ನಿಗಮ-ಮಂಡಳಿಗಳ ನೇಮಕಾತಿಯಲ್ಲಿ ಜೆಡಿಎಸ್ ಬಂಡಾಯ ಶಾಸಕರರಿಗೂ ಚಾನ್ಸ್

ಈ ಸುದ್ದಿಯನ್ನು ಶೇರ್ ಮಾಡಿ

JDS-mla

ಬೆಂಗಳೂರು ಆ.20 – ಈ ಬಾರಿ ನಿಗಮ-ಮಂಡಳಿಗಳ ನೇಮಕಾತಿಯಲ್ಲಿ ಜೆಡಿಎಸ್ ಬಂಡಾಯ ಶಾಸಕರ ಕೆಲ ಬೆಂಬಲಿಗರಿಗೂ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಜೆಡಿಎಸ್‍ನಿಂದ ಅಮಾನತಾಗಿರುವ ಶಾಸಕ ಚಲುವರಾಯಸ್ವಾಮಿ, ಜಮೀರ್ ಅಹಮ್ಮದ್, ಗೋಪಾಲಯ್ಯ, ಅಖಂಡ ಶ್ರೀನಿವಾಸಮೂರ್ತಿ ಮುಂತಾದ ಶಾಸಕರ ಕೆಲ ಬೆಂಬಲಿಗರಿಗೆ ನಿಗಮ-ಮಂಡಳಿಗಳ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಚರ್ಚೆ ನಡೆದಿರುವುದು ತೀವ್ರ ಕುತೂಹಲ ಕೆರಳಿಸಿದೆ.  ಜೆಡಿಎಸ್ ಬಂಡಾಯ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ. ಈಗಾಗಲೇ ಡಿ.ಕೆ.ಶಿವಕುಮಾರ್ ಜತೆ ಕೆಲವು ಶಾಸಕರು ಮಹತ್ವದ ಮಾತುಕತೆ ನಡೆಸಿ ಮುಂದಿನ ಚುನಾವಣೆ ಬಗ್ಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್, ಬಂಡಾಯ ಶಾಸಕರ ಬೆಂಬಲಿಗರಿಗೂ ನಿಗಮ-ಮಂಡಳಿಗಳಲ್ಲಿ ಅವಕಾಶ ಕಲ್ಪಿಸುವ ನಿರ್ಧಾರ ಕೈಗೊಂಡಿದೆ. ಈ ಸಂಬಂಧ ಬಂಡಾಯ ಶಾಸಕರು ಕೆಲವರ ಶಿಫಾರಸನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯಸಭೆ ಹಾಗೂ ಮೇಲ್ಮನೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಕೈಹಿಡಿದ ಜೆಡಿಎಸ್ ಬಂಡಾಯ ಶಾಸಕರನ್ನು ಕೈ ಬಿಡುವುದಿಲ್ಲ ಎಂದು ಆ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‍ಸಿಂಗ್ ಹೇಳಿಕೆ ಕೊಟ್ಟಿದ್ದರು.   ಈಗ ಬಂಡಾಯ ಶಾಸಕರು ತಮ್ಮ ಬೆಂಬಲಿಗರಿಗೂ ಕೆಲವರಿಗೆ ಅವಕಾಶ ನೀಡಬೇಕೆಂಬ ಮನವಿಯನ್ನು ಹೈಕಮಾಂಡ್‍ಗೆ ಸಲ್ಲಿಸಿದ್ದಾರೆನ್ನಲಾಗಿದ್ದು, ಇದಕ್ಕೆ ಹೈಕಮಾಂಡ್ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕು.  ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಈ ಎಂಟೂ ಜನ ಶಾಸಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳದಿದ್ದರೆ ಪರ್ಯಾಯ ಮಾರ್ಗ ಹುಡುಕಿಕೊಳ್ಳುತ್ತಿರುವ ಅವರು ಈಗಾಗಲೇ ತಮ್ಮ ಅನುಯಾಯಿಗಳಿಗೆ ಆಯಾಕಟ್ಟಿನ ಜಾಗಗಳನ್ನು ಒದಗಿಸುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಬಂಡಾಯ ಜೆಡಿಎಸ್ ಬಂಡಾಯ ಶಾಸಕರ ಕೆಲ ಬೆಂಬಲಿಗರಿಗೆ ಅವಕಾಶ ನೀಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಹೈಕಮಾಂಡ್‍ಗೆ ಸಲ್ಲಿಸುವ ಮೂಲಕ ಭವಿಷ್ಯದ ಚುನಾವಣೆಗೆ ಭದ್ರ ಬುನಾದಿ ಮಾಡಿಕೊಳ್ಳುತ್ತಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin

Comments are closed.