ನಿಗಮ – ಮಂಡಳಿಗಳಿಗೆ ಹೊಸ ಅಧ್ಯಕ್ಷರ ನೇಮಕ ಪ್ರಕ್ರಿಯೆ ಶುರು

ಈ ಸುದ್ದಿಯನ್ನು ಶೇರ್ ಮಾಡಿ

Siddaramaiha

ಬೆಂಗಳೂರು, ಆ.11-  ಹಾಲಿ ಇರುವ ನಿಗಮ-ಮಂಡಳಿ ಅಧ್ಯಕ್ಷರು-ಉಪಾಧ್ಯಕ್ಷರ ಅವಧಿ ಇದೇ ಆ.18ರಂದು ಮುಗಿಯಲಿದ್ದು, ಹೊಸಬರ ನೇಮಕಕ್ಕೆ ನಾಳೆಯಿಂದಲೇ ಪ್ರಕ್ರಿಯೆ ಪ್ರಾರಂಭವಾಗಲಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮ ಪುತ್ರ ರಾಕೇಶ್‍ನ 11ನೆ ದಿನದ ಉತ್ತರ ಕ್ರಿಯೆಗಳನ್ನು ಮುಗಿಸಿಕೊಂಡು ನಾಳೆ ಅಥವಾ ನಾಡಿದ್ದು ದೆಹಲಿಗೆ ತೆರಳಿ ನಿಗಮ-ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರ ನೇಮಕಾತಿ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.  ಒಟ್ಟಾರೆ ತಿಂಗಳ ಅಂತ್ಯದಲ್ಲಿ 85ಕ್ಕೂ ಹೆಚ್ಚು ನಿಗಮ-ಮಂಡಳಿಗಳಿಗೆ ನೂತನ ಅಧ್ಯಕ್ಷರ ನೇಮಕವಾಗಲಿದೆ. ಶಾಸಕರಿಗೆ ಶೇ.50:50ರ ಅನುಪಾತದಲ್ಲಿ ಶಾಸಕರಿಗೆ ಹಾಗೂ ಕಾರ್ಯಕರ್ತರಿಗೆ ನಿಗಮ-ಮಂಡಳಿಗಳ ಅಧ್ಯಕ್ಷಗಿರಿ ನೀಡಲು ನಿರ್ಧರಿಸಿದ್ದು, ಈ ಸಂಬಂಧ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್‍ಗಾಂಧಿ, ರಾಜಕೀಯ ಕಾರ್ಯದರ್ಶಿ ಅಹಮ್ಮದ್ ಪಟೇಲ್, ಇನ್ನಿತರ ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ.

ಈ ಹಿಂದೆಯೇ ನಿಗಮ-ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರ ನೇಮಕಾತಿ ಪಟ್ಟಿ ಸಿದ್ಧಗೊಂಡಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರು ಬೆಲ್ಜಿಯಂನಲ್ಲಿ ಅನಾರೋಗ್ಯಕ್ಕೀಡಾಗಿ ಹಠಾತ್ ನಿಧನರಾಗಿದ್ದರಿಂದ ನಿಗಮ-ಮಂಡಳಿಗಳ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು.
ಮಗನ ಉತ್ತರ ಕ್ರಿಯೆಗಳು ಮುಗಿದ ನಂತರ ಈ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳೋಣ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ದಿಗ್ವಿಜಯ್‍ಸಿಂಗ್ ಸೂಚಿಸಿದ್ದ ಹಿನ್ನೆಲೆಯಲ್ಲಿ  ನಾಳೆಯಿಂದ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದ್ದು, ತಿಂಗಳಾಂತ್ಯದೊಳಗೆ ಎಲ್ಲ ನಿಗಮ-ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರನ್ನು ನೇಮಿಸುವ ಸಾಧ್ಯತೆ ಇದೆ.
ಪಕ್ಷ ಅಧಿಕಾರಕ್ಕೆ ಬಂದು ಎರಡು ವರ್ಷಗಳ ನಂತರ ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. 18 ತಿಂಗಳ ಅವಧಿಗೆ ಅಧಿಕಾರಾವಧಿ ನಿಗದಿ ಮಾಡಿ ನೇಮಕಾತಿ ಆದೇಶವನ್ನು ಸರ್ಕಾರ ನೀಡಿತ್ತು. ನಂತರ ಸರ್ಕಾರ ಇವರ ಅವಧಿಯನ್ನು ಮೂರು ತಿಂಗಳ ಕಾಲ ವಿಸ್ತರಿಸಿತ್ತು. ಈಗ ಬೇರೆಯವರಿಗೆ ಅವಕಾಶ ಕೊಡುವ ಹಿನ್ನೆಲೆಯಲ್ಲಿ ಎಲ್ಲ ನಿಗಮ-ಮಂಡಳಿಗಳಿಗೆ ಹೊಸಬರನ್ನು ನೇಮಿಸಲು ಮುಂದಾಗಿದೆ.
ಈಗಾಗಲೇ ಎಲ್ಲ ನಿಗಮ-ಮಂಡಳಿಗಳಿಗೆ ಸದಸ್ಯ ನಿರ್ದೇಶಕರನ್ನು ಸರ್ಕಾರ ನೇಮಕ ಮಾಡಿದೆ. ಈಗ ಹೊಸ ಅಧ್ಯಕ್ಷ-ಉಪಾಧ್ಯಕ್ಷರನ್ನು ನೇಮಕ ಮಾಡಬೇಕಾಗಿದೆ. ನಾಳೆಯಿಂದ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ಲಾಬಿ ಹೆಚ್ಚಾಗಲಿದೆ.  ಪ್ರಾದೇಶಿಕವಾರು, ಜಾತಿವಾರು, ಪಕ್ಷದ ಸೇವೆ ಪರಿಗಣನೆಗೆ ತೆಗೆದುಕೊಂಡು ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಅಧಿಕಾರ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಎಲ್ಲ ಜಿಲ್ಲಾಧ್ಯಕ್ಷರುಗಳಿಂದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಮಾಹಿತಿ ತರಿಸಿಕೊಂಡಿದ್ದಾರೆ.   ನಿಗಮ-ಮಂಡಳಿ ನೇಮಕಾತಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚೆ ನಡೆಸಿ ನವದೆಹಲಿಗೆ ತೆರಳಿ ಸದ್ಯದಲ್ಲೇ ತಿಂಗಳಾಂತ್ಯದಲ್ಲಿ ಇತ್ಯರ್ಥಪಡಿಸುವ ಸಾಧ್ಯತೆ ಇದೆ.

ಮೇಲ್ಮನೆಗೆ ಬರಗೂರು ರಾಮಚಂದ್ರಪ್ಪ
ಬೆಂಗಳೂರು, ಆ.11- ವಿಧಾನಪರಿಷತ್‍ನಲ್ಲಿ ಖಾಲಿ ಇರುವ ಮೂವರ ನಾಮನಿರ್ದೇಶನ ಸದಸ್ಯರನ್ನು ತಿಂಗಳಾಂತ್ಯದಲ್ಲಿ ನೇಮಕ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸಾಹಿತ್ಯ ಕ್ಷೇತ್ರದಿಂದ ಬರಗೂರು ರಾಮಚಂದ್ರಪ್ಪ ಆಯ್ಕೆ ಬಹುತೇಕ ಖಚಿತವಾಗಿದೆ.  ಇನ್ನುಳಿದಂತೆ ಸಾಮಾಜಿಕ ಕ್ಷೇತ್ರದಿಂದ ಮಾಜಿ ಮೇಯರ್ ಪಿ.ಆರ್.ರಮೇಶ್, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಜಿ.ಸಿ.ಚಂದ್ರಶೇಖರ್ ಮತ್ತು ಕಲಾಕ್ಷೇತ್ರದಿಂದ ಕೆ.ಪಿ.ನಂಜುಂಡಿ ಈ ನಾಲ್ವರಲ್ಲಿ ಮೂವರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ. ಸದ್ಯದಲ್ಲೇ ನವದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್‍ನಿಂದ ಅನುಮತಿ ಪಡೆದು ಮೇಲ್ಮನೆಗೆ ನಾಮನಿರ್ದೇಶನ ಮಾಡಲಿದ್ದಾರೆ. ಇದೇ ವೇಳೆ ನಿಗಮ ಮಂಡಳಿಗಳಿಗೂ ಕೂಡ ಅಧ್ಯಕ್ಷ-ಉಪಾಧ್ಯಕ್ಷರ ನೇಮಕವನ್ನೂ ಮಾಡಲಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin