೂರ್ನಿಯಲ್ಲಿ ಸ್ಪಿನ್ನರ್‍ಗಳಾದ ಅಶ್ವಿನ್ ಹಾಗೂ ಜಡೇಜಾ ಉತ್ತಮ ಬೌಲಿಂಗ್ ಮಾಡುತ್ತಿದ್ದು ವೇಗದ ಲಯದಲ್ಲಿ ಉಮೇಶ್ ಯಾದವ್ ಮಿಂಚಿದರೂ ಇಶಾಂತ್‍ಶರ್ಮಾ ಮಂಕಾಗಿದ್ದು ನಾಳೆಯ ಪಂದ್ಯದಲ್ಲಿ ಇಶಾಂತ್ ಬದಲಿಗೆ ಭುವನೇಶ್ವರ್‍ಕುಮಾರ್‍ಗೆ ಸ್ಥಾನ ಕಲ್ಪಿಸುವ ಚಿಂತೆಯೂ ಕೊಹ್ಲಿಗಿದೆ.

ಸ್ಲಿಜಿಂಗ್ ನೆರಳು:

ಸರಣಿ ಗೆಲ್ಲಲು ಮಹತ್ತರ ಪಂದ್ಯವೆನಿಸಿಕೊಂಡಿರುವ ಧರ್ಮಶಾಲಾ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸ್ಲಿಜಿಂಗ್ ಮೂಲಕ ಎದುರಾಳಿ ಆಟಗಾರರನ್ನು ಕಟ್ಟಿಹಾಕಲು ಮುಂದಾಗುವ ಭಯವೂ ಹೆಚ್ಚಾಗಿದೆ.

ಗಾಯಾಳುಗಳ ಸಮಸ್ಯೆ:

ವೇಗದ ಬೌಲರ್ ಮಿಚಲ್ ಸ್ಟ್ರಾಕ್ ಹಾಗೂ ಭರವಸೆಯ ಬ್ಯಾಟ್ಸ್‍ಮನ್ ಮಿಚಲ್ ಮಾರ್ಷ್‍ರವರು ಗಾಯದ ಸಮಸ್ಯೆಯಿಂದ ನಾಳೆಯ ಪಂದ್ಯಕ್ಕೆ ಅಲಭ್ಯರಾಗುವುದು ಆಸೀಸ್ ನಾಯಕ ಸ್ಟೀವನ್‍ಸ್ಮಿತ್‍ಗೆ ದೊಡ್ಡ ತಲೆನೋವಾಗಿದೆ.

ಫಿಟ್ ಆದರೆ ಆಡುವೆ:

ಇದೇ ವೇಳೆ ನಾಳಿನ ಪಂದ್ಯದ ವೇಳೆಗೆ ನಾನು ಸಂಪೂರ್ಣ ಫಿಟ್ ಆದರೆ ಮೈದಾನಕ್ಕೆ ಇಳಿಯುತ್ತೇನೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿರುವುದರಿಂದ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin