ನಾಳೆಯಿಂದ ಶಿರಾಡಿಘಾಟ್ ರಸ್ತೆ ಬಂದ್
ಹಾಸನ, ಜ.19- ರಸ್ತೆ ಆಧುನೀಕರಣ ಹಿನ್ನೆಲೆಯಲ್ಲಿ ನಾಳೆಯಿಂದ ಶಿರಾಡಿಘಾಟ್ ರಸ್ತೆ ಬಂದ್ ಆಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಮಂಗಳೂರಿಗೆ ಪ್ರಯಾಣಿಸುವವರಿಗೆ ಸ್ವಲ್ಪ ಅಡಚಣೆಯಾಗಲಿದೆ. ಶಿರಾಡಿ ಘಾಟ್ ಬಂದ್ನಿಂದಾಗಿ ಚಾರ್ಮುಡಿ ಘಾಟ್ನಲ್ಲಿ ಪ್ರಯಾಣ ಅನಿವಾರ್ಯವಾಗಿರುವುದರಿಂದ ಈ ಭಾಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಲಿದೆ. ಅಲ್ಲದೆ ವಾಹನ ಸವಾರರಿಗೆ ತ್ರಾಸದಾಯಕವಾಗಲಿದ್ದು, ಚಾಲಕರು ಎಚ್ಚರಿಕೆಯಿಂದ ವಾಹನಗಳನ್ನು ಚಲಾಯಿಸಬೇಕಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಶಿರಾಡಿಘಾಟ್ ರಸ್ತೆಯನ್ನು ಆಧುನೀಕರಣಗೊಳಿಸಲಾಗುತ್ತಿದೆ. ವಾಹನ ಸವಾರರು ತಮಗಾಗಿ ಕೆಲ ದಿನಗಳ ಮಟ್ಟಿಗಿನ ಅಡಚಣೆಗೆ ಸಹಕರಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಪ್ರತಿವರ್ಷ ಅಧುನೀಕರಣದ ಹೆಸರಲ್ಲಿ ಶಿರಾಡಿಘಾಟ್ ರಸ್ತೆ ಬಂದ್ ಆಗುತ್ತದೆ. ಎಷ್ಟು ಅಭಿವೃದ್ಧಿ ಮಾಡಿ ಕೋಟ್ಯಂತರ ರೂ. ವೆಚ್ಚ ಮಾಡಿದರೂ ಕೂಡಾ ಸ್ವಲ್ಪ ದಿನಗಳಲ್ಲೇ ಈ ರಸ್ತೆ ಹಾಳಾಗಿಬಿಡುತ್ತದೆ. ಇನ್ನು ಮುಂದಾದರೂ ಪ್ರಾಧಿಕಾರದವರು ಶಾಶ್ವತ ಅತ್ಯುತ್ತಮ ರಸ್ತೆ ಮಾಡಬೇಕೆಂದು ಸ್ಥಳೀಯ ಮುಖಂಡರು ಆಗ್ರಹಿಸಿದ್ದಾರೆ.