ನಿಗಮ ಮಂಡಳಿ ನೇಮಕಾತಿಗೆ ಮಹೂರ್ತ ಫಿಕ್ಸ್ : ಸಿದ್ದು, ಪರಂ ದೆಹಲಿಗೆ ದೌಡು

ಈ ಸುದ್ದಿಯನ್ನು ಶೇರ್ ಮಾಡಿ

Parameshwar

ಬೆಂಗಳೂರು, ಅ.23-ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ನಿಗಮ ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರ ನೇಮಕಕ್ಕೆ ಕಾಲ ಕೂಡಿ ಬಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಈ ಸಂಬಂಧ ಹೈಕಮಾಂಡ್ ಜೊತೆ ಚರ್ಚಿಸಿ ಅನುಮತಿ ಪಡೆಯಲು ಇಂದು ಸಂಜೆ ನವದೆಹಲಿಗೆ ತೆರಳಲಿದ್ದಾರೆ. ನಾಳೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್‍ಗಾಂಧಿ ಹಾಗೂ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿ ನಿಗಮಮಂಡಳಿಗಳು ಹಾಗೂ ಮೇಲ್ಮನೆಯಲ್ಲಿ ಖಾಲಿ ಇರುವ ಮೂರು ಸ್ಥಾನಗಳ ನೇಮಕಾತಿಗೆ ಒಪ್ಪಿಗೆ ಪಡೆದು ಅಧಿಕೃತ ಪ್ರಕಟಣೆ ಹೊರಡಿಸಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ.

95ಕ್ಕೂ ಹೆಚ್ಚು ನಿಗಮಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರನ್ನು ನೇಮಕ ಮಾಡಲು ಈಗಾಗಲೇ ಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ. ಈ ಸಂಬಂಧ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ದಿನೇಶ್‍ಗುಂಡೂರಾವ್, ರಾಜ್ಯದ ಪಕ್ಷದ ಮುಖಂಡರು ಮಹತ್ವದ ಸಭೆ ನಡೆಸಿದ್ದಾರೆ. ಕಳೆದ ಬಾರಿ ನಿಗಮ ಮಂಡಳಿ ನೇಮಕಾತಿ ಸಂಬಂಧ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿಯವರು ಕೆಲವು ಮಾರ್ಗದರ್ಶನಗಳನ್ನು ರೂಪಿಸಿ ನೇಮಕಾತಿ ಮಾಡಿ ಎಂಬ ಸಲಹೆ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯ, ಜಾತಿ ಸಮೀಕರಣ, ಪ್ರಾದೇಶಿಕತೆ, ಪಕ್ಷ ನಿಷ್ಠೆ, ಮುಂಬರುವ ವಿಧಾನಸಭೆ ಚುನಾವಣೆಗೆ ಆಗಬಹುದಾದ ಪ್ರಯೋಜನೆಗಳನ್ನು ಲೆಕ್ಕ ಹಾಕಿಕೊಂಡು ಪಟ್ಟಿಯನ್ನು ಸಿದ್ಧ ಮಾಡಿದ್ದು, ನಾಳೆ ಹೈಕಮಾಂಡ್ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ.

ಪ್ರಮುಖ ನಿಗಮ ಮಂಡಳಿಗಳಿಗೆ ಶಾಸಕರನ್ನು ನೇಮಕ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ವ್ಯಕ್ತಪಡಿಸಿದ್ದಾರೆ. ಆದರೆ ಶಾಸಕ ಸ್ಥಾನವೇ ಒಂದು ಅಧಿಕಾರವಾಗಿರುವಾಗ ಮತ್ತೊಂದು ಅಧಿಕಾರವನ್ನು ಅವರಿಗೆ ಏಕೆ ಕೊಡಬೇಕು ಎಂಬುದು ರಾಹುಲ್‍ಗಾಂಧಿಯವರ ಚಿಂತನೆಯಾಗಿದೆ. ಹೀಗಾಗಿ ಶಾಸಕರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎಂದು ತಿಳಿದುಬಂದಿದೆ. ಹಾಗಾಗಿ ಪಕ್ಷದ ಹಿರಿಯರಿಗೆ, ಜಿಲ್ಲಾಧ್ಯಕ್ಷರಿಗೆ, ಪಕ್ಷದ ಪದಾಧಿಕಾರಿಗಳಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನಗಳು ಸಿಗಲಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಒಂದು ತಿಂಗಳಿನಿಂದ ಆಕಾಂಕ್ಷಿಗಳು ತಮ್ಮ ನಾಯಕರ ಮೂಲಕ ನಿಗಮ ಮಂಡಳಿ ಸ್ಥಾನಗಳನ್ನು ಪಡೆಯಲು ಲಾಬಿ ಮಾಡುತ್ತಿದ್ದಾರೆ. ಹೈಕಮಾಂಡ್ ವರಿಷ್ಠರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮೇಲೆ ಒತ್ತಡ ಹೇರಿದ್ದಾರೆ . ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದು ಪಟ್ಟಿ ಸಿದ್ಧಪಡಿಸಿಕೊಂಡಿದ್ದು, ಪರಮೇಶ್ವರ್ ಮತ್ತೊಂದು ಪಟ್ಟಿ ತಯಾರು ಮಾಡಿಕೊಂಡಿದ್ದಾರೆ. ಇವೆರಡರ ನಡುವೆ ಹೈಕಮಾಂಡ್ ಯಾರನ್ನು ಆಯ್ಕೆ ಮಾಡುತ್ತದೆ, ಯಾರಿಗೆ ಮಣೆ ಹಾಕುತ್ತದೆ ಎಂಬುದನ್ನು ಕಾದುನೋಡಬೇಕು.

ದೀಪಾವಳಿ ಹಬ್ಬದ ಉಡುಗೊರೆಯಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮಮಂಡಳಿಗಳ ಭಾಗ್ಯ ದೊರೆಯುವ ಸಾಧ್ಯತೆ ಇದೆ. ಇದೇ ಸಂದರ್ಭದಲ್ಲಿ ಮೇಲ್ಮನೆಯಲ್ಲಿ ಖಾಲಿ ಉಳಿದಿರುವ ಮೂವರು ನಾಮಕರಣ ಸದಸ್ಯರನ್ನು ನೇಮಕ ಮಾಡಲು ತೀರ್ಮಾನಿಸಲಾಗಿದೆ. ಇತ್ತೀಚೆಗೆ ಕಾಂಗ್ರೆಸ್ ಪಕ್ಷದಲ್ಲಿ ಕೆಲವು ಬೆಳವಣಿಗೆಗಳು ನಡೆದಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದು, ಹೈಕಮಾಂಡ್ ವರಿಷ್ಠರು ಎಚ್ಚರಿಕೆ ಹೆಜ್ಜೆ ಇಡುತ್ತಿದ್ದಾರೆ. ಅತೃಪ್ತರನ್ನು ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಒಟ್ಟಾರೆ ಮುಂಬರುವ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಆದಾಯ ಕ್ರೋಢೀಕರಣ, ವೋಟ್ ಬ್ಯಾಂಕ್ ರಾಜಕಾರಣ, ಜಾತಿ ಪ್ರಭಾವವಿರುವವರಿಗೆ ಹೆಚ್ಚು ಆದ್ಯತೆ ನೀಡುವ ಸಾಧ್ಯತೆ ಇದೆ.

► Follow us on –  Facebook / Twitter  / Google+

Facebook Comments

Sri Raghav

Admin