ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆಯೇ ಎಂಬ ಅನುಮಾನ ಕಾಡುತ್ತಿದೆ : ಹೆಚ್.ಡಿ.ದೇವೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

devegowda

ತುಮಕೂರು, ಸೆ.26- ಎರಡು ರಾಜ್ಯಗಳ ನಡುವೆ ನೀರಾವರಿ ಸಮಸ್ಯೆ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಾಗಲೂ ಕೇಂದ್ರ ಮಧ್ಯ ಪ್ರವೇಶಿಸದಿರುವುದನ್ನು ನೋಡಿದರೆ ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆಯೇ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಗವಿರಂಗ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತೋತ್ಸವ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕಾವೇರಿ ವಿವಾದದಿಂದ ಪದೇ ಪದೇ ಎರಡು ರಾಜ್ಯಗಳ ನಡುವೆ ಬಿಕ್ಕಟ್ಟು ಏರ್ಪಟ್ಟಿದೆ. ಈ ಹಿಂದೆ ಇದೇ ರೀತಿ ಸಮಸ್ಯೆಗಳು ಉಂಟಾದಾಗ ಅಂದಿನ ಪ್ರಧಾನಿಗಳು ಮಧ್ಯಪ್ರವೇಶಿಸಿ ಪರಿಹಾರ ಸೂಚಿಸಿರುವ ಉದಾಹರಣೆಗಳು ನಮ್ಮ ಕಣ್ಮುಂದೆಯೇ ಇದೆ.ನಾನು ಕೂಡ ಪ್ರಧಾನಿಯಾದಾಗ ಬಗೆಹರಿಸಿದ್ದೇನೆ.ಆದರೆ ಇಂದಿನ ಪ್ರಧಾನಿ ಮಧ್ಯಪ್ರವೇಶಕ್ಕೆ ನಿರಾಕರಿಸುತಿದ್ದಾರೆ. ಇದರ ಅರ್ಥವೇನು ಎಂದು ರಾಜ್ಯದ ಜನತೆ ತಿಳಿಯಬೇಕಾಗಿದೆ ಎಂದರು.

ಕಾವೇರಿ ನ್ಯಾಯಮಂಡಳಿ ನೀಡಿರುವ ಅಂತಿಮ ತೀರ್ಪಿನಲ್ಲಿ ರಾಜ್ಯಕ್ಕೆ ತುಂಬಾ ಅನ್ಯಾಯವಾಗಿದೆ ಎಂದು ವಿಷಾದಿಸಿದರು. ನ್ಯಾಯಾಂಗ ಹೋರಾಟದ ಮೂಲಕವೇ ನಮ್ಮ ಪಾಲಿನ ನೀರನ್ನು ಪಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಒಮ್ಮತದ ಹೋರಾಟಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಕರ್ನಾಟಕ ವಿಧಾನಮಂಡಲದಲ್ಲಿ ಕಾವೇರಿ ವಿವಾದದಲ್ಲಿ ತೆಗೆದುಕೊಂಡ ತೀರ್ಪನ್ನು ಕುರಿತು ಸುಪ್ರೀಂಕೋರ್ಟ್‍ನ ವಿಶ್ರಾಂತ ನ್ಯಾಯಮೂರ್ತಿಯೊಬ್ಬರು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಹೇಳಿದ್ದಾರೆ. ನಾವು ಜನರಿಗೆ ಕುಡಿಯುವ ನೀರು ಕೊಟ್ಟಿದ್ದೇವೆ ಹೊರತು ಬೇರೆ ಯಾವುದೇ ಕೆಟ್ಟ ಕೆಲಸ ಮಾಡಿಲ್ಲ. ತಮಿಳುನಾಡಿನವರು 3ನೇ ಬೆಳೆಗೆ ನೀರು ಕೇಳುತಿದ್ದಾರೆ. ನಮಗೆ ಕುಡಿಯಲು ನೀರಿಲ್ಲ. ಅರೆ ಖುಷ್ಕಿಗೂ ನೀರಿಲ್ಲ. ಇಂತಹ ಸ್ಥಿತಿಯಲ್ಲಿ ಬಂದಿರುವ ಎರಡು ತೀರ್ಪುಗಳ ಹಿಂದಿನ ಮಾನದಂಡ ಏನು ಎಂಬುದು ಅರ್ಥವಾಗುತ್ತಿಲ್ಲ ಎಂದು ಹೆಚ್.ಡಿ.ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ರೀತಿ ಸ್ಥಿತಿ ಮುಂದುವರೆದರೆ ಕರ್ನಾಟಕ ಮರುಭೂಮಿಯಾಗಲಿದೆ ಎಂದು ಎಚ್ಚರಿಸಿದ ಗೌಡರು,ಅಕ್ಟೋಬರ್ 18ರ ಸುಪ್ರಿಂಕೋರ್ಟಿನ ವಿಚಾರಣೆಗೆ ಬಗ್ಗೆ ರಾಜ್ಯ ಸರಕಾರ ಹೆಚ್ಚಿನ ನಿಗಾವಹಿಸಬೇಕು ಎಂದು ತಾಕೀತು ಮಾಡಿದರು.

ಅಸಮಾಧಾನ:

ಕಾನೂನು ಬಿಕ್ಕಟ್ಟು ಉಂಟಾದಾಗ ಅತ್ಯಂತ ಎಚ್ಚರಿಕೆ ಹೆಜ್ಜೆಯನ್ನು ಇಡಬೇಕಾದವರು ಕಾನೂನು ಮಂತ್ರಿಗಳು, ಕಾವೇರಿ ವಿವಾದದಲ್ಲಿ ಕಾನೂನು ಮಂತ್ರಿಗಳು, ನೀರಾವರಿ ಮಂತ್ರಿಗಳು ಒಗ್ಗೂಡಿ ಕೆಲಸ ಮಾಡಬೇಕು ಎಂದರು. ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಕಾವೇರಿ ವಿವಾದದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದೆ. ಇದರ ನಿವಾರಣೆ ನಿಟ್ಟಿನಲ್ಲಿ ದೇವೇಗೌಡರ ಸಲಹೆ ಬಹಳ ಉಪಯುಕ್ತವಾಗಿದೆ.ಕಾವೇರಿಯಿಂದ ಮಂಡ್ಯಕ್ಕೆ ಎಷ್ಟು ತೊಂದರೆ ಯಾಗಿದೆಯೋ ಅಷ್ಟೇ ತೊಂದರೆ ತುಮಕೂರು ಜಿಲ್ಲೆಗೂ ಆಗಿದೆ.ಆದ್ದರಿಂದ ನಮಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಲಿದೆ.ನ್ಯಾಯಾಂಗದ ಮೇಲೆ ಜನರಲ್ಲಿ ಇನ್ನೂ ನಂಬಿಕೆಯಿದೆ.ಆದರೆ ಅದನ್ನು ಕಳೆದುಕೊಳ್ಳುವ ನಿಟ್ಟಿನಲ್ಲಿ ತೀರ್ಪುಗಳು ಬರುತ್ತಿರುವುದು ದುರದೃಷ್ಟಕರ ಎಂದರು.
ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನಮಠದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿಯ ಶ್ರೀ ನಂಜಾವಧೂತ ಸ್ವಾಮೀಜಿ ವಹಿಸಿದ್ದರು. ಕಾನೂನು ಸಚಿವ ಟಿ.ಬಿ.ಜಯಚಂದ್ರ, ಶಾಸಕ ಎಸ್.ಆರ್.ಶ್ರೀನಿವಾಸ್, ಪರಿಷತ್ ಸದಸ್ಯ ಬೆಮಲ್ ಕಾಂತರಾಜು, ಡಿ.ಸಿ.ಗೌರಿಶಂಕರ್, ನರಸೇಗೌಡ, ಕೆ.ಬಿ.ಬೋರೇಗೌಡ, ದೇವಿಕ,ಆಡಿಟರ್ ನಾಗರಾಜು,ಜಿಲ್ಲಾ ಒಕ್ಕಲಿಗರ ನೌಕರರ ಸಂಘದ ಅಧ್ಯಕ್ಷ ರಂಗಪ್ಪ, ಉಪಾಧ್ಯಕ್ಷ ವಿಶ್ವೇಶ್ವರಯ್ಯ, ಬೋರೇಗೌಡ, ಕಾರ್ಯದರ್ಶಿ ಬೆಳ್ಳಿಲೋಕೇಶ್, ಸಹಕಾರ್ಯದರ್ಶಿ ಜಿ.ಶಿವಣ್ಣ, ಖಜಾಂಚಿ ಟಿ.ಪುಟ್ಟಸ್ವಾಮಿ, ನಿರ್ದೇಶಕರಾದ ಹನುಮಂತೇಗೌಡ, ಪುಟ್ಟಸಾಮಯ್ಯ, ಡಿ.ಎಚ್.ಲಕ್ಷ್ಮಯ್ಯ ಕೃಷ್ಣಮೂರ್ತಿ, ಶಿವಣ್ಣ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin