ನಾಳೆ ರಾತ್ರಿ 8 ಗಂಟೆಗೆ ಮೋದಿ ಮಹತ್ವದ ಭಾಷಣ : ಮತ್ತೇನು ಶಾಕ್ ನೀಡುವರೋ ಪ್ರಧಾನಿ..?

ಈ ಸುದ್ದಿಯನ್ನು ಶೇರ್ ಮಾಡಿ

modi

ನವದೆಹಲಿ, ಡಿ.29– ಐನೂರು ಹಾಗೂ ಒಂದು ಸಾವಿರ ರೂ. ಮುಖಬೆಲೆಯ ನೋಟಿನ ಚಲಾವಣೆಗೆ ನಿಷೇಧ ಹೇರಿದ ನಂತರ ಸಾರ್ವಜನಿಕರಿಗೆ ಉಂಟಾಗಿರುವ ತೊಂದರೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ನಾಳೆ ಕೆಲವು ಮಹತ್ವದ ಘೋಷಣೆಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ನಾಳೆ ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ವೇಳೆ ಅವರು ಬ್ಯಾಂಕು ವಹಿವಾಟು ಹಾಗೂ ಎಟಿಎಂನಿಂದ ಹಣ ಪಡೆಯುವ ನಿರ್ಬಂಧಕ್ಕೆ ವಿನಾಯ್ತಿ ನೀಡುವ ಸಂಭವವಿದೆ. ಸದ್ಯಕ್ಕೆ ಗ್ರಾಹಕರು ತಮ್ಮ ಖಾತೆಯಲ್ಲಿ ವಾರಕ್ಕೆ ಒಂದು ಬಾರಿ 24ಸಾವಿರ ಹಣ ಪಡೆದುಕೊಳ್ಳಬಹುದು. ಇದೇ ರೀತಿ ಎಟಿಎಂನಲ್ಲಿ ಎರಡೂವರೆ ಸಾವಿರ ಹಣ ಪಡೆಯಲು ಅವಕಾಶವಿದೆ. ನಾಳಿನ ಭಾಷಣದಲ್ಲಿ ಪ್ರಧಾನಿ ಈ ನಿರ್ಬಂಧವನ್ನು ತೆಗೆದುಹಾಕಿ ವಹಿವಾಟು ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬ್ಯಾಂಕ್‍ನಲ್ಲಿ ಪಡೆಯಬಹುದಾದ 24 ಸಾವಿರ ಹಣವನ್ನು 40ರಿಂದ 50 ಸಾವಿರ ಹಾಗೂ ಎಟಿಎಂನಲ್ಲಿ ತೆಗೆದುಕೊಳ್ಳಬಹುದಾದ ನಗದು ಪ್ರಮಾಣವನ್ನು ಏರಿಕೆಯಾಗುವ ಸಂಭವವಿದೆ.
ನಿನ್ನೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ತಮ್ಮ ಸಹೋದ್ಯೋಗಿಗಳ ಜತೆಗೆ ಮಾತುಕತೆ ನಡೆಸಿದ್ದಾರೆ. ರೈತಾಪಿ ವರ್ಗ, ಸಾಮಾನ್ಯ ಜನರು, ಮಧ್ಯಮ ವರ್ಗ, ಉದ್ಯಮಿಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳ ಜನರು ನೋಟು ಅಮಾನೀಕರಣದ ನಂತರ ತೊಂದರೆ ಸಿಲುಕಿರುವುದನ್ನು ಸಚಿವರು ಪ್ರಧಾನಿ ಗಮನಕ್ಕೆ ತಂದಿದ್ದಾರೆ.  ಸಚಿವರ ಸಲಹೆಗಳನ್ನು ಸಹನೆಯಿಂದ ಆಲಿಸಿರುವ ಪ್ರಧಾನಿ ಶುಕ್ರವಾರ ಸಂಜೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವ ವೇಳೆ ಈಗಿರುವ ನಿರ್ಬಂಧಗಳನ್ನು ಸಡಿಲಿಸುವ ಸುಳಿವು ನೀಡಿದ್ದಾರೆ ಎಂದು ಹೆಸರು ಬಹಿರಂಗಪಡಿಸದ ಪ್ರಮುಖರೊಬ್ಬರು ತಿಳಿಸಿದ್ದಾರೆ.

ನೋಟು ಅಮಾನೀಕರಣದ ನಂತರ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ನಕಾರಾತ್ಮಕ ಹೋರಾಟ ಪ್ರಾರಂಭಿಸಿವೆ. ಕಾಂಗ್ರೆಸ್, ಎಟಿಎಂಸಿ, ಎಎಪಿ ಹೊರತುಪಡಿಸಿದರೆ ಬಹುತೇಕ ಪಕ್ಷಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ. ದೇಶದ ಹಿತದೃಷ್ಟಿ ಹಾಗೂ ಆರ್ಥಿಕ ಸುಧಾರಣೆಗೆ ನಾನು ತೆಗೆದುಕೊಂಡಿರುವ ಕ್ರಮವನ್ನು ಜನರಿಗೆ ಮನವರಿಕೆ ಮಾಡಿಕೊಡುವಂತೆ ಪ್ರಧಾನಿ ತಮ್ಮ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ. ನನಗೆ 50ದಿನ ಅವಕಾಶ ನೀಡಿ ಬಳಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿದೆ ಎಂದು ದೇಶದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದರು. ಅವರ ಮನವಿಗೆ ನಾಳೆ ಕೊನೆಯಾಗಲಿದ್ದು, ತಮ್ಮ ಭಾಷಣದಲ್ಲಿ ಏನು ಘೋಷಣೆ ಮಾಡಲಿದ್ದಾರೆ ಎಂಬುದನ್ನು ದೇಶದ ಜನತೆ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin