ನಿಗದಿಯಂತೆ ಫೆ.1ರಂದು ಕೇಂದ್ರ ಬಜೆಟ್ : ಅರುಣ್ ಜೇಟ್ಲಿಗೆ ಅಗ್ನಿ ಪರೀಕ್ಷೆ …!

ಈ ಸುದ್ದಿಯನ್ನು ಶೇರ್ ಮಾಡಿ

Arun-j

ನವದೆಹಲಿ, ಜ.23- ಕೇಂದ್ರ ಸರ್ಕಾರ ಫೆ.1ರಂದು ಮಂಡಿಸಲು ಉದ್ದೇಶಿಸಿದ್ದ ಬಜೆಟನ್ನು ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಬೇಕೆಂದು ವಕೀಲ ಮನೋಹರ್ ಶರ್ಮ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ ಕಾರಣ ನಿಗದಿಯಂತೆ ಬಜೆಟ್ ಮಂಡನೆಯಾಗಲಿದೆ.

ಅರುಣ್ ಜೇಟ್ಲಿಗೆ ಕಬ್ಬಿಣದ ಕಡಲೆಯಾದ ಬಜೆಟ್…!
ಪ್ರಧಾನಿ ನರೇಂದ್ರ ಮೋದಿ ಗರಿಷ್ಠ ಮೌಲ್ಯದ ನೋಟುಗಳನ್ನು ಅಮಾನ್ಯಗೊಳಿಸಿದ ನಂತರ ಮುಂದಿನ ತಿಂಗಳು ಮಂಡನೆಯಾಗಲಿರುವ ಕೇಂದ್ರದ ವಾರ್ಷಿಕ ಬಜೆಟ್ ಹಣಕಾಸು ಸಚಿವ ಅರುಣ್ ಜೇಟ್ಲಿಯವರಿಗೆ ಅತ್ಯಂತ ದೊಡ್ಡ ಸವಾಲಾಗಿ ಪರಿಣಮಿಸಿದೆ. ನೋಟು ರದ್ದತಿ ನಂತರ ಒಂದೆಡೆ ದೇಶದ ಬಡವರು , ಮಧ್ಯಮವರ್ಗದವರ ಹಿತರಕ್ಷಿಸುವ ಸವಾಲಿನ ಜೊತೆಗೆ ಸಣ್ಣಪುಟ್ಟ ವರ್ತಕರ ಶ್ರೇಯೋಭಿವೃದ್ದಿಯನ್ನು ಸಮತೋಲನ ಮಾಡುವುದು ವಿತ್ತ ಸಚಿವರಿಗೆ ಭಾರೀ ಒತ್ತಡ ಉಂಟು ಮಾಡಿದೆ.

ನೋಟು ರದ್ದತಿಯಿಂದಾಗಿ ಬಹುತೇಕ ಎಲ್ಲ ವಲಯಗಳ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗಿದ್ದು , ಅವುಗಳು ಚೇತರಿಸಿಕೊಳ್ಳುವಂತೆ ಮಾಡಲು ಹೊಸ ಯೋಜನೆಗಳನ್ನು ರೂಪಿಸುವ ಅನಿವಾರ್ಯತೆ ಇದೆ.  ಅಲ್ಲದೆ ನೋಟು ರದ್ದತಿಯಿಂದ ನವೆಂಬರ್‍ನಿಂದ ಇಲ್ಲಿಯವರೆಗೂ ದೇಶದ ಜನರು ಹೈರಾಣರಾಗಿದ್ದು ಅವರು ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ನೀತಿಯನ್ನು ಪ್ರಕಟಿಸುವ ಪ್ರಕ್ರಿಯೆಯಲ್ಲಿ ಅರುಣ್ ಜೇಟ್ಲಿ ನಿರತರಾಗಿದ್ದು , ಈ ಸಂಬಂಧ ಆರ್ಥಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.

ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಹೆಚ್ಚಿನ ಹಣ ಸಂಗ್ರಹಿಸಿ ಅದನ್ನು ಸಾರ್ವಜನಿಕ ಯೋಜನೆಗಳಿಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಉತ್ಪನ್ನಗಳಿಗೆ ಅಧಿಕ ತೆರಿಗೆ ವಿಧಿಸಿ ಆ ಮೂಲಕ ಖಜಾನೆಗೆ ಆಗಿರುವ ವಿತ್ತೀಯ ಕೊರತೆಯನ್ನು ಸರಿದೂಗಿಸುವ ಕಸರತ್ತುಗಳೂ ಮುಂದುವರೆದಿವೆ. ಒಟ್ಟಾರೆ ಈ ಬಜೆಟ್ ಜನಪರ ಮತ್ತು ರೈತರ ಪರವಾಗಿರುವ ಜೊತೆಗೆ ಎಲ್ಲಾ ವಲಯಗಳನ್ನು ಸರಿದೂಗಿಸಲು ಸರ್ಕಸ್ ಮಾಡಬೇಕಾದ ದೊಡ್ಡ ಹೊಣೆ ಹಣಕಾಸು ಸಚಿವರ ಮೇಲಿದ್ದು , ಬಹುಶಃ ಫೆಬ್ರವರಿ 1ನೇ ತಾರೀಖು ಮಂಡನೆಯಾಗಬಹುದಾದ ಬಜೆಟ್ ಮೇಲೆ ದೇಶದ ಜನರು ಭಾರೀ ನಿರೀಕ್ಷೆಯಿಂದ ಎದುರು ನೋಡುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin