ನಾಳೆ ನವದೆಹಲಿಯಲ್ಲಿ ಬಿಜೆಪಿ ಸಿಎಂಗಳ ಸಭೆ : ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Modi-and-Amith-Shah-BJP

ನವದೆಹಲಿ,ಏ.22-ರಾಷ್ಟ್ರಪತಿ ಚುನಾವಣೆ, ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನ, ಮುಂಬರುವ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಆಡಳಿತ ಇರುವ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ.   ನಾಳೆ ನವದೆಹಲಿಯಲ್ಲಿ ನೀತಿ ಆಯೋಗದ ಸಭೆ ನಡೆಯಲಿದೆ. ಇದಕ್ಕೆ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಆಗಮಿಸಲಿದ್ದು, ಸಭೆ ಮುಗಿದ ಬಳಿಕ ಪ್ರಧಾನಿಯವರು ಬಿಜೆಪಿ ಮುಖ್ಯಮಂತ್ರಿಗಳಿಗಾಗಿ ಪ್ರತ್ಯೇಕ ಔತಣಕೂಟ ಏರ್ಪಡಿಸಿದ್ದಾರೆ.   ತಮ್ಮ ನಿವಾಸದಲ್ಲಿ ನಡೆಯಲಿರುವ ಈ ಸಭೆಗೆ ಬಿಜೆಪಿ ಆಡಳಿತವಿರುವ ಹಾಗೂ ಮೈತ್ರಿ ಪಕ್ಷಗಳ ಮುಖ್ಯಮಂತ್ರಿಗಳು ಆಗಮಿಸಬೇಕೆಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚಿಸಿದ್ದಾರೆ.ಪ್ರಮುಖವಾಗಿ ಜುಲೈನಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ನಡೆಯಲಿದೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ವಿಚಾರಣೆಗೊಳಪಟ್ಟಿರುವ ಪಕ್ಷದ ಹಿರಿಯ ನಾಯಕ ಲಾಲ್‍ಕೃಷ್ಣ ಅಡ್ವಾಣಿ ಅವರನ್ನು ಅಭ್ಯರ್ಥಿ ಮಾಡಬೇಕೆ ಇಲ್ಲವೇ ಪರ್ಯಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆ ಎಂಬ ಬಗ್ಗೆ ಎಲ್ಲರಿಂದ ಅಭಿಪ್ರಾಯ ಪಡೆಯಲಿದ್ದಾರೆ.   ಇನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ನೀತಿ, ನಿರೂಪಣೆಗಳು, ಹೊಸ ಯೋಜನೆಗಳನ್ನು ಜನರಿಗೆ ತಲುಪಿಸಲು ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕೆಂದು ಪ್ರಧಾನಿ ಸೂಚಿಸಲಿದ್ದಾರೆ.

ವರ್ಷಾಂತ್ಯಕ್ಕೆ ಗುಜರಾತ್ ಹಾಗೂ ಹಿಮಾಚಲಪ್ರದೇಶಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಕಾರ್ಯತಂತ್ರವನ್ನು ರೂಪಿಸಲಿದ್ದಾರೆ. ಪ್ರತಿಪಕ್ಷಗಳು ಮಹಾಘಟ್ಬಂದನ್ ಅಣಿಗೊಳಿಸಲು ಸಜ್ಜಾಗಿರುವ ಬೆನ್ನಲ್ಲೇ ಇದಕ್ಕೆ ಪ್ರತಿತಂತ್ರ ಎಂಬಂತೆ ಮೋದಿ ಮುಖ್ಯಮಂತ್ರಿಗಳ ಸಭೆ ಕರೆದಿರುವುದು ವಿಶೇಷವಾಗಿದೆ.   ಸಭೆಗೆ ಅಸ್ಸಾಂನ ಸರ್ಬಾನಂದ ಸೋನವಾಲ್, ಛತ್ತೀಸ್‍ಘಡದ ರಮಣ್‍ಸಿಂಗ್, ಹರಿಯಾಣದ ಮನೋಹರ್ ಲಾಲ್ ಕಟರ್, ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚವ್ಹಾಣ್, ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್, ಗೋವಾದ ಮನೋಹರ್ ಪರಿಕ್ಕರ್, ಗುಜರಾತ್‍ನ ವಿಜಯ್ ರುಪಾನಿ, ರಾಜಸ್ಥಾನದ ವಸುಂಧರ ರಾಜೇ, ಉತ್ತರಪ್ರದೇಶದ ಯೋಗಿ ಆದಿತ್ಯನಾಥ್, ಉತ್ತರಾಖಂಡ್‍ನ ತ್ರಿವೇಂದ್ರ ಸಿಂಗ್ ರಾವತ್, ಜಾರ್ಖಂಡ್‍ನ ರಘುಬರ್‍ದಾಸ್, ಹಿಮಾಚಲ ಪ್ರದೇಶದ ಪೇಮಖಂಡು ಹಾಗೂ ಮಣಿಪುರದ ಎನ್.ಬೀರೇನ್ ಸಿಂಗ್ ಭಾಗವಹಿಸಲಿದ್ದಾರೆ.  ಇದೇ ರೀತಿ ಜಮ್ಮುಕಾಶ್ಮೀರದ ಉಪಮುಖ್ಯಮಂತ್ರಿ ನಿರ್ಮಲ್‍ಕುಮಾರ್ ಸಿಂಗ್, ಉತ್ತರಪ್ರದೇಶದ ಕೇಶವಪ್ರಸಾದ್ ಮೌರ್ಯ, ದಿನೇಶ್ ಶರ್ಮ ಸೇರಿದಂತೆ ಮತ್ತಿತರ ಪ್ರಮುಖರು ಭಾಗವಹಿಸಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin