ನಾಳ ಕಮಲ ಮುಡಿಯಲಿದ್ದಾರೆ ಯತ್ನಾಳ್, ಗುತ್ತೇದಾರ್, ಖೂಬಾ, ಅನ್ವರಿ

ಈ ಸುದ್ದಿಯನ್ನು ಶೇರ್ ಮಾಡಿ

Join-BJP-Mallikarjun-Khuba

ಬೆಂಗಳೂರು, ಏ.3- ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಾಳೆ ವಿವಿಧ ಪಕ್ಷಗಳ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಕೇಂದ್ರದ ಮಾಜಿ ಸಚಿವ ಹಾಲಿ ವಿಧಾನಪರಿಷತ್ ಸದಸ್ಯ ಬಸವನಗೌಡ ಪಾಟೀಲ್ ಯತ್ನಾಳ್ ಮೂರು ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ತೊರೆದಿದ್ದು, ಶಾಸಕ ಮಾಲೀಕಯ್ಯ ಗುತ್ತೇದಾರ್ ಇಂದು ಕಾಂಗ್ರೆಸ್ ಗೆ ಗುಡ್‍ಬೈ ಹೇಳಿದ್ದು, ಮಲ್ಲಿಕಾರ್ಜುನ ಖೂಬಾ ಹಾಗೂ ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಅನ್ವರಿ ಬಿಜೆಪಿಗೆ ಸೇರ್ಪಡೆಯಾಗುವರು. ನಾಳೆ ಬೆಳಗ್ಗೆ 11 ಗಂಟೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರಳೀಧರರಾವ್ ಸೇರಿದಂತೆ ಮತ್ತಿತರರು ಈ ಎಲ್ಲರನ್ನೂ ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ.  ಇದರ ಜತೆಗೆ ಮಾಜಿ ಸಚಿವ, ಕೊಪ್ಪಳ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಮುಖಂಡ ನಾಗಪ್ಪ ಸಾಲೋಣಿ ಕೂಡ ಬಿಜೆಪಿಗೆ ಸೇರ್ಪಡೆಯಾಗುವ ಸಂಭವವಿದೆ. ಈಗಾಗಲೇ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಕೊಪ್ಪಳ ಸಂಸದ ಕರಡಿಸಂಗಣ್ಣ ಜತೆ ಮಾತುಕತೆ ನಡೆಸಿದ್ದು, ಅವರ ಸೇರ್ಪಡೆಗೆ ಸ್ಥಳೀಯ ನಾಯಕರು ಕೂಡ ಸಮ್ಮತಿಸಿದ್ದಾರೆ.

ಬಸವನಗೌಡ ಪಾಟೀಲ್ ಯತ್ನಾಳ್:
ಈ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಬೇಕಿದ್ದ ಕೇಂದ್ರದ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಪಕ್ಷ ಸೇರ್ಪಡೆ ಪದೇ ಪದೇ ಮುಂದೂಡಲ್ಪಟ್ಟಿತ್ತು. ಪಕ್ಷದೊಳಗಿನ ಕೆಲವು ಪ್ರಮುಖರು ಹಾಗೂ ವಿಜಯಪುರ ಜಿಲ್ಲಾ ಘಟಕ ಅವರ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ನೆನೆಗುದಿಗೆ ಬಿದ್ದಿತ್ತು. ಪ್ರತ್ಯೇಕ ಲಿಂಗಾಯಿತ ಧರ್ಮದಿಂದ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬಹುದೆಂಬ ಕಾರಣಕ್ಕಾಗಿ ಯತ್ನಾಳ್ ಸೇರ್ಪಡೆಗೆ ಕೇಂದ್ರ ವರಿಷ್ಠರು ಹಸಿರು ನಿಶಾನೆ ತೋರಿದ್ದರು.  ಈ ಹಿಂದೆ ಅಟಲ್‍ಬಿಹಾರಿ ವಾಜಪೇಯಿ ಸಂಪುಟದಲ್ಲಿ ಕೇಂದ್ರದ ಸಹಾಯಕ ರೈಲ್ವೆ ಸಚಿವರಾಗಿ ಕೆಲಸ ಮಾಡಿದ್ದ ಯತ್ನಾಳ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಮೇಲೆ ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು. ಇದೀಗ ಪುನಃ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ.

ಮಾಲೀಕಯ್ಯ ಗುತ್ತೇದಾರ್:
ಕಲಬುರ್ಗಿ ಜಿಲ್ಲೆಯ ಹಿಂದುಳಿದ ಪ್ರಭಾವಿ ನಾಯಕ ಮಾಲೀಕಯ್ಯ ಗುತ್ತೇದಾರ್ ನಾಳೆ ವಿಧ್ಯುಕ್ತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಉಂಟಾದ ವೈಮನಸ್ಸಿನ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್‍ಗೆ ರಾಜೀನಾಮೆ ಸಲ್ಲಿಸಿದರು. ಅಫ್ಜಲ್‍ಪುರ ಕ್ಷೇತ್ರದಿಂದ ಸತತ 6 ಬಾರಿ ಗೆದ್ದಿರುವ ಮಾಲೀಕಯ್ಯ ಗುತ್ತೇದಾರ್, ಬಿಜೆಪಿಗೆ ಬಂದಿರುವುದು ಆ ಭಾಗದಲ್ಲಿ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ಹೇಳಲಾಗಿದೆ. ಹಲವರ ವಿರೋಧದ ನಡುವೆಯೂ ನಾಳೆ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಗುತ್ತೇದಾರ್ ಅವರಿಗೆ ಅಫ್ಜಲ್‍ಪುರದಿಂದ ಟಿಕೆಟ್ ನೀಡಲು ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ.

ಮಲ್ಲಿಕಾರ್ಜುನ ಖೂಬಾ:
ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದಿದ್ದ ಮಲ್ಲಿಕಾರ್ಜುನ ಖೂಬಾ ಅಧಿಕೃತವಾಗಿ ನಾಳೆ ಬಿಜೆಪಿ ಪಾಲಾಗಲಿದ್ದಾರೆ.  ಇಂದು ತಮ್ಮ ಶಾಸಕ ಸ್ಥಾನಕ್ಕೆ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವರನ್ನು ರಾಣೆಬೆನ್ನೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿ ರಾಜೀನಾಮೆಯನ್ನು ನೀಡಿದರು. ಈಗಾಗಲೇ ಅವರ ರಾಜೀನಾಮೆ ಅಂಗೀಕಾರವಾಗಿರುವುದರಿಂದ ಬಿಜೆಪಿ ಸೇರ್ಪಡೆಗೆ ವೇದಿಕೆ ಸಿದ್ಧವಾಗಿದೆ.

ಬಸವರಾಜ ಪಾಟೀಲ್ ಅನ್ಸಾರಿ:
ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ಪ್ರಭಾವಿ ಲಿಂಗಾಯಿತ ಮುಖಂಡರಾಗಿರುವ ಬಸವರಾಜಪಾಟೀಲ್ ಅನ್ಸಾರಿ ಕೇಂದ್ರದ ಸಚಿವಾಗಿದ್ದರು. ಕಾಂಗ್ರೆಸ್ ತೊಡೆದು ಬಳಿಕ ಬಿ.ಎಸ್.ಯಡಿಯೂರಪ್ಪನವರ ಕೆಜೆಪಿಯಲ್ಲಿ ಗುರುತಿಸಿಕೊಂಡು ನಂತರ ತೆರೆ ಮರೆಗೆ ಸರಿದಿದ್ದರು. ಇದೀಗ ನಾಳೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.

Facebook Comments

Sri Raghav

Admin