ನಿತ್ಯೋತ್ಸವ ಕವಿಯಿಂದ ವಿಶ್ವವಿಖ್ಯಾತ ಮೈಸೂರು ದಸರಾಗೆ ಅದ್ದೂರಿ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Dasara--2017--01

ಮೈಸೂರು, ಸೆ.21- ದಸರಾ ಮಹೋತ್ಸವ ರಾಜರ, ಉಳ್ಳವರ ಹಬ್ಬ ಅಲ್ಲ. ಎಲ್ಲರೂ ಸೇರಿ ಆಚರಿಸುವ ಜನಸಾಮಾನ್ಯರ ಹಬ್ಬ ಎಂದು ಸಾಹಿತಿ, ನಾಡೋಜ, ನಿತ್ಯೋತ್ಸವ ಖ್ಯಾತಿಯ ಪ್ರೊ.ನಿಸ್ಸಾರ್ ಅಹಮ್ಮದ್ ತಿಳಿಸಿದರು. ಚಾಮುಂಡಿಬೆಟ್ಟದಲ್ಲಿ ಮುಖ್ಯಮಂತ್ರಿಗಳೊಂದಿಗೆ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಬೆಳಗ್ಗೆ 7.45ರ ಶುಭ ತುಲಾ ಲಗ್ನದಲ್ಲಿ ಪೂಜೆ ಸಲ್ಲಿಸಿ ನಂತರ ದೇವಾಲಯದ ಬಳಿ ನಿರ್ಮಿಸಿರುವ ಭವ್ಯ ವೇದಿಕೆಯಲ್ಲಿ ದೇವಿಯ ಉತಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರೆಗೆ ವಿದ್ಯುಕ್ತ ಚಾಲನೆ ನೀಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜಾತಾಂತ್ರಿಕ ಮೌಲ್ಯಗಳನ್ನು ಎತ್ತಿಹಿಡಿಯುವಂತಹ ಹಬ್ಬವಾಗಿ ದಸರಾವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಸಾಂಸ್ಕøತಿಕ ನಗರಿ ಎಂದು ಮೈಸೂರನ್ನು ಕರೆಯಬಹುದಾಗಿದೆ. ಈ ನಗರದಲ್ಲಿ ಇನ್ನೂ ಸಂಸ್ಕøತಿ, ಕಲೆ ಉಳಿದು ಬೆಳೆಯುತ್ತಿದೆ. ರಾಜರ ಕಾಲದಲ್ಲಿನ ಸಂಸ್ಕøತಿ, ಅಗ್ರಹಾರ ಇವುಗಳು ಇನ್ನೂ ಇಲ್ಲಿ ಉಳಿದಿವೆ. ಇವನ್ನು ಈಗಲೂ ನಾವು ನೋಡಬಹುದಾಗಿದೆ. ಹಾಗಾಗಿ ಸಾಂಸ್ಕøತಿಕ ನಗರಿ ಎಂದ ಕರೆಯಬಹುದಾಗಿದೆ ಎಂದು ಪ್ರಶಂಶಿಸಿದರು. ಆದರೆ, ಬೆಂಗಳೂರು ಕಾಸ್ಮೋಪಾಲಿಟಿನ್ ನಗರವಾಗಿಬಿಟ್ಟಿದೆ ಎಂದ ಅವರು, ಕನ್ನಡವನ್ನು ಒಗ್ಗೂಡಿಸಿ ಆಚರಿಸುವಂತಹ ದಸರಾ ಇದಾಗಿದೆ. ನಾಡು, ನುಡಿಯನ್ನು ಬೆಳೆಯುವಂತಹ ಮೌಲ್ಯಯುತವಾದ ಸಮಾರಂಭ ನವರಾತ್ರಿಯಾಗಿದೆ. ನಾಡಿನ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಈ ನಾಡಹಬ್ಬದಲ್ಲಿ ಅಡಗಿದೆ. ಜಾತಿ, ಮತ, ಪಂಥ ಭೇದವಿಲ್ಲದೆ ಈ ಹಬ್ಬವನ್ನು ಆಚರಿಸುವುದೇ ದಸರಾದ ವಿಶೇಷ ಎಂದು ಹೇಳಿದರು.

Dasara--2017--03

ನಾನು ಮಾತನಾಡಲು ತಡವರಿಸುತ್ತಿದ್ದೇನೆ. ಇದು ವಯಸ್ಸಿನಿಂದಿಲ್ಲ. ನನಗೆ ಉಕ್ಕಿ ಬರುತ್ತಿರುವ ಭಾವ, ಸಂತಸದಿಂದ ಮಾತುಗಳು ತಡವರಿಸುತ್ತಿದೆ. ಇಂತಹ ವಿಶ್ವ ವಿಖ್ಯಾತ ಹಬ್ಬವನ್ನು ಉದ್ಘಾಟಿಸುತ್ತಿದ್ದೇವಲ್ಲ ಎಂಬ ಸಂಭ್ರಮ ನನ್ನನ್ನು ಮಾತು ತೊದಲುವಂತಾಗಿದೆ ಎಂದು ಮನದಾಳದಿಂದ ಹೇಳಿದರು.
ರಾಜ ಮಹಾರಾಜರ ಕಾಲ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ದಸರಾ ಹಬ್ಬವನ್ನು ಆಚರಿಸುತ್ತಿರುವುದು ಇದರ ಪ್ರಾಮುಖ್ಯತೆಯನ್ನ ತಿಳಿಸುತ್ತದೆ. ಐಕ್ಯತೆಯನ್ನು ಇದು ಬಿಂಬಿಸುತ್ತದೆ ಎಂದು ಹೇಳಿದರು.

Dasara--2017--02

ಕೆಲವು ಹಬ್ಬ ಹಾಗೂ ಆಚರಣೆಗಳಲ್ಲಿ ಆಯಾಯ ಮತ ಪಂಥದವರು ಭಾಗವಹಿಸಬಹುದು. ಆದರೆ, ದಸರೆ ಹಾಗಲ್ಲ. ಈ ಹಬ್ಬದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಹೀಗೆ ಯಾವುದೇ ಜಾತಿ, ಮತ, ಪಂಥ ಭೇದವಿಲ್ಲದೆ ಎಲ್ಲರೂ ಭಾಗವಹಿಸುತ್ತಾರೆ. ದೇಶವಿದೇಶಗಳಿಂದಲೂ ದಸರಾ ಹಬ್ಬಕ್ಕೆ ಆಗಮಿಸುತ್ತಾರೆ. ಇಂತಹ ಐಕ್ಯತೆಯನ್ನು ಸಾರುವಂತಹ ನಾಡ ಹಬ್ಬ ದಸರಾ ಉದ್ಘಾಟನೆಗೆ ನನ್ನನ್ನು ಆಯ್ಕೆ ಮಾಡಿರುವುದು ಯಾವುದೋ ಜನ್ಮದ ನಂಟಿರಬಹುದು ಎನಿಸುತ್ತಿದೆ. ನನಗೆ ಜನ್ಮಾಂತರದಲ್ಲಿ ನಂಬಿಕೆಯಿಲ್ಲ. ಆದರೂ ಹಾಗೆಯೇ ಅನಿಸುತ್ತಿದೆ ಎಂದು ತಿಳಿಸಿದರು.

ಭವ್ಯ ಪರಂಪರೆ, ಸಾಮರಸ್ಯವನ್ನು ಸಾರುವಂತಹ ದಸರಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಂತಹ ಹಿರಿಯರು, ಗಣ್ಯರ ಜತೆಗೆ ಭಾಗವಹಿಸುತ್ತಿರುವುದು ನನ್ನ ತಂದೆ-ತಾಯಿಗಳ ಆಶೀರ್ವಾದವಾಗಿದೆ ಎಂದು ಮನದುಂಬಿ ನುಡಿದರು. ಮೈಸೂರು ಜಿಲ್ಲಾಧಿಕಾರಿ ರಂದೀಪ್ ಅವರು ನನ್ನನ್ನು ಅತ್ಯಂತ ಆಧರ, ಅಭಿಮಾನದಿಂದ ಕರೆತಂದಿದ್ದಾರೆ. ಇದರಲ್ಲಿ ನನ್ನದೇನೂ ಇಲ್ಲ. ನಾನು ಕೇವಲ ಉತ್ಸವಮೂರ್ತಿ ಎಂದು ವಿನಯಪೂರ್ವಕವಾಗಿ ಭಾವುಕರಾಗಿ ಮಾತನಾಡಿದರು.

ಮೈಸೂರು ಅರಸರ ಕುಲದೇವತೆ, ಅಸುರ ನಿವಾರಿಣಿ ಚಾಮುಂಡಿ ದೇವಿ ಈ ಸ್ಥಳದಲ್ಲಿ ಮಹಿಷಾಸುರನನ್ನು ಕೊಂದಿದ್ದಾಳೆ ಎಂಬುದು ಐತಿಹ್ಯ. ಮಹಿಷಾಸುರನನ್ನು ಕೊಂದಿದ್ದಾಳೆ ಎಂಬುದು ಬೇರೆ ಚಾಮುಂಡಿದೇವಿ ಅಸುರರ ನಿವಾರಿಣಿ ಎಂದು ಹೇಳಬಹುದು. ಈ ಹಿನ್ನೆಲೆಯಲ್ಲಿ ಕಳೆದ 300 ವರ್ಷಗಳಿಂದಲೂ ಇಂತಹ ಉತ್ಸವ ನಡೆದುಕೊಂಡು ಬಂದಿದೆ. ಇದು ಚಾರಿತ್ರಿಕ ಉತ್ಸವವಾಗಿದೆ. ಇಂದು ವಿಶ್ವದಾದ್ಯಂತ ಜನರನ್ನು ಸೆಳೆಯುವಂತಹ ದಸರಾ ಹಬ್ಬವಾಗಿ ಆಚರಿಸಲ್ಪಡುತ್ತಿದೆ ಎಂದರು.

ಧರ್ಮನಿರಾಪೇಕ್ಷಿತವಾಗಿರುವ ದಸರಾದಲ್ಲಿ ಎಲ್ಲರೂ ಭಾಗವಹಿಸಿಸುತ್ತಿರುವುದೇ ಅತ್ಯಂತ ಹರ್ಷದಾಯಕ, ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಸಾರುವಂತಹ ಈ ದಸರಾ ನಮ್ಮೆಲ್ಲರಿಗೂ ಹೆಮ್ಮೆಯ ಪ್ರತೀಕವಾಗಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ಸಂಪ್ರದಾಯಬದ್ಧವಾಗಿ ನಾಡಹಬ್ಬವಾಗಿ ಆಚರಿಸುತ್ತಿರುವುದು ಸಂತಸದ ವಿಷಯ ಎಂದು ನಿಸ್ಸಾರ್ ಅಹಮ್ಮದ್ ಹೇಳಿದರು. ದ.ರಾ.ಬೇಂದ್ರೆಯವರ ಕವನವನ್ನು ವಾಚಿಸುವ ಮೂಲಕ ನಿಸಾರ್‍ಅಹಮ್ಮದ್ ಭಾಷಣ ಆರಂಭಿಸಿದ್ದು ವಿಶೇಷವಾಗಿತ್ತು.

ಇಂದಿನ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಜಿ.ಟಿ.ದೇವೇಗೌಡ ವಹಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಉಮಾಶ್ರೀ, ತನ್ವೀರ್‍ಸೇಠ್, ಪ್ರಮೋದ್ ಮಧ್ವರಾಜ್ , ರುದ್ರಪ್ಪಮಾನಪ್ಪ ಲಮಾಣಿ, ಯು.ಟಿ.ಖಾದರ್, ಸಂಸದರಾದ ಪ್ರತಾಪ್‍ಸಿಂಹ, ಧೃವನಾರಾಯಣ್, ಶಾಸಕರಾದ ಸಾ.ರಾ.ಮಹೇಶ್, ನರೇಂದ್ರಸ್ವಾಮಿ, ಕಳಲೆ ಕೇಶವಮೂರ್ತಿ, ನಿಗಮ ಮಂಡಳಿ ಅಧ್ಯಕ್ಷರು, ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿ ರಂದೀಪ್ ಸೇರಿದಂತೆ ಅನೇಕ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭದ ಆರಂಭದಲ್ಲಿ ಕ್ರೀಡಾ ಜ್ಯೋತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಹಸ್ತಾಂತರಿಸಿದರು.

ಚಾಮುಂಡಿ ಬೆಟ್ಟದಲ್ಲಿ ನಿತ್ಯೋತ್ಸವ ಕವಿಗೆ ಪೂರ್ಣಕುಂಭ ಸ್ವಾಗತ : 

ದಸರಾ ಉದ್ಘಾಟಕರಾದ ಕವಿ ನಿಸಾರ್ ಅಹಮ್ಮದ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಸೇರಿದಂತೆ ಎಲ್ಲ ಗಣ್ಯರನ್ನು ಮಹಿಷಾಸುರ ಪ್ರತಿಮೆ ಬಳಿಯಿಂದ ದೇವಾಲಯದವರೆಗೆ ಪೂರ್ಣಕುಂಭದೊಂದಿಗೆ ಜಾನಪದ ಕಲಾತಂಡಗಳೊಂದಿಗೆ ಅದ್ಧೂರಿಯಾಗಿ ಕರೆತರಲಾಯಿತು.
ದೇವಾಲಯದಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ವೇದಿಕೆಯ ಕಾರ್ಯಕ್ರಮ ಪ್ರಾರಂಭಿಸಲಾಯಿತು.

ನವರಾತ್ರಿ ಹಿನ್ನೆಲೆಯಲ್ಲಿ ಇಂದಿನಿಂದ ಚಾಮುಂಡೇಶ್ವರಿ ದೇವಿಗೆ 9 ದಿನಗಳವರೆಗೆ ವಿವಿಧ ರೀತಿಯ ಅಲಂಕಾರ ಮಾಡಲಾಗುತ್ತದೆ. 23ರಂದು ಕೌಮಾರಿ ಅಲಂಕಾರ, 24ರಂದು ವೈಷ್ಣವಿ ಅಲಂಕಾರ, 25ರಂದು ವರಾಹಿ ಅಲಂಕಾರ, 26ರಂದು ಇಂದ್ರಾಣಿ ಅಲಂಕಾರ, 27ರಂದು ಸರಸ್ವತಿ ಅಲಂಕಾರ, 28ರಂದು ದುರ್ಗಾ ಅಲಂಕಾರ, 29ರಂದು ಮಹಾಲಕ್ಷ್ಮಿ ಅಲಂಕಾರ, ನವರಾತ್ರಿಯ ಕೊನೆಯ ದಿನವಾದ ಸೆ.30ರಂದು ಅಶ್ವಾರೋಹಣ ಅಲಂಕಾರ ಮಾಡಲಾಗುತ್ತದೆ.
ಇಡೀ ಚಾಮುಂಡಿ ಬೆಟ್ಟದ ಮೇಲ್ಭಾಗ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ದೇವಾಲಯ ತಳಿರು ತೋರಣ, ಬಣ್ಣ ಬಣ್ಣದ ಹೂವುಗಳಿಂದ ಎಲ್ಲರಿಗೂ ಮುದ ನೀಡುತ್ತಿದೆ. ಮಹಿಷಾಸುರ ಪ್ರತಿಮೆಯಿಂದ ದೇವಾಲಯದ ಉದ್ದಕ್ಕೂ ಬಣ್ಣಬಣ್ಣದ ರಂಗೋಲಿ ಬಿಡಿಸಲಾಗಿದೆ.  ಬೆಳಗ್ಗೆ ಮೋಡ ಕವಿದ ವಾತಾವರಣ ಇತ್ತು. ತುಂತುರು ಮಳೆ ಬರುತ್ತಿದ್ದರಿಂದ ಒಂದು ರೀತಿ ಮಂಜಿನ ನಗರಿಯಂತೆ ಮೈಸೂರು ಚಾಮುಂಡಿ ಬೆಟ್ಟದಿಂದ ಕಾಣುತ್ತಿತ್ತು.

Facebook Comments

Sri Raghav

Admin