ನಾಳೆ ಬಿಸಿಲನಾಡು ಕಲಬುರಗಿಯಲ್ಲಿ ಮೋದಿ ಹವಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.5- ಲೋಕಸಭೆ ಚುನಾವಣೆಗೆ ಯಾವುದೇ ಸಂದರ್ಭದಲ್ಲಿ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇರುವುದರಿಂದ ಪ್ರಧಾನಿ ನರೇಂದ್ರ ಮೋದಿ ನಾಳೆ ಎರಡನೆ ಬಾರಿಗೆ ಕರುನಾಡಿನಲ್ಲಿ ರಣಕಹಳೆ ಮೊಳಗಿಸಲಿದ್ದಾರೆ.

ಹೈದರಾಬಾದ್ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಲ್ಲಿ ನಾಳೆ 12 ಗಂಟೆಗೆ ಮೋದಿ ಅವರು ಬೃಹತ್ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಲೋಕಸಭೆ ಚುನಾವಣೆಗೆ ವಿಜಯದ ದುಂದುಭಿ ಮೊಳಗಿಸುವರು.

ಪ್ರಧಾನಿಯವರ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಬಿಜೆಪಿ ಕಳೆದ ಹಲವು ದಿನಗಳಿಂದ ಭರ್ಜರಿ ಸಿದ್ಧತೆ ನಡೆಸಿದೆ. ಪಕ್ಷದ ಹಿರಿಯ ಮುಖಂಡ ಆರ್.ಅಶೋಕ್ ಅವರಿಗೆ ಕಾರ್ಯಕ್ರಮದ ಉಸ್ತುವಾರಿ ವಹಿಸಲಾಗಿದೆ.

ಕಾಂಗ್ರೆಸ್‍ನ ಸೋಲಿಲ್ಲದ ಸರದಾರ ಹಾಗೂ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ವಿರುದ್ದ ಶಕ್ತಿ ಪ್ರದರ್ಶನವೆಂದೇ ರಾಜಕೀಯ ವಲಯದಲ್ಲಿ ಬಿಂಬಿತವಾಗಿರುವ ಈ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವೇ ಎಲ್ಲರ ಕೇಂದ್ರಬಿಂದುವಾಗಿದೆ.

ಇದು ನನ್ನ ಕೊನೆಯ ಚುನಾವಣೆ ಎನ್ನುತ್ತಿರುವ ಖರ್ಗೆ ಅವರಿಗೆ ಸೋಲಿನ ರುಚಿ ತೋರಿಸುವ ಮೂಲಕ ಗೌರವಯುತ ರಾಜಕೀಯ ನಿವೃತ್ತಿ ನೀಡಲು ಬಿಜೆಪಿ ರಣತಂತ್ರ ರೂಪಿಸಿದೆ.

ಇದಕ್ಕಾಗಿಯೇ ಕಾಂಗ್ರೆಸ್ ಶಾಸಕ ಡಾ.ಉಮೇಶ್ ಜಾಧವ್ ಅವರಿಂದ ರಾಜೀನಾಮೆ ಕೊಡಿಸಿ ಖರ್ಗೆ ವಿರುದ್ಧ ಅವರನ್ನು ಅಭ್ಯರ್ಥಿ ಮಾಡಲು ಮುಂದಾಗಿದೆ. ನಾಳೆ ಜಾಧವ್ ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ವಿದ್ಯುಕ್ತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.

ಇನ್ನು ಜಾಧವ್ ಬಿಜೆಪಿಗೆ ಬಂದಿರುವುದರಿಂದ ಕಲಬುರಗಿಯ ರಾಜಕೀಯದಲ್ಲಿ ಹಲವು ರೀತಿಯ ಏರುಪೇರುಗಳಾಗಿದ್ದು, ಈ ಬಾರಿ ಸೋಲಿಲ್ಲದ ಸರದಾರನಿಗೆ ಲೋಕಸಮರದಲ್ಲಿ ಕಠಿಣ ಸವಾಲು ಎದುರಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಖರ್ಗೆ ಅವರನ್ನು ಈ ಬಾರಿ ಕಟ್ಟಿಹಾಕಲೇಬೇಕೆಂದು ತೀರ್ಮಾನಿಸಿರುವ ಬಿಜೆಪಿ ಅವರ ರಾಜಕೀಯ ಎದುರಾಳಿಗಳಾಗಿರುವ ಮಾಲಿಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ್ ಸೇರಿದಂತೆ ಮತ್ತಿತರರನ್ನು ಈಗಾಗಲೇ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ಸಹ ಆರಂಭಿಸಿದೆ.

ಜಾಧವ್ ರಾಜೀನಾಮೆ ನಂತರ ಬಿಜೆಪಿ ಬಿಡಬಹುದೆಂದು ಹೇಳಲಾಗಿದ್ದ ಮಾಜಿ ಶಾಸಕ ಸುನಿಲ್ ವಲ್ಯಾಪುರ ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಹೇಳುವ ಮೂಲಕ ಬಿಜೆಪಿಯಲ್ಲೇ ಉಳಿಯುವ ಸುಳಿವು ನೀಡಿದ್ದಾರೆ.

ನಾಳಿನ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸುವ ಸಂಭವವಿದೆ. ಇಡೀ ಕಲಬುರಗಿ ಜಿಲ್ಲೆಯೇ ಕಮಲಮಯವಾಗಿದೆ. ನಾಳೆ ಬೆಳಗ್ಗೆ ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಬೀದರ್ ವಾಯುನೆಲೆಗೆ ಆಗಮಿಸುವ ಪ್ರಧಾನಿ ನಂತರ ಕಲಬುರಗಿಗೆ ಹೆಲಿಕಾಪ್ಟರ್‍ನಲ್ಲಿ ಬರುವರು.

ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಪ್ರಧಾನಿಯವರು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಕೊಡಲಿದ್ದಾರೆ. ನಾಳೆ ನಡೆಯಲಿರುವ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ, ಮುಖಂಡರಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin