ನಿಗಮ ಮಂಡಳಿಗಳ ನೇಮಕಾತಿ ಕುರಿತು ಚರ್ಚಿಸಲು ಬೆಂಗಳೂರಿಗೆ ದಿಗ್ವಿಜಯ್ ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

S digvijay-singh

ಬೆಂಗಳೂರು, ಆ.26- ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರ ನೇಮಕಾತಿ ಸಂಬಂಧ ಚರ್ಚಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ಸಿಂಗ್ ನಾಳೆ ಬೆಂಗ ಳೂರಿಗೆ ಆಗಮಿಸುತ್ತಿದ್ದಾರೆ.  ಇಂದು ದೆಹಲಿ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಸಾಧ್ಯತೆಗಳು ಕ್ಷೀಣವಾಗಿದ್ದು, ಭಾರತೀಯ ಪ್ರವಾಸಿ ದಿವಸ್ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಆರಂಭಿಸಲಾಗುತ್ತಿರುವ ಈ ಸಂಬಂಧ ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್ ಅವರ ಜತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ಸಿದ್ಧರಾಮಯ್ಯ ದೆಹಲಿಗೆ ತೆರಳಿದ್ದಾರೆ.

ಮಧ್ಯಾಹ್ನ 1 ಗಂಟೆಗೆ ದೆಹಲಿ ತಲುಪಲಿರುವ ಸಿದ್ದರಾಮಯ್ಯ 3 ಗಂಟೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್ಗಾಂಧಿ, ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ಸಿಂಗ್ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದರೂ ಈವರೆಗೂ ರಾಹುಲ್ಗಾಂಧಿ ಹಾಗೂ ಸೋನಿಯಾಗಾಂಧಿ ಕಚೇರಿಯಿಂದ ಸಮಯ ನಿಗದಿಯಾಗಿಲ್ಲ.   ದಿಗ್ವಿಜಯ್ಸಿಂಗ್ ಅವರು ಖಾಸಗಿ ಕಾರ್ಯಕ್ರಮ ನಿಮಿತ್ತ ಬೆಂಗಳೂರಿಗೆ ಆಗಮಿಸುತ್ತಿದ್ದು, ರಾಜಕೀಯ ಬೆಳವಣಿಗೆಗಳ ಚರ್ಚೆ ನಡೆಸುವುದಾಗಿ ಹೇಳಿದ್ದು, ಸಭೆ ನಡೆಯುವ ಸಾಧ್ಯತೆ ಕ್ಷೀಣಿಸಿದೆ.

ಸೋನಿಯಾ ಅವರ ಅನಾರೋಗ್ಯದ ಕಾರಣದಿಂದ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದು ವಿಶ್ರಾಂತಿಯಲ್ಲಿದ್ದು, ಸದ್ಯಕ್ಕೆ ಯಾರನ್ನೂ ಭೇಟಿ ಮಾಡುವ ಸಾಧ್ಯತೆಗಳಿಲ್ಲ ಎಂದು ಹೇಳಲಾಗಿದೆ. ಕೊನೆಯ ಕ್ಷಣದಲ್ಲಿ ಸಮಯ ಸಿಕ್ಕರೆ ಸೋನಿಯಾ ಅವರನ್ನೂ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಔಪಚಾರಿಕ ಚರ್ಚೆಯೊಂದಿಗೆ ವಾಪಾಸಾಗುವ ಸಾಧ್ಯತೆಗಳಿವೆ.
ಮೂಲಗಳ ಪ್ರಕಾರ ಸಿದ್ದರಾಮಯ್ಯ ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರ ಪಟ್ಟಿಯೊಂದಿಗೆ ದೆಹಲಿಗೆ ತೆರಳಿದ್ದಾರೆ. ಮುಚ್ಚಿದ್ದ ಲಕೋಟೆಯಲ್ಲಿ ಸೋನಿಯಾಗಾಂಧಿ, ರಾಹುಲ್ಗಾಂಧಿ, ದಿಗ್ವಿಜಯ್ಸಿಂಗ್ ಕಚೇರಿಗಳಿಗೆ ತಲಾ ಒಂದು ಪಟ್ಟಿ ತಲುಪಿಸಲಾಗುವುದು ಎನ್ನಲಾಗಿದೆ.

ಶಾಸಕರಿಗೆ ಶೇ.30ರಷ್ಟು ವಿಧಾನಪರಿಷತ್ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋಲು ಕಂಡು ಹಾಗೂ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿಗಳಿಗೆ ಶೇ.30ರಷ್ಟು ಉಳಿದ ಶೇ.40ರಲ್ಲಿ ಜಿಲ್ಲಾಧ್ಯಕ್ಷರು ಮತ್ತು ಕೆಪಿಸಿಸಿ ಪದಾಧಿಕಾರಿಗಳ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ಕರಡು ಪಟ್ಟಿ ತಯಾರಿಸಲಾಗಿದೆ.  ಮಾಲಿಕಯ್ಯ ಗುತ್ತೇದಾರ್, ನರೇಂದ್ರಸ್ವಾಮಿ, ಆರ್.ವಿ.ದೇವರಾಜ್, ಎನ್.ಎ.ಹ್ಯಾರಿಸ್ ಸೇರಿದಂತೆ ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದ ಪ್ರಮುಖ ಆಕಾಂಕ್ಷಿಗಳನ್ನು ನಿಗಮ ಮಂಡಳಿ ಸ್ಥಾನ ಒಪ್ಪಿಕೊಳ್ಳುವಂತೆ ಮನವೊಲಿಸಲಾಗಿದೆ.

ಹೈಕಮಾಂಡ್ ಶಾಸಕರನ್ನು ನೇಮಿಸಲು ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಹೇಳಲಾಗುತ್ತಿದ್ದು, ಪಟ್ಟಿಯಲ್ಲಿರುವ ಶಾಸಕರ, ಮುಖಂಡರಲ್ಲಿ ಸಾಮಾಜಿಕ ನ್ಯಾಯ, ಪ್ರಾದೇಶಿಕ ಹಂಚಿಕೆ ಹಾಗೂ ಪಕ್ಷನಿಷ್ಠೆ ಆಧರಿಸಿ ಸ್ಥಾನ ಹಂಚಿಕೆಯಾಗಿದೆಯೇ ಎಂಬ ಬಗ್ಗೆ ದಿಗ್ವಿಜಯ್ಸಿಂಗ್ ಮುಖ್ಯಮಂತ್ರಿ ಸೇರಿದಂತೆ ಮತ್ತಿತರರೊಂದಿಗೆ ಚರ್ಚಿಸಿ ಪರಿಶೀಲಿಸಲಿದ್ದಾರೆ.  ನಾಳೆ ಸಂಜೆ ಬೆಂಗಳೂರಿಗೆ ಆಗಮಿಸುವ ದಿಗ್ವಿಜಯ್ಸಿಂಗ್ ಅವರೊಂದಿಗೆ ನಾಡಿದ್ದು ಬೆಳಗ್ಗೆ 9 ಗಂಟೆಗೆ ನಡೆಯುವ ಸಭೆಯಲ್ಲಿ ಕರಡು ಪಟ್ಟಿಗೆ ಅಂಗೀಕಾರ ಸಿಕ್ಕರೆ ಈ ವಾರಾಂತ್ಯದ ಒಳಗಾಗಿಯೆ ನಿಗಮ ಮಂಡಳಿಗಳಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ನೇಮಕವಾಗಲಿದೆ.

ಆದರೆ, ಸದ್ಯದ ರಾಜಕೀಯ ಬೆಳವಣಿಗೆಯಲ್ಲಿ ಹಲವಾರು ಗೊಂದಲಗಳಿದ್ದು, ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿಯ ಕೊನೆಯ ಎರಡು ವರ್ಷಗಳಲ್ಲಿ ಹೇಗಾದರೂ ಮಾಡಿ ಅಧಿಕಾರ ಗಿಟ್ಟಿಸಲೇಬೇಕು ಎಂದು ಹಲವಾರು ಮಂದಿ ಜಿದ್ದಾಜಿದ್ದಿನ ಲಾಬಿ ನಡೆಸುತ್ತಿದ್ದಾರೆ.  ಈ ನಡುವೆ ನಮ್ಮ ಅಧಿಕಾರಾವಧಿಯನ್ನೇ ಮುಂದುವರೆಸಿ ಎಂದು ಹಾಲಿ ಅಧ್ಯಕ್ಷರು ಒತ್ತಡ ಹೇರಲು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಮುಂದಾಗಿದ್ದಾರೆ.  ದೆಹಲಿಗೆ ತೆರಳಿರುವ ಮುಖ್ಯಮಂತ್ರಿಗಳಿಗೆ ಹೈಕಮಾಂಡ್ ನಾಯಕರಿಗೆ ಇಂದು ಸಮಯ ಕೊಟ್ಟು ರಾಜಕೀಯ ವಿಷಯ ಚರ್ಚಿಸಿದರೆ ಎಲ್ಲ ಗೊಂದಲಗಳಿಗೆ ತೆರೆ ಬಿದ್ದು ನಿಗಮ ಮಂಡಳಿ ನೇಮಕಾತಿ ಸುಗಮವಾಗಲಿದೆ. ಒಂದು ವೇಳೆ ಇದು ಸಾಧ್ಯವಾಗದೇ ಹೋದರೆ ಗೊಂದಲ ಮುಂದುವರೆಯಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin