ನಾಳೆ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ, ಕೆರಳಿದ ಕುತೂಹಲ

ಈ ಸುದ್ದಿಯನ್ನು ಶೇರ್ ಮಾಡಿ

Election-Result

ನವದೆಹಲಿ,ಮಾ.10-ದೇಶದ ಜನತೆ ಕುತೂಹಲದಿಂದ ಎದುರು ನೋಡುತ್ತಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ನಾಳೆ ಬಹಿರಂಗಗೊಳ್ಳಲಿದ್ದು, ಚುನಾವಣಾ ಉಸ್ತುವಾರಿ ವಹಿಸಿದ್ದ ಮಹಾನ್ ನಾಯಕರು, ಅಭ್ಯರ್ಥಿಗಳನ್ನ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ನಾನಾ ರೀತಿಯ ಫಲಿತಾಂಶವನ್ನು ನೀಡಿವೆ. ಉತ್ತರಪ್ರದೇಶ, ಉತ್ತರಾಖಂಡ್, ಗೋವಾ ಹಾಗೂ ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ಭವಿಷ್ಯ ನುಡಿದಿದ್ದರೆ ಪಂಜಾಬ್‍ನಲ್ಲಿ ಕಾಂಗ್ರೆಸ್ ಇಲ್ಲವೇ ಎಎಪಿ ಅಧಿಕಾರದ ಗದ್ದುಗೆ ಹಿಡಿಯುವ ಸಂಭವವಿದೆ ಎಂಬುದು ಸಮೀಕ್ಷೆಯಿಂದ ತಿಳಿದಿದೆ.

ಸಮೀಕ್ಷೆಗಳು ಏನೇ ಹೇಳಿದರೂ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತಗಳ ಎಣಿಕೆ ಮುಗಿದು ಪ್ರಕಟಗೊಳ್ಳುವವರೆಗೂ ಯಾವುದನ್ನೂ ಅಂತಿಮ ಎನ್ನುವಂತಿಲ್ಲ. ಹೀಗಾಗಿ ಕಣದಲ್ಲಿರುವ ಅಭ್ಯರ್ಥಿಗಳ ನಾಡಿ ಮಿಡಿತ ಹೆಚ್ಚಾಗಿದೆ. ನಾಳೆ ಬೆಳಗ್ಗೆ 8 ಗಂಟೆಯಿಂದ ಮತಗಳ ಎಣಿಕೆ ಪ್ರಾರಂಭವಾಗಲಿದ್ದು , ಮಧ್ಯಾಹ್ನದ ವೇಳೆಗೆ ಸ್ಪಷ್ಟ ಬಹುಮತ ಹೊರಬೀಳುವ ಸಂಭವವಿದೆ.  ಉತ್ತರಪ್ರದೇಶ (403), ಉತ್ತರಖಂಡ್(70), ಪಂಜಾಬ್(117), ಗೋವಾ(40) ಹಾಗೂ ಮಣಿಪುರದ (60) ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಪ್ರಕಟಗೊಳ್ಳಲಿದೆ.   ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗಿರುವ ಈ ಫಲಿತಾಂಶ ಬಿಜೆಪಿ, ಕಾಂಗ್ರೆಸ್ ಹಲವು ಪ್ರಾದೇಶಿಕ ಪಕ್ಷಗಳಿಗೆ ಮಹತ್ವದ್ದಾಗಿದೆ.

ಲೋಕಸಭೆ ಚುನಾವಣೆ ನಂತರ ನಡೆಯುತ್ತಿರುವ ಅತಿದೊಡ್ಡ ಮಹಾಸಮರ ಇದಾಗಿದ್ದು , ಮತದಾರನ ನಾಡಿಮಿಡಿತ ಯಾರ ಕಡೆ ಎಂಬುದಕ್ಕೆ ನಾಳಿನ ಫಲಿತಾಂಶದಲ್ಲಿ ಗೋಚರವಾಗಲಿದೆ.
ನೋಟು ಅಮಾನೀಕರಣ, ಸರ್ಜಿಕಲ್ ಸ್ಟ್ರೈಕ್, ಭಯೋತ್ಪಾದನೆ ನಿಗ್ರಹ,ಜಿಡಿಪಿ ದರ ಹೆಚ್ಚಳ ಪ್ರಧಾನಿ ನರೇಂದ್ರ ಮೋದಿಯವರನ್ನು ಕೈ ಹಿಡಿಯಲಿವೆಯೇ ಎಂಬುದಕ್ಕೂ ಉತ್ತರ ಸಿಗಲಿದೆ.
ಲೋಕಸಭೆ ಚುನಾವಣೆ ನಂತರ ಸಾಲು ಸಾಲು ಸೋಲು ಕಂಡು ದೃತಿಗೆಟ್ಟಿರುವ ಕಾಂಗ್ರೆಸ್‍ಗೆ ಈ ಚುನಾವಣೆ ಟಾನಿಕ್ ಆಗಲಿದೆಯೇ ಇಲ್ಲವೆ ಸೋಲಿನ ಸರಣಿ ಮುಂದುವರೆಯಲಿದೆಯೇ ಎಂಬುದಕ್ಕೂ ಮತದಾರ ತೀರ್ಪು ನೀಡಲಿದ್ದಾನೆ.

ಎಲ್ಲರ ನಿರೀಕ್ಷೆಯನ್ನು ತಲೆಕೆಳಗೆ ಮಾಡಿ ದೆಹಲಿಯಲ್ಲಿ ಅಚ್ಚರಿಯ ಫಲಿತಾಂಶ ಪಡೆದಿದ್ದ ಎಎಪಿಗೆ ಪಂಜಾಬ್ ಹಾಗೂ ಗೋವಾದಲ್ಲಿ ಮತದಾರ ಕೈ ಹಿಡಿಯಲಿದ್ದಾನೆಯೇ, ಬಿಹಾರದಂತೆ ಉತ್ತರ ಪ್ರದೇಶದಲ್ಲೂ ಮಹಾಘಟ್ಬಂಧನ್ ರಚನೆಯಾಗಲಿದೆಯೋ ಇಲ್ಲವೇ ಕಿಚಡಿ ಸರ್ಕಾರ ಬರಲಿದೆಯೋ ಎಂಬುದಕ್ಕೆ ನಾಳೆಯವರೆಗೂ ಕಾಯಬೇಕು.   ರಾಷ್ಟ್ರ ರಾಜಕಾರಣದಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿರುವ ಉತ್ತರ ಪ್ರದೇಶದತ್ತ ಎಲ್ಲರ ಚಿತ್ತ ನೆಟ್ಟಿದೆ. 80 ಲೋಕಸಭಾ ಕ್ಷೇತ್ರ ಒಳಗೊಂಡಿರುವ ಈ ದೊಡ್ಡ ರಾಜ್ಯದಲ್ಲಿ ಯಾರು ಅಧಿಕಾರ ಹಿಡಿಯುತ್ತಾರೋ ಅವರೇ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುತ್ತಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿದೆ.   ಹೀಗಾಗಿ ಉತ್ತರಪ್ರದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ, ಎಸ್‍ಪಿ-ಕಾಂಗ್ರೆಸ್, ಬಿಎಸ್‍ಪಿ ಸೇರಿದಂತೆ ಪ್ರಮುಖ ಪಕ್ಷಗಳು ಅಬ್ಬರದ ಪ್ರಚಾರವನ್ನು ನಡೆಸಿದ್ದರು. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯಂತೂ ಕೊನೆಯ ಎರಡು ಸುತ್ತಿನ ಮತದಾನದ ವೇಳೆ ಇಲ್ಲಿಯೇ ಠಿಕಾಣಿ ಹೂಡಿದ್ದರು. ಅಲ್ಲದೆ ಇಡೀ ಕೇಂದ್ರ ಸಂಪುಟವೇ ಇಲ್ಲಿ ಪ್ರಚಾರದಲ್ಲಿ ತೊಡಗಿತ್ತು.

ಇನ್ನು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೂಡ ಬಿಜೆಪಿಗೆ ಸೆಡ್ಡು ಹೊಡೆದು 224 ರ್ಯಾಲಿಗಳನ್ನು ನಡೆಸಿದ್ದರು. ಗಿರಿಶಿಖರಗಳ ನಾಡು ಉತ್ತರಾಖಂಡ್ , ಗೋಧಿಕಣಜ ಪಂಜಾಬ್, ಪ್ರವಾಸಿಗರ ಸ್ವರ್ಗ ಗೋವಾಗ ಹಾಗೂ ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತದಾರನ ನಿಗೂಢ ತೀರ್ಪು ನಾಳೆ ಹೊರಬೀಳಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin