ನಿಗಮ ಮಂಡಳಿಗಳ ಮೇಲೆ ಪರಾಜಿತರ ಕಣ್ಣು : ಪ್ರತ್ಯೇಕ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

BC-Patil

ಬೆಂಗಳೂರು, ಆ.29-ನಿಗಮ ಮಂಡಳಿಗಳ ನೇಮಕಾತಿ ಸಂದರ್ಭದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತ ಅಭ್ಯರ್ಥಿಗಳನ್ನು ಪರಿಗಣಿಸಬೇಕೆಂದು ಕಾಂಗ್ರೆಸ್ ಪಕ್ಷದ ಮುಖಂಡರು ಪ್ರತ್ಯೇಕ ಸಭೆ ನಡೆಸಿ ಪಕ್ಷದ ಮೇಲೆ ಒತ್ತಡ ತಂದಿದ್ದಾರೆ.  ನಿನ್ನೆ ಖಾಸಗಿ ಹೊಟೇಲ್ವೊಂದರಲ್ಲಿ ಬಿ.ಸಿ.ಪಾಟೀಲ್, ಕುಮಾರಬಂಗಾರಪ್ಪ, ನೆ.ಲ.ನರೇಂದ್ರಬಾಬು ಸೇರಿದಂತೆ ಅನೇಕರು ಸಭೆಯಲ್ಲಿ ಪಾಲ್ಗೊಂಡು ನಿಗಮ ಮಂಡಳಿಯಲ್ಲಿ ಅವಕಾಶ ಪಡೆಯುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಮತ್ತೊಂದು ಅತೃಪ್ತರ ಬಣ ಸಿದ್ಧವಾಗಿದೆ.
ಕಳೆದ ಬಾರಿ ನಿಗಮ ಮಂಡಳಿಗಳ ನೇಮಕ ಸಂದರ್ಭದಲ್ಲಿ ಚುನಾವಣೆಯಲ್ಲಿ ಸೋತವರಿಗೆ ಟಿಕೆಟ್ ನೀಡಬಾರದೆಂಬ ಮಾರ್ಗಸೂಚಿ ರೂಪಿಸಲಾಗಿತ್ತು.

ಈ ಬಾರಿ ಅದೇ ಕ್ರಮ ಅನುಸರಿಸಿದರೆ ಮುಂಬರುವ ಚುನಾವಣೆಗಳನ್ನು ಎದುರಿಸುವುದು ಕಷ್ಟವಾಗುತ್ತದೆ. ನಮಗೆ ನಿಗಮ ಮಂಡಳಿಗಳಲ್ಲಿ ಅವಕಾಶ ನೀಡಿದರೆ ಮುಂದಿನ ಚುನಾವಣೆಗಳಲ್ಲಿ ಅನುಕೂಲವಾಗುತ್ತದೆ ಎಂಬುದು ಇವರ ಒತ್ತಾಯವಾಗಿದೆ. ಅಕಸ್ಮಾತ್ ನಿಗಮ ಮಂಡಳಿ ಕೈ ತಪ್ಪಿದರೆ ಹೋರಾಟ ನಡೆಸುವ ಚಿಂತನೆ ಬಗ್ಗೆಯೂ ಕೂಡ ಸಭೆಯಲ್ಲಿ ಚರ್ಚೆ ನಡೆದಿದೆ. ಸೋತವರನ್ನು ನಿಗಮ ಮಂಡಳಿಗಳಿಗೆ ಪರಿಗಣಿಸದಿದ್ದರೆ ಇದರ ಪರಿಣಾಮ 2018ರ ಚುನಾವಣೆ ಮೇಲೆ ಬೀರಲಿದೆ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಕಳೆದ ಮೂರು ದಶಕಗಳಿಂದ ಪಕ್ಷಕ್ಕೆ ದುಡಿದ ನಮಗೆ ಯಾವುದೇ ಅಧಿಕಾರ ಸಿಕ್ಕಿಲ್ಲ. ಈಗಲೂ ಅಧಿಕಾರದಿಂದ ವಂಚಿಸಿದರೆ ಈ ವಿಷಯವನ್ನು ಹೈಕಮಾಂಡ್ ಅಂಗಳಕ್ಕೆ ಒಯ್ಯಲು ನಿನ್ನೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ನಿಗಮ ಮಂಡಳಿ ನೇಮಕಾತಿ ಸಂಬಂಧ ಸೆ.2 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೈಕಮಾಂಡ್ ವರಿಷ್ಠರೊಂದಿಗೆ ಚರ್ಚಿಸಲು ದೆಹಲಿಗೆ ತೆರಳಲಿದ್ದಾರೆ. ಈ ಸಂದರ್ಭದಲ್ಲಿ ಪರಾಜಿತ ಅಭ್ಯರ್ಥಿಗಳು ಕೂಡ ದೆಹಲಿಗೆ ತೆರಳಿ ವರಿಷ್ಠರ ಮೇಲೆ ಒತ್ತಡ ತರುವ ಸಾಧ್ಯತೆ ಇದೆ. ಕಳೆದ ಬಾರಿ ನೇಮಕಾತಿ ಸಂದರ್ಭದಲ್ಲೂ ಕೂಡ ಪ್ರತ್ಯೇಕ ಸಭೆ ನಡೆಸಿ ತಮ್ಮ ಅಹವಾಲು ಸಲ್ಲಿಸಿದ್ದರು. ಆದರೆ ಇವರಿಗೆ ಅವಕಾಶ ದೊರೆತಿರಲಿಲ್ಲ.

► Follow us on –  Facebook / Twitter  / Google+

Facebook Comments

Sri Raghav

Admin