ನಾಳೆ ದೇಶಾದ್ಯಂತ ಬ್ಯಾಂಕ್ ಮುಷ್ಕರ, ಬೇಡಿಕೆಗಳೇನು..?

ಈ ಸುದ್ದಿಯನ್ನು ಶೇರ್ ಮಾಡಿ

Bank-Strike--01

ಬೆಂಗಳೂರು, ಫೆ.27-ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನಾಳೆ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್‍ಬಿಯು) ದೇಶಾದ್ಯಂತ ಒಂದು ದಿನದ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ.  ಸರ್ಕಾರ ಬ್ಯಾಂಕ್‍ಗಳ ಸುಧಾರಣೆ ಹೆಸರಿನಲ್ಲಿ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡುತ್ತಿರುವುದು, 20 ಲಕ್ಷ ಗ್ರಾಜ್ಯುಯಿಟಿ ಕಾಯ್ದೆಯನ್ನು ತಿದ್ದುಪಡಿ ಮಾಡುತ್ತಿರುವುದು, ಬ್ಯಾಂಕ್‍ಗಳ ವಿಲೀನ, ನೋಟು ಅಮಾನೀಕರಣದ ನಂತರ ಬ್ಯಾಂಕ್‍ನಲ್ಲಿ ತುರ್ತಾಗಿ ಆಗಬೇಕಿರುವ ಕೆಲಸಗಳು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಒಂದು ದಿನದ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ವೇದಿಕೆ ಸಂಚಾಲಕ ಎಚ್.ಡಿ.ರೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇತ್ತೀಚೆಗೆ ಕೇಂದ್ರ ಸರ್ಕಾರ ಬ್ಯಾಂಕ್ ಸುಧಾರಣೆ ಹೆಸರಿನಲ್ಲಿ ಕೆಲವು ಬ್ಯಾಂಕ್‍ಗಳನ್ನು ವಿಲೀನಗೊಳಿಸಲು ಮುಂದಾಗಿದೆ. ಇದಲ್ಲದೆ, ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿರುವುದು ಕಾರ್ಮಿಕರಿಗೆ ಮಾರಕವೇ ಹೊರತು ಪೂರಕವಲ್ಲ. ಕಾರ್ಮಿಕವಿರೋಧಿ ಧೋರಣೆಯನ್ನು ಸರ್ಕಾರ ಕೈಬಿಡುವಂತೆ ಅವರು ಒತ್ತಾಯಿಸಿದರು.  1-1-2016ರ ಪೂರ್ವ ಅನ್ವಯವಾಗುವಂತೆ ಕಾರ್ಮಿಕರಿಗೆ ಅನುಕೂಲ ಕಲ್ಪಿಸಬೇಕು. ನೋಟು ಅಮಾನೀಕರಣದ ನಂತರ ಅನುತ್ಪಾದಕ ಆಸ್ತಿ ವಸೂಲಾತಿ ತೀವ್ರಗೊಳಿಸಬೇಕೆಂದು ಮನವಿ ಮಾಡಿದರು.

ನೋಟು ಅಮಾನೀಕರಣವನ್ನು ಬ್ಯಾಂಕ್ ಸಿಬ್ಬಂದಿ ಯಶಸ್ವಿಗೊಳಿಸಲು ಅನೇಕ ರೀತಿ ಪ್ರಯತ್ನ ನಡೆಸಿತ್ತು. ಆದರೆ ಗ್ರಾಹಕರು ಮಾತ್ರ ಸಂತೃಪ್ತಿ ಹೊಂದಿಲ್ಲ. ಇದರಿಂದ ಬ್ಯಾಂಕ್‍ನ ಅನೇಕ ಕೆಲಸಗಳು ಬಾಕಿ ಉಳಿದಿವೆ. ಆದ್ದರಿಂದ ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಒತ್ತಾಯಿಸಿದರು.  ಅಖಿಲ ಭಾರತ ಬ್ಯಾಂಕ್ ಮಹಾಒಕ್ಕೂಟದ ರಾಜ್ಯ ಘಟಕದ ಕಾರ್ಯದರ್ಶಿ ಎಸ್.ಕೆ.ಶ್ರೀನಿವಾಸ್ ಮಾತನಾಡಿ, ಅನೇಕ ಬ್ಯಾಂಕ್‍ಗಳಲ್ಲಿ ಸಿಬ್ಬಂದಿ ನೇಮಕಾತಿ ನಡೆಯದ ಪರಿಣಾಮ ತುರ್ತಾಗಿ ನಡೆಯಬೇಕಾದ ಕೆಲಸಗಳು ಹಾಗೇ ಉಳಿದಿದ್ದು, ಕೇಂದ್ರ ಸರ್ಕಾರ ಸಿಬ್ಬಂದಿನೇಮಕಾತಿ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸುವಂತೆ ಮನವಿ ಮಾಡಿದರು.

ಹಾಲಿ ಇರುವ ಸಿಬ್ಬಂದಿ ತೀವ್ರತರ ಕೆಲಸಕ್ಕೆ ಒಳಗಾಗಿದ್ದಾರೆ. ಪಿಂಚಣಿ ಸೌಲಭ್ಯದ ಪುನರ್ ಪರಿಶೀಲನೆ ಸೇರಿದಂತೆ ಅನೇಕ ಬೇಡಿಕೆಗಳನ್ನು ಕಾಲಮಿತಿಯೊಳಗೆ ಈಡೇರಿಸಬೇಕು. ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರಕ್ಕೆ ಕರೆ ನೀಡಿರುವುದಾಗಿ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin