ನಾಳೆ ಮೈಸೂರಿಗೆ ಮೋದಿ ಆಗಮನ, ಇನ್ನು ನಿಗದಿಯಾಗದ ವಾಸ್ತವ್ಯದ ಸ್ಥಳ

ಈ ಸುದ್ದಿಯನ್ನು ಶೇರ್ ಮಾಡಿ

Modi--01

ಬೆಂಗಳೂರು, ಫೆ.17-ಎರಡು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಸಾಂಸ್ಕøತಿಕ ನಗರಿ ಮೈಸೂರಿಗೆ ಆಗಮಿಸಲಿದ್ದಾರೆ. ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಪ್ರಾರಂಭವಾಗಿವೆ. ನಾಳೆ ಸಂಜೆ ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸುವ ಅವರು 11 ಗಂಟೆಗೆ ಮೈಸೂರು ಹೊರವಲಯದಲ್ಲಿರುವ ಮಂಡಕನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುವರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಅವರನ್ನು ಬರಮಾಡಿಕೊಳ್ಳಲಿದ್ದಾರೆ. ಸರ್ಕಾರಿ ಕಾರ್ಯಕ್ರಮವಾದ ಈವರೆಗೂ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿಲ್ಲ. ಕೇಂದ್ರ ಸರ್ಕಾರದ ಕಾರ್ಯಕ್ರಮ ಇದಾಗಿರುವುದರಿಂದ ಸಿಎಂಗೆ ಆಹ್ವಾನ ನೀಡಿಲ್ಲ ಎಂಬುದು ರೈಲ್ವೆ ಇಲಾಖೆಯ ಅಧಿಕಾರಿಗಳ ಸ್ಪಷ್ಟನೆ. ಶಿಷ್ಟಾಚಾರದ ಪ್ರಕಾರ ಪ್ರಧಾನಿ ಯಾವುದೇ ಸರ್ಕಾರಿ ಕಾರ್ಯಕ್ರಮದ ಉದ್ಘಾಟನೆಗೆ ಬಂದಾಗ ಆಯಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸುವುದು ಸಂಪ್ರದಾಯವಾಗಿದೆ.
ನಾಳೆ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿರುವ ಮೋದಿ ಎಲ್ಲಿ ಉಳಿಯಲಿದ್ದಾರೆ ಎಂಬುದು ಈವರೆಗೂ ದೃಢಪಟ್ಟಿಲ್ಲ.

ಸೋಮವಾರ ಬೆಳಗ್ಗೆ 10.30ಕ್ಕೆ ಆಡಳಿತ ತರಬೇತಿ ಸಂಸ್ಥೆಯಲ್ಲಿ ವಿಡಿಯೋ ಸಂವಾದ ನಡೆಸಿ, ಮಧ್ಯಾಹ್ನ 12.30ಕ್ಕೆ ವಿಶೇಷ ಹೆಲಿಕಾಪ್ಟರ್ ಮೂಲಕ ಮೈಸೂರಿನಿಂದ ಶ್ರವಣಬೆಳಗೊಳಕ್ಕೆ ತೆರಳಿ ಮಹಾಮಸ್ತಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಶ್ರವಣಬೆಳಗೊಳದಿಂದ ಮೈಸೂರಿಗೆ ಆಗಮಿಸಿ ಮಧ್ಯಾಹ್ನ 3.30ಕ್ಕೆ ನಗರದ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರು-ಮೈಸೂರು ಜೋಡಿಹಳಿಯ ಮಾರ್ಗ ಹಾಗೂ ಮೈಸೂರು-ಉದಯಪುರ ನಡುವೆ ಸಂಚರಿಸುವ ಹಮ್ ಸಫರ್ ರೈಲಿಗೆ ಹಸಿರು ನಿಶಾನೆ ಸೇರಿದಂತೆ ವಿವಿಧ ಯೋಜನೆಗಳಿಗೆ ಚಾಲನೆ ನೀಡುವರು.

ನಂತರ 4 ಗಂಟೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡುವರು. ಕಾರ್ಯಕ್ರಮದಲ್ಲಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್, ಸಹ ಉಸ್ತುವಾರಿ ಪಿಯೂಶ್ ಗೋಯಲ್, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಅನಂತಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ, ರಾಜ್ಯ ಪ್ರಮುಖರಾದ ಜಗದೀಶ್ ಶೆಟ್ಟರ್, ಆರ್.ಅಶೋಕ್, ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಪ್ರಹ್ಲಾದ್ ಜೋಷಿ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳುವರು.

ಎಲ್ಲಿ ವಾಸ್ತವ್ಯ:
ನಾಳೆ ಪ್ರಧಾನಿ ಮೋದಿ ಮೈಸೂರಿಗೆ ಆಗಮಿಸುತ್ತಿದ್ದರೂ ಈವರೆಗೂ ಎಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂಬುದು ಖಚಿತವಾಗಿಲ್ಲ. ಈ ಮೊದಲು ನಗರದ ಲಲಿತ್ ಮಹಲ್ ಹೋಟೆಲ್‍ನಲ್ಲಿ ವಾಸ್ತವ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ನಾಳೆ ಇಲ್ಲಿ ಖಾಸಗಿ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಹೋಟೆಲ್ ಲಭ್ಯವಾಗಿಲ್ಲ. ಒಂದು ತಿಂಗಳ ಹಿಂದೆಯೇ ಹೋಟೆಲ್ ಬುಕಿಂಗ್ ಮಾಡಿದ್ದರಿಂದ ಪ್ರಧಾನಿ ವಾಸ್ತವ್ಯಕ್ಕೆ ಅಡ್ಡಿಯಾಗಿದೆ. ಇನ್ನು ಮೋದಿ ಅವರ ನೆಚ್ಚಿನ ರ್ಯಾಡಿಸನ್ ಬ್ಲೂ , ಸದರನ್ ಸ್ಟಾರ್ ಹೋಟೆಲ್‍ಗಳಲ್ಲಿ ವಾಸ್ತವ್ಯಕ್ಕೆ ಪರಿಶೀಲನೆ ನಡೆಸಲಾಗಿದೆ.   ಮತ್ತೊಂದೆಡೆ ನಗರದ ಹೆಬ್ಬಾಳದಲ್ಲಿರುವ ಇನ್ಫೋಸಿಸ್ ಕ್ಯಾಂಪಸ್‍ನ ಅತಿಥಿ ಗೃಹವನ್ನು ಸಹ ಪರಿಶೀಲನೆ ಮಾಡಲಾಗಿದೆ. ಶಿಷ್ಟಾಚಾರದ ಪ್ರಕಾರ ಪ್ರಧಾನಿ ಯಾವುದೇ ಸ್ಥಳದಲ್ಲಿ ವಾಸ್ತವ್ಯ ಹೂಡಿದರೂ 48 ಗಂಟೆ ಮುಂಚಿತವಾಗಿ ಅದನ್ನು ಎಸ್‍ಪಿಜಿ ಭದ್ರತೆಗೆ ನೀಡಬೇಕು.

ಬಿಗಿ ಭದ್ರತೆ:
ನರೇಂದ್ರ ಮೋದಿ ಅವರಿಗೆ ಭಯೋತ್ಪಾದಕರು ಸೇರಿದಂತೆ ಕೆಲವು ಸಮಾಜಘಾತುಕ ಶಕ್ತಿಗಳಿಂದ ಬೆದರಿಕೆ ಇರುವುದರಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಪ್ರಧಾನಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದೆಡೆ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಬಿಜೆಪಿ ಕಾರ್ಯಕ್ರಮ ನಡೆಯುವ ಮಹಾರಾಜ ಕಾಲೇಜು, ರೈಲ್ವೆ ನಿಲ್ದಾಣ, ಪ್ರಧಾನಿ ವಾಸ್ತವ್ಯದ ಸ್ಥಳ, ಸಂಚರಿಸಲಿರುವ ಮಾರ್ಗಗಳು ಸೇರಿದಂತೆ ಅಕ್ಕಪಕ್ಕದ ಕಟ್ಟಡಗಳನ್ನು ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಪ್ರಧಾನಮಂತ್ರಿಗಳ ಎಸ್‍ಪಿಜಿ ಐಜಿಪಿ ಎನ್.ಎಸ್.ಗುಪ್ತ ಅವರ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ತಂಡ ಭದ್ರತಾ ಕ್ರಮಗಳನ್ನು ಕೈಗೊಂಡಿದೆ.

Facebook Comments

Sri Raghav

Admin