ನಾಳೆಯಿಂದ ರಾಜಕಾಲುವೆ ಒತ್ತುವರಿ ತೆರವು : ಅಧಿಕಾರಿಗಳಿಗೆ ಸಿಎಂ ಖಡಕ್ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

CM-Meetingನಗರದಲ್ಲಿ 1,130ಜಾಗಗಳಲ್ಲಿ ರಾಜಕಾಲುವೆಗಳು ಒತ್ತುವರಿಯಾಗಿದ್ದು, ಅವುಗಳನ್ನು ನಾಳೆಯಿಂದಲೇ ತೆರವು ಮಾಡುವ ಆಂದೋಲನವನ್ನು ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟಪ್ಪಣೆ ಮಾಡಿದ್ದಾರೆ.    ಮಳೆಯಿಂದ ಇತ್ತೀಚೆಗೆ ಸಂಭವಿಸಿದ ಹಾನಿ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಮಳೆಗಾಲದಲ್ಲಿ ನೀರು ಸಲೀಸಾಗಿ ಹರಿದು ಹೋಗುವ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವುದೇ ಸಮಸ್ಯೆಯ ಮೂಲವಾಗಿದೆ. ಹೀಗಾಗಿ ರಾಜಕಾಲುವೆ ಒತ್ತುವರಿ ತೆರವು ಮಾಡಿ ಕೂಡಲೇ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ರಾಜಕಾಲುವೆ ಒತ್ತುವರಿಗೆ ಕಾರಣರಾದ ಅಧಿಕಾರಿಗಳು ಯಾರು, ಎಲ್ಲಿ ಲೋಪವಾಗಿದೆ, ಇದರಲ್ಲಿ ಇಂಜಿನಿಯರ್‌ಗಳ ಪಾತ್ರವೇನು, ರಾಜಕಾಲುವೆಗಳ ಮೇಲೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿ ನೀಡಿದ ನಗರಕೋಶದ ಅಧಿಕಾರಿಗಳು ಯಾರು, ಯಾವ ಒತ್ತುವರಿ ಬಗ್ಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ.

ಅಡಚಣೆ ಇಲ್ಲದಿದ್ದರೂ ತೆರವುಗೊಳ್ಳದೆ ಇರುವ ಒತ್ತುವರಿ ಯಾವುದು ಎಂಬೆಲ್ಲಾ ಮಾಹಿತಿ ಇರುವ ಸಮಗ್ರ ವರದಿಯನ್ನು ಇನ್ನು ಮೂರು ದಿನಗಳೊಳಗಾಗಿ ವಲಯವಾರು ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ರಾಜಕಾಲುವೆ ಒತ್ತುವರಿಯಿಂದಾಗಿ ಜನ ಸಂಕಷ್ಟಕ್ಕೀಡಾಗಿದ್ದಾರೆ. ಈಗ ನಡೆದಿರುವ ಸರ್ವೆ ಪ್ರಕಾರ 1,130 ಒತ್ತುವರಿ ಇದೆ. ಇನ್ನೂ ಕೆಲವು ಕಡೆ ಹೊಸದಾಗಿ ಒತ್ತುವರಿ ಆಗಿದೆ. ಇದನ್ನೆಲ್ಲ ಗುರುತಿಸಿ ವರದಿ ನೀಡಿ. ಕಾನೂನಿನ ತೊಡಕುಗಳಿಲ್ಲದೆ ಇರುವ ಒತ್ತುವರಿ ಜಾಗಗಳನ್ನು ತೆರವುಗೊಳಿಸಲು ನಾಳೆಯಿಂದಲೇ ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದ್ದಾರೆ.

ಮಳೆ ನೀರಿನಿಂದ ತೊಂದರೆಯಾಗುತ್ತಿರುವ ವೇಳೆ ರಾಜಕಾಲುವೆಗಳ ಹೂಳು ತೆಗೆಯಲು ಮುಂದಾದಾಗ ಅರಣ್ಯ ಅಧಿಕಾರಿಗಳು ಅಡ್ಡಿ ಪಡಿಸಿದ ಬಗ್ಗೆ ಬಿಬಿಎಂಪಿ ಮೇಯರ್ ಮತ್ತು ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್‌ರೆಡ್ಡಿ ಮುಖ್ಯಮಂತ್ರಿಯವರಿಗೆ ದೂರು ನೀಡಿದರು. ಅಧಿಕಾರಿಗಳ ವರ್ತನೆಯಿಂದ ಸಿಟ್ಟಾದ ಮುಖ್ಯಮಂತ್ರಿಯವರು, ನೀವು ಇರುವುದು ಜನರಿಗೆ ಸಹಾಯ ಮಾಡಲು, ತೊಂದರೆ ಕೊಡಲು ಅಲ್ಲ. ಜನಪ್ರತಿನಿಧಿಗಳ ಜೊತೆ ಚರ್ಚಿಸಿ ಜನರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡಿ. ಸ್ವಪ್ರತಿಷ್ಠೆಯನ್ನು ಬಿಡಿ. ನಿಮ್ಮ ವೈಯಕ್ತಿಕ ಪ್ರತಿಷ್ಠೆಗಳಿಗೆ ಜನರ ಹಿತ ಬಲಿ ಕೊಡಲು ಸಾಧ್ಯವಿಲ್ಲ ಎಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಇತರ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಗರದಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಪೈಥಾನ್ ಯಂತ್ರವನ್ನು ಬಳಕೆ ಮಾಡಬೇಕು, ನಾಳೆಯಿಂದಲೇ ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭಿಸಬೇಕು. ರಸ್ತೆಯನ್ನು ನಿರ್ವಹಣೆಯನ್ನು ಮೂರು ವರ್ಷಗಳ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ಎಲ್ಲಿ ಹೋಗಿದ್ದಾರೆ. ರಸ್ತೆಯಲ್ಲಿ ಗುಂಡಿ ಬಿದಿದ್ದರೂ ನಿರ್ವಹಣೆ ಮಾಡದೆ ಗುತ್ತಿಗೆದಾರರು ಏಕೆ ಸುಮ್ಮನಿದ್ದಾರೆ ಎಂದು ಮುಖ್ಯಮಂತ್ರಿ ಕಿಡಿಕಾರಿದರು.   ಕೆ.ಜಿ.ರಸ್ತೆಯಲ್ಲಿಮೆಟ್ರೋ ಸುರಂಗದ ಮೇಲ್ಭಾಗದಲ್ಲಿ ಬಿದ್ದಿದ್ದ ಗುಂಡಿಯ ಬಗ್ಗೆ ಮುಖ್ಯಮಂತ್ರಿ ಆತಂಕ ವ್ಯಕ್ತಪಡಿಸಿದ್ದು, ಬಿಎಂಆರ್‌ಸಿಎಲ್ ಎಂಡಿ ಪ್ರದೀಪ್‌ಸಿಂಗ್ ಕರೋಲಾ ಸ್ಪಷ್ಟನೆ ನೀಡಿದ್ದು, ಮೆಟ್ರೋ ಸುರಂಗ 45ಅಡಿ ಆಳದಲ್ಲಿದೆ. 7-8 ಅಡಿ ಹಳ್ಛ್ಳದಲ್ಲಿ ಮಾತ್ರ ಗುಂಡಿ ಬಿದ್ದಿದೆ. ಇದರಿಂದ ಮೆಟ್ರೋಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೂ ಮುನ್ನಚ್ಚರಿಕೆ ವಹಿಸುವಂತೆ ಸೂಚನೆ ನೀಡಿರುವ ಮುಖ್ಯಮಂತ್ರಿಯವರು ವೈಜ್ಞಾನಿಕವಾಗಿ ಗುಂಡಿ ಮುಚ್ಚುವಂತೆ ತಾಕೀತು ಮಾಡಿದ್ದಾರೆ.   ಸಚಿವರಾದ ರಾಮಲಿಂಗಾರೆಡ್ಡಿ, ಶಾಸಕರಾದ ಮಾಜಿ ಸಚಿವ ಕೆ.ಜೆ.ಜಾರ್ಜ್, ಬಿಬಿಎಂಪಿ ಆಯುಕ್ತ ಮಂಜುನಾಥ್‌ಪ್ರಸಾದ್, ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ವಿಜಯಭಾಸ್ಕರ್, ಮೇಯರ್ ಮಂಜುನಾಥರೆಡ್ಡಿ, ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin