ನಿಗಮ-ಮಂಡಳಿಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕಾತಿ ಪಟ್ಟಿ ಸಿದ್ಧ

ಈ ಸುದ್ದಿಯನ್ನು ಶೇರ್ ಮಾಡಿ

cm-siddu

ಮೈಸೂರು, ಆ.30- ನಿಗಮ-ಮಂಡಳಿಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕಾತಿ ಪಟ್ಟಿ ಸಿದ್ಧವಾಗಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತಮಿಳುನಾಡು ಬಂದ್ ಬಗ್ಗೆ ಏನೂ ಮಾತಾಡಲ್ಲ. ಅದು ಅವರಿಗೇ ಬಿಟ್ಟ ವಿಷಯ. ನಾವು ತಮಿಳುನಾಡಿಗೆ ನೀರು ಬಿಡುವುದೇ ಇಲ್ಲ ಎಂದು ಹೇಳುತ್ತಿಲ್ಲ. ಆದರೆ, ನಮ್ಮ ರಾಜ್ಯದ ಪರಿಸ್ಥಿತಿಯಲ್ಲಿ ಸದ್ಯಕ್ಕೆ ಅಲ್ಲಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದರು.

ನಮಗೇ ಕುಡಿಯಲು ನೀರು ಸಾಕಾಗುತ್ತಿಲ್ಲ. ನಮ್ಮ ರೈತರ ಕೃಷಿಗೆ ನೀರು ಕೊಡಲಾಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ತಮಿಳುನಾಡಿನ ಸಾಂಬಾ ಬೆಳೆಗೆ ನೀರು ಬಿಡುವುದು ಅಸಾಧ್ಯ. ಮುಂದಿನ ದಿನಗಳಲ್ಲಿ ಮಳೆ ಬಂದರೆ ನೀರು ಬಿಡುತ್ತೇವೆ ಎಂದು ಹೇಳಿದರು.ರಾಕೇಶ್ ನಿಧನದ ನಂತರ ಇದೇ ಮೊದಲ ಬಾರಿಗೆ ಜನತಾದರ್ಶನ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಈ ವೇಳೆ ಮುಖ್ಯಮಂತ್ರಿಗಳು ಕಿರಿಯ ಪುತ್ರ ಡಾ.ಯತೀಂದ್ರ ಜತೆಯಲ್ಲೇ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ವರುಣ ಕ್ಷೇತ್ರದ ಜನರು ರಾಕೇಶ್ ನಿಧನದ ನಂತರ ನಮ್ಮ ಸಮಸ್ಯೆಗಳನ್ನು ಕೇಳುವವರು ಇಲ್ಲದಂತಾಗಿದೆ. ನಮ್ಮಗಳ ಸಮಸ್ಯೆಗೆ ಸ್ಪಂದಿಸಲು ಯಾರನ್ನಾದರೂ ನೇಮಿಸಿ. ಪ್ರತಿ ಬಾರಿ ನೀವು ಇದ್ದಲ್ಲಿಗೆ ಬರಲು ಸಾಧ್ಯವಾಗುವುದಿಲ್ಲ ಎಂದು ಮನವಿ ಮಾಡಿದರು.ಮುಸ್ಲಿಂ ಮುಖಂಡರು ಆಗಮಿಸಿ ರಾಕೇಶ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಸಿದ್ದರಾಮಯ್ಯ ಅವರಿಗೆ ಸಾಂತ್ವನ ಹೇಳಿ ತಾವು ಪೂಜಿಸಿ ತಂದಿದ್ದಂತಹ ತಾಯತವನ್ನು ಕೊಟ್ಟರು. ಮುಖ್ಯಮಂತ್ರಿ ಅದನ್ನು ಸ್ವೀಕರಿಸಿದರು.ಮುಖ್ಯಮಂತ್ರಿಗಳು ಮನೆಯಿಂದ ಹೊರಬಂದಾಗ ಕೈನಲ್ಲಿ ನಿಂಬೆಹಣ್ಣು ಹಿಡಿದುಕೊಂಡಿದ್ದುದು ಕಂಡುಬಂತು. ಇದನ್ನು ನೋಡಿದ ಕೆಲವರು ಮುಖ್ಯಮಂತ್ರಿಗಳೇನಾದರೂ ಮೌಢ್ಯಕ್ಕೆ ಜೋತುಬಿದ್ದರಾ ಎಂದುಕೊಳ್ಳುತ್ತಿದ್ದುದೂ ಕೇಳಿಬಂದಿತು.
ಸಿದ್ದರಾಮಯ್ಯನವರು ಸಾರ್ವಜನಿಕರ ಅಹವಾಲು ಸ್ವೀಕರಿಸಿದ ನಂತರ ನಗರದ ಲ್ಯಾನ್ಸ್‍ಡೌನ್ ಕಟ್ಟಡಕ್ಕೆ ಭೇಟಿ ನೀಡಿ ಅಲ್ಲಿನ ಆಧುನೀಕರಣ ಕಾಮಗಾರಿ ವೀಕ್ಷಿಸಿದರು. ತದನಂತರ ಭಾನುವಾರು ಉರುಳಿಬಿದ್ದ ದೇವರಾಜ ಮಾರುಕಟ್ಟೆಗೂ ಭೇಟಿ ನೀಡಿ ಪರಿಶೀಲಿಸಿದರು.ಶಾಸಕರಾದ ವಾಸು, ಸೋಮಶೇಖರ್, ಮೇಯರ್ ಭೈರಪ್ಪ ಮತ್ತಿತರರು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin