ನಾಳೆ ದೆಹಲಿಯಲ್ಲಿ ಎಚ್‍ಡಿಕೆ-ರಾಹುಲ್ ಭೇಟಿ, ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Congress-Rahul-JDS-Kumarasw

ಬೆಂಗಳೂರು, ಮೇ 20- ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸರ್ಕಾರದ ಸ್ವರೂಪ ನಾಳೆ ಅಂತಿಮವಾಗುವ ಸಾಧ್ಯತೆಗಳಿವೆ. ಕಾಂಗ್ರೆಸ್ ವರಿಷ್ಠರಾದ ಸೋನಿಯಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರನ್ನು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಳೆ ಭೇಟಿಯಾಗಿ ನೂತನ ಸರ್ಕಾರದ ಸ್ವರೂಪದ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮೈತ್ರಿ ಸರ್ಕಾರದ ರಚನೆ ಕುರಿತಂತೆ ಸಮಾಲೋಚನೆ ನಡೆಸಿ ಅಂತಿಮ ರೂಪ ನೀಡುವ ಸಾಧ್ಯತೆ ಹೆಚ್ಚಾಗಿವೆ. ಜೆಡಿಎಸ್‍ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವುದರಿಂದ ಕಾಂಗ್ರೆಸ್‍ಗೆ ಹೆಚ್ಚು ಸಚಿವ ಸ್ಥಾನಗಳು ದೊರೆಯಲಿವೆ. ಕನಿಷ್ಠ ಪಕ್ಷ ಜೆಡಿಎಸ್‍ಗಿಂತ ಐದು ಸಚಿವ ಸ್ಥಾನಗಳು ದೊರೆಯಲಿವೆ ಎಂದು ತಿಳಿದು ಬಂದಿದೆ.

ಮುವತ್ತಮೂರು ಸಚಿವ ಸ್ಥಾನಗಳ ಪೈಕಿ ಕಾಂಗ್ರೆಸ್ 18ರಿಂದ 20 ಸಚಿವ ಸ್ಥಾನಗಳು ದೊರೆಯುವ ಸಾಧ್ಯತೆಗಳಿವೆ. ಪಕ್ಷೇತರ ಶಾಸಕರಿಗೂ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.ಕಾಂಗ್ರೆಸ್-ಜೆಡಿಎಸ್ ನಾಯಕರನ್ನೊಳಗೊಂಡ ಸಮನ್ವಯ ಸಮಿತಿ ರಚನೆ ಮಾಡಿ ಆ ಮೂಲಕ ಸರ್ಕಾರ ನಡೆಸುವ ಉದ್ದೇಶವನ್ನು ಹೊಂದಲಾಗಿದೆ. ನಾಳೆ ನಡೆಯುವ ಸಭೆಯಲ್ಲಿ ಸರ್ಕಾರದ ಸ್ವರೂಪದ ಜತೆಗೆ ಬುಧವಾರ ಎಷ್ಟು ಮಂದಿ ಪ್ರಮಾಣವಚನ ತೆಗೆದುಕೊಳ್ಳಬೇಕು ಎಂಬುದೂ ಕೂಡ ನಿರ್ಧಾರವಾಗಲಿದೆ.  ಸದ್ಯಕ್ಕೆ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಬುಧವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಗಳಿವೆ.

ನಾಳೆ ಕುಮಾರಸ್ವಾಮಿಯವರು ದೆಹಲಿಗೆ ತೆರಳಲಿದ್ದು, ಬುಧವಾರ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸೋನಿಯಾಗಾಂಧಿ ಹಾಗೂ ರಾಹುಲ್‍ಗಾಂಧಿ ಅವರನ್ನು ಆಹ್ವಾನಿಸಲಿದ್ದಾರೆ. ಆ ಸಂದರ್ಭದಲ್ಲೇ ಸಮ್ಮಿಶ್ರ ಸರ್ಕಾರದ ರಚನೆ, ಅದರ ರೂಪುರೇಷೆಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Facebook Comments

Sri Raghav

Admin