ನಾಳೆ ಜಿಲ್ಲೆಯ ಎಲ್ಲಾ ಶಾಲೆ-ಕಾಲೇಜುಗಳು ಬಂದ್

ಈ ಸುದ್ದಿಯನ್ನು ಶೇರ್ ಮಾಡಿ

12

ಗದಗ,ಫೆ.14- ಫೆ. 14ರಂದು ಜಿಲ್ಲೆಯ ಎಲ್ಲಾ ಶಾಲೆ-ಕಾಲೇಜುಗಳನ್ನು ಬಂದ್ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಧೀರಣ್ಣ ಹುಯಿಲಗೋಳ ಹೇಳಿದರು.ವಿದ್ಯಾದಾನ ಸಮಿತಿಯ ಪ್ರೌಢಶಾಲೆಯಲ್ಲಿ ನಡೆದ ಹೋರಾಟ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಹಲವಾರು ವರ್ಷಗಳಿಂದ ಸರಕಾರ ಶಿಕ್ಷಣ ಸಂಸ್ಥೆಗಳ ಮತ್ತು ಶಿಕ್ಷಕರ ಸಮಸ್ಯೆಗಳ ಬಗ್ಗೆ ಅಸಡ್ಡೆಯನ್ನು ತೋರುತ್ತಲೆ ಬಂದಿದೆ. ಅವರ ನ್ಯಾಯುತ ಹೋರಾಟಗಳಿಗೆ ಸರಕಾರ ಸ್ಪಂದಿಸದಿದ್ದಾಗ ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯಬೇಕಾಗಿದೆ. ಮುಖ್ಯಮಂತ್ರಿಗಳಿಗೆ ಈ ಮೊದಲೆ ಹಲವಾರು ಬಾರಿ ಮನವಿ ಸಲ್ಲಿಸಿ ನಮ್ಮನ್ನು ಹೋರಾಟಕ್ಕೆ ಇಳಿಸಬೇಡಿ ಎಂದು ಕೇಳಿದರೂ, ಸರಕಾರ ಅದಕ್ಕೆ ಕಿವಿಗೊಡದಿದ್ದರಿಂದ ಅನಿವಾರ್ಯವಾಗಿ ಪ್ರೌಢಶಾಲೆ ಮತ್ತು ಅದರ ಮೇಲ್ಮಟ್ಟದ ಎಲ್ಲಾ ಶಾಲೆ-ಕಾಲೇಜ್ ಬಂದ್ ಮಾಡಿ ಅಂದು ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು. ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಸ್.ಎಂ. ಕೊಟಗಿ ಮಾತನಾಡಿ ಅಂದು ಎಲ್ಲ ಶಿಕ್ಷಕ ಮತ್ತು ಶಿಕ್ಷಕೇತರರು ಸಾಮೂಹಿಕ ರಜೆ ಹಾಕಿ ಜಿಲ್ಲಾಡಳಿತದ ಭವನದ ಎದುರಿಗೆ 11ರೊಳಗೆ ಸೇರಬೇಕು. ನಂತರ ಎಲ್ಲರೂ ಸೇರಿ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಅರ್ಪಿಸಲಾಗುವುದು ಎಂದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ಥಿತಿ ಈ ಹಿಂದಿಗಿಂತಲೂ ಇಂದು ಬಹಳಷ್ಟು ಶೋಚನೀಯವಾಗಿದೆ. ನಾವು ಹೀಗೆ ಸುಮ್ಮನೆ ಕುಳಿತರೆ 2020ರ ಹೊತ್ತಿಗೆ ರಾಜ್ಯದಲ್ಲಿನ ಎಲ್ಲಾ ಖಾಸಗಿ ಶಾಲೆಗಳು ಬಂದ್ ಆಗುವ ಅಪಾಯ ಕಾಣಿಸುತ್ತಿದೆ. ಅದಕ್ಕಾಗಿ ನಾವೆಲ್ಲರೂ ಈಗಲೆ ಜಾಗೃತರಾಗಬೇಕೆಂದು ಹೇಳಿ, ಅದಕ್ಕಾಗಿಯೆ ಹೋರಾಟ ಅತ್ಯಂತ ಅಗತ್ಯವೂ ಮತ್ತು ಅನಿವಾರ್ಯವೂ ಆಗಿದೆ ಎಂದರು. ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳ ನೌಕರರು ಯಾವುದೇ ಕಾರಣಕ್ಕೂ ಹಿಂಜರಿಯದೆ ಸಾಮೂಹಿಕ ರಜೆ ಹಾಕಿ ಈ ಹೋರಾಟದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.ಜಿಲ್ಲಾ ಪ್ರಾಚಾರ್ಯ ಸಂಘದ ಅಧ್ಯಕ್ಷ ಎಂ.ಸಿ. ಕಟ್ಟಿಮನಿ ಮಾತನಾಡಿ ದಿನದಿಂದ ದಿನಕ್ಕೆ ನಮ್ಮ ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳು ಹೆಚ್ಚಾಗುತ್ತಿವೆ. ನಾಳೆ ಹೋರಾಟವು ಖಾಸಗಿ ಶಿಕ್ಷಣ ಸಂಸ್ಥೆಗಳ ಅಳಿವು-ಉಳಿವಿನ ಹೋರಾಟವಾಗಿದ್ದು ಇದಕ್ಕೆ ಎಲ್ಲಾ ಶೈಕ್ಷಣಿಕ ಸಂಘಟನೆಗಳೂ ಬೆಂಬಲಿಸಬೇಕೆಂದು ವಿನಂತಿಸಿದರು.ಡಾ. ಬಸವರಾಜ ಮಾತನಾಡಿ ಎಲ್ಲರೂ ಒಂದಾಗಿ ಹೋರಾಡದಿದ್ದರೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಉಳಿಗಾಲವಿಲ್ಲ. ಈ ಮಾತನ್ನು ಬಹಳ ಹಿಂದಿನಿಂದಲೂ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿಯವರು ಹೇಳುತ್ತಲೆ ಬಂದಿದ್ದಾರೆ. ಆ ಕುರಿತು ನಾವ್ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈಗಲಾದರೂ ನಾವು ಈ ಬಗ್ಗೆ ವಿಚಾರಿಸೋಣ ಎಂದರು.
ಸಭೆಯಲ್ಲಿ ಗದಗ ಜಿಲ್ಲೆಯಾದ್ಯಂತದಿಂದ ಬಂದ ಅನೇಕ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡು ಸೂಕ್ತ ಸಲಹೆ ಸೂಚನೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin