ನಿದ್ರೆ ಮಾಡದ್ದಕ್ಕೆ ಮಗುವಿಗೆ ಬರೆ ಹಾಕಿದ ಅಂಗನವಾಡಿ ಸಹಾಯಕಿ..!

ಈ ಸುದ್ದಿಯನ್ನು ಶೇರ್ ಮಾಡಿ

Beluru--01

ಬೇಲೂರು, ಮೇ 11- ಮಗುವೊಂದು ನಿದ್ದೆ ಮಾಡಲಿಲ್ಲ ಎಂದು ಅಂಗನವಾಡಿ ಸಹಾಯಕಿಯೊಬ್ಬರು ಸಾಂಬರ್ ಸೌಟ್‍ನಿಂದ ಬರೆ ಹಾಕಿರುವ ಘಟನೆ ಬೇಲೂರು ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಜೈಭೀಮ್ ನಗರದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಊಟ ಬಡಿಸಿದ ನಂತರ ಮಲಗಿಸಿದ್ದಾರೆ. ಆದರೆ ಗಾನವಿ ಎಂಬ ಮೂರು ವರ್ಷದ ಮಗು ನಿದ್ದೆ ಮಾಡದೆ ಅಳುತಿತ್ತು. ಮಗು ಅಳುತ್ತಿರುವುದನ್ನು ಸಹಿಸದ ಅಂಗನವಾಡಿ ಕೇಂದ್ರದ ಸಹಾಯಕಿ ಇಂದ್ರಮ್ಮ ಮಲಗುವಂತೆ ಕೈಯಿಂದ ಹೊಡೆದು ನಂತರ ಸಾಂಬರ್ ಸೌಟನ್ನು ಬಿಸಿ ಮಾಡಿ ಮಗುವಿನ ಗಲ್ಲ ಹಾಗೂ ಕೆನ್ನೆಗೆ ಬರೆ ಬರುವಂತೆ ಸುಟ್ಟಿದ್ದಾರೆ.

ಇದರಿಂದ ಮಗು ಹೆದರಿ ಸುಮ್ಮನೆ ಮಲಗಿದೆ. ನಂತರ ಮಗುವು ಅಂಗನವಾಡಿ ಕೇಂದ್ರದಿಂದ ಮನೆಗೆ ಹೋದ ಸಂದರ್ಭದಲ್ಲಿ ತಾಯಿ ಪಾರ್ವತಿ ಮಗುವಿನ ಗಾಯಗಳನ್ನು ನೋಡಿ ತಮ್ಮ ಸಹೋದರ ಶಿವಪ್ಪನಿಗೆ ತಿಳಿಸಿದ್ದಾರೆ. ಅಷ್ಟರಲ್ಲಿ ಸಹಾಯಕಿ ಮನೆಗೆ ತೆರಳಿದ್ದರು. ಮಗುವಿನ ಪೋಷಕರು ಹಾಗೂ ಇತರೆ ಮಕ್ಕಳ ಪೋಷಕರು ಅಂಗನವಾಡಿ ಕೇಂದ್ರಕ್ಕೆ ಬಂದು ಮಗುವಿಗೆ ಬರೆ ಹಾಕಿರುವ ಬಗ್ಗೆ ವಿಚಾರಿಸಿದಾಗ ಅಂಗನವಾಡಿ ಸಹಾಯಕಿ ಉಡಾಫೆಯಿಂದ ವರ್ತಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪೋಷಕರು ಅಂಗನವಾಡಿ ಸಹಾಯಕಿಯರನ್ನು ತರಾಟೆಗೆ ತೆಗೆದುಕೊಂಡು ನಂತರ ಬೇಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ದೂರು ಸ್ವೀಕರಿಸಿ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ವೇಳೆ ಸಹಾಯಕಿಯ ವಿರುದ್ದ ಪೋಷಕರು ಆಕ್ರೋಶ ವ್ಯಕ್ತಪಡಿಸಿ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಸದಸ್ಯ ಮಂಜುನಾಥ್, ಇಲ್ಲಿನ ಅಂಗನವಾಡಿ ಕೇಂದ್ರದ ಶಿಕ್ಷಕಿ ಹಾಗೂ ಸಹಾಯಕಿಯ ವಿರುದ್ದ ಸಾಕಷ್ಟು ತಿಂಗಳ ಹಿಂದೆಯೇ ದೂರು ನೀಡಲಾಗಿತ್ತು. ಅಂದು ಅಧಿಕಾರಿಗಳು ಇವರ ವಿರುದ್ದ ಕ್ರಮ ಕೈಗೊಂಡಿದ್ದರೆ ಇಂತಹ ಘಟನೆ ಸಂಭವಿಸುತ್ತಿರಲಿಲ್ಲ. ತಕ್ಷಣವೇ ಇವರುಗಳ ವಿರುದ್ದ ಕ್ರಮ ಕೈಗೊಂಡು ಮಗುವಿನ ಪೋಷಕರಿಗೆ ನ್ಯಾಯ ಕೊಡಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪೋಷಕರೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಪೋಷಕರಾದ ಚಂದ್ರಮ್ಮ, ದ್ರಾಕ್ಷಾಹಿಣಿ, ಶೇಷಮ್ಮ, ಸಗನಮ್ಮ, ಶೇಕರ್, ವಿಶ್ವ, ಗುರು, ಮನು ಇನ್ನಿತರರಿದ್ದರು.

Facebook Comments

Sri Raghav

Admin